ಪ್ಯಾರಾಲಿಂಪಿಕ್ಸ್: ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಗೆ ಬೆಳ್ಳಿ ಪದಕ

ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್ ಎಲ್ 4 ವಿಭಾಗದಲ್ಲಿ ಭಾರತದ ಸುಹಾಸ್ ಎಲ್ ಯತಿರಾಜು ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದಾರೆ. ಇಂದು ಮುಂಜಾನೆ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ನ ಲುಕಾಸ್ ಮಜೂರ್ ವಿರುದ್ಧ ಸೋತಿದ್ದಾರೆ.
ಸುಹಾಸ್ ಯತಿರಾಜು
ಸುಹಾಸ್ ಯತಿರಾಜು

ಟೋಕಿಯೊ: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್ ಎಲ್ 4 ವಿಭಾಗದಲ್ಲಿ ಭಾರತದ ಸುಹಾಸ್ ಎಲ್ ಯತಿರಾಜು ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದಾರೆ. ಇಂದು ಮುಂಜಾನೆ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ನ ಲುಕಾಸ್ ಮಜೂರ್ ವಿರುದ್ಧ ಸೋತಿದ್ದಾರೆ.

ಸುಹಾಸ್ ಯತಿರಾಜು ಅವರು ನೊಯ್ಡಾದ ಜಿಲ್ಲಾಧಿಕಾರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ಯಾರಾಲಿಂಪಿಕ್ಸ್ ನಲ್ಲಿ ತಮ್ಮ ಪತಿ ಬೆಳ್ಳಿ ಪದಕ ಗೆದ್ದಿದ್ದಕ್ಕೆ ಅವರ ಪತ್ನಿ ರೀತು ಸುಹಾಸ್ ಹರ್ಷ ವ್ಯಕ್ತಪಡಿಸಿದ್ದಾರೆ. ಪಂದ್ಯ ಉತ್ತಮವಾಗಿ ಸಾಗಿತ್ತು. ಸುಹಾಸ್ ಯತಿರಾಜ್ ಅವರು ತುಂಬಾ ಉತ್ತಮವಾಗಿ ಆಡಿದ್ದಾರೆ, ನನಗೆ ಅವರ ಬಗ್ಗೆ ಹೆಮ್ಮೆಯೆನಿಸುತ್ತದೆ. ಕಳೆದ ಆರು ವರ್ಷಗಳ ಕಠಿಣ ಪರಿಶ್ರಮದ ಫಲ ಎಂದು ಗಜಿಯಾಬಾದ್ ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ರೀತು ಪ್ರತಿಕ್ರಿಯಿಸಿದ್ದಾರೆ.

ಇನ್ನು ಸುಹಾಸ್ ಯತಿರಾಜ್ ಅವರ ಗೆಲುವಿಗೆ ರಾಷ್ಟ್ರಪತಿ, ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಶುಭಾಶಯಗಳು ಹರಿದುಬರುತ್ತಿವೆ. ತಮ್ಮ ಅದ್ವಿತೀಯ ಕ್ರೀಡಾ ಸಾಧನೆ ಮೂಲಕ ನಮ್ಮ ಇಡೀ ದೇಶದ ಕಲ್ಪನೆಯನ್ನು ಸುಹಾಸ್ ಯತಿರಾಜು ಹಿಡಿದಿಟ್ಟಿದ್ದಾರೆ.ಪ್ಯಾರಾಲಿಂಪಿಕ್ ನಲ್ಲಿ ಬೆಳ್ಳಿ ಗೆದ್ದ ಅವರಿಗೆ ಅಭಿನಂದನೆಗಳು ಎಂದು ಪ್ರಧಾನಿ ಹೇಳಿದ್ದಾರೆ.

ಈ ಮೂಲಕ ಭಾರತ ಇಲ್ಲಿಯವರೆಗೆ ಪ್ಯಾರಾಲಿಂಪಿಕ್ಸ್ ನಲ್ಲಿ 18 ಪದಕಗಳನ್ನು ಗೆದ್ದುಕೊಂಡಿದೆ. 

ಕನ್ನಡಿಗ ಸುಹಾಸ್ ಯತಿರಾಜು: ಇಂದು ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಸುಹಾಸ್ ಯತಿರಾಜು ಅವರು ಮೂಲತಃ ಕನ್ನಡಿಗರು. ಕರ್ನಾಟಕ ಮೂಲದ ಐಎಎಸ್ ಅಧಿಕಾರಿ. ನಿನ್ನೆ ನಡೆದಿದ್ದ ಸೆಮಿ ಫೈನಲ್ ನಲ್ಲಿ ಸುಹಾಸ್ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ಧ 21-9, 21-15ರ ಅಂತರದಲ್ಲಿ ಗೆದ್ದಿದ್ದರು. ಸುಹಾಸ್ ಹಾಸನದಲ್ಲಿ ಜನಿಸಿದ್ದು, ಇಂಜಿನಿಯರಿಂಗ್ ಪದವಿ ಗಳಿಸಿದ್ದಾರೆ. ಈ ಹಿಂದೆ ಪ್ರಯಾಗ್ ರಾಜ್, ಆಗ್ರಾ, ಅಝಮ್ ಗಢ, ಜೌನ್ ಪುರ್, ಸೋನ್ ಭದ್ರಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 

ಸಿಎಂ ಬೊಮ್ಮಾಯಿ ಸೇರಿ ಹಲವರ ಅಭಿನಂದನೆ: ಕನ್ನಡಿಗರಾಗಿ ಆಡಳಿತ ಸೇವೆ ಮತ್ತು ಕ್ರೀಡೆ ಎರಡೂ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮೆರೆದ ಸುಹಾಸ್ ಯತಿರಾಜ್ ಅವರು ಕನ್ನಡಿಗರು ಎಂಬುದು ನಮಗೆ ಮತ್ತಷ್ಟು ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com