ಬಾಕ್ಸರ್ ಲವ್ಲಿನಾ ಒಲಂಪಿಕ್ಸ್ ಪದಕ ತಮ್ಮ ಊರಿಗೆ ರಸ್ತೆ, ನೀರು ತರುವ ವಿಶ್ವಾಸದಲ್ಲಿ ಗ್ರಾಮಸ್ಥರು!

ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಟೋಕಿಯೊ ಒಲಂಪಿಕ್ಸ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಚೀನಾನ ತೈಪೆಯ ಚಿನ್ ಚೆನ್ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದಾರೆ.
ಪೋಷಕರೊಂದಿಗೆ ಲವ್ಲಿನಾ
ಪೋಷಕರೊಂದಿಗೆ ಲವ್ಲಿನಾ

ಗುವಾಹಟಿ: ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಟೋಕಿಯೊ ಒಲಂಪಿಕ್ಸ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಚೀನಾನ ತೈಪೆಯ ಚಿನ್ ಚೆನ್ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದಾರೆ. 

ಇದು ಗುವಾಹಟಿಯಿಂದ ಪೂರ್ವಕ್ಕೆ 320 ಕಿಮೀ ದೂರದಲ್ಲಿರುವ ಅಸ್ಸಾಂನ ಗೋಲಘಾಟ್ ಜಿಲ್ಲೆಯ ಲವ್ಲಿನಾ ಗ್ರಾಮವಾದ ಬಾರೋ ಮುಖಿಯಾದಲ್ಲಿ 2,000 ನಿವಾಸಿಗಳಿದ್ದಾರೆ. ಲವ್ಲಿನಾ ಅವರ ಪದಕವು ಪರಿವರ್ತನೆಯ ಭರವಸೆ ಹುಟ್ಟುಹಾಕುತ್ತಿದೆ. ಇದು ಅಂತಿಮವಾಗಿ ಸರ್ಕಾರದ ನಿರ್ಲಕ್ಷ್ಯವನ್ನು ಬುಡಮೇಲು ಮಾಡಬಹುದು ಮತ್ತು ರಸ್ತೆ ಹಾಗೂ ನೀರು ಸರಬರಾಜಿನಂತಹ ಮೂಲಭೂತ ಸೌಲಭ್ಯಗಳನ್ನು ಗ್ರಾಮಕ್ಕೆ ತರಬಹುದು ಎಂಬ ವಿಶ್ವಾಸದಲ್ಲಿ ಗ್ರಾಮಸ್ಥರು ಇದ್ದಾರೆ.

ಗ್ರಾಮಕ್ಕೆ ಯೋಗ್ಯವಾದ ಕಾಂಕ್ರೀಟ್ ರಸ್ತೆ ಇಲ್ಲ. ಮಣ್ಣು ಮತ್ತು ಕಲ್ಲಿನ ರಸ್ತೆ ಮೂಲಕ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. 2016ರಲ್ಲಿ ಕೊನೆಯ ಬಾರಿಗೆ ರಸ್ತೆ ನಿರ್ಮಿಸುವ ಪ್ರಯತ್ನ ಮಾಡಲಾಯಿತು, ಆಗಿನ ಮುಖ್ಯಮಂತ್ರಿ ಸರಬಂದ ಸೋನೋವಾಲ್ ಅವರು ಬರೋ ಮುಖಿಯಾಗೆ ರಸ್ತೆ ನಿರ್ಮಿಸುವ ಭರವಸೆ ನೀಡಿದರು ಮತ್ತು ಅದರಂತೆ 12 ಕಿಲೋಮೀಟರ್ ಉದ್ದದ ರಸ್ತೆ ಪೈಕಿ ಕೇವಲ 100 ಮೀಟರ್ ಮಾತ್ರ ನಿರ್ಮಿಸಿ, ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಅದನ್ನು ಇದುವರೆಗೂ ಪೂರ್ಣಗೊಳಿಸಲಾಗಿಲ್ಲ. ಹೀಗಾಗಿ ಗ್ರಾಮಸ್ಥರು ಆ ಕೆಟ್ಟ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಸರಿಯಾದ ರಸ್ತೆ ಇಲ್ಲದೆ ಗಂಭೀರ ಅನಾರೋಗ್ಯ ಪೀಡಿತ ರೋಗಿಗಳು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಈ ಗ್ರಾಮಕ್ಕೆ ಕೊಳವೆ ನೀರು ಸರಬರಾಜು ಇಲ್ಲ. ನೀರಿಗಾಗಿ ಟ್ಯೂಬ್‌ವೆಲ್‌ಗಳು ಮತ್ತು ಕೊಳಗಳನ್ನು ಅವಲಂಬಿಸಿರುತ್ತದೆ. ಬಾರೋ ಮುಖಿಯಾದಲ್ಲಿ ಆರೋಗ್ಯ ಸೌಲಭ್ಯಗಳು ಸಹ ಇಲ್ಲ. ಇಲ್ಲಿಂದ ಮೂರು ಕಿ.ಮೀ. ದೂರದ ಭರತಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಆದರೆ ಇಲ್ಲಿ ಬೆಡ್ ವ್ಯವಸ್ಥೆ ಇಲ್ಲ. ಹೀಗಾಗಿ ಹಳ್ಳಿಯಲ್ಲಿ ಯಾರಾದರೂ ಗಂಭೀರವಾದರೆ, ಅವರು  45 ಕಿ.ಮೀ.ದೂರದ ಗೋಲಘಾಟ್‌ನ ಜಿಲ್ಲಾ ಕೇಂದ್ರಕ್ಕೆ ತೆರಳಬೇಕು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

"ಲೊವ್ಲಿನಾ ಅವರು ಒಲಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಗೆಲ್ಲಬೇಕೆಂದು ನಾವು ಪ್ರಾರ್ಥಿಸುತ್ತೇವೆ, ಏಕೆಂದರೆ ಅವರ ಯಶಸ್ಸು ನಮ್ಮ ಹಳ್ಳಿಯ ಭವಿಷ್ಯವನ್ನು ಬದಲಾಯಿಸಬಹುದು. ಮಣಿಪುರದ ಮೇರಿ ಕೋಮ್ ಪದಕ ಗೆದ್ದ ನಂತರ ಅವರ ಹಳ್ಳಿಯು ಎಲ್ಲಾ ರಂಗಗಳಲ್ಲಿಯೂ ಅಭಿವೃದ್ಧಿಗೊಂಡಿದೆ”ಎಂದು ಲೊವ್ಲಿನಾ ಅವರ ಕುಟುಂಬ ಸ್ನೇಹಿತ ಹೊರೆನ್ ಗೊಗೊಯ್ ಹೇಳಿದ್ದಾರೆ.

"ಲವ್ಲಿನಾ ಒಲಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ನಾವು ಭಾವಿಸಿದ್ದೇವೆ. ನಾವು ಗ್ರಾಮದಲ್ಲಿ ಕೆಲವು ಮೂಲಸೌಕರ್ಯ ಅಭಿವೃದ್ಧಿ ನೋಡಲು ಬಹಳ ಸಮಯದಿಂದ ಕಾಯುತ್ತಿದ್ದೆವು ಎಂದು ಮತ್ತೊಬ್ಬ ಗ್ರಾಮಸ್ಥ ಹೇಮಂತ ಮಹಾಂತ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com