ಟೋಕಿಯೊ ಒಲಿಂಪಿಕ್ ಪ್ಯಾರಾ ಶಟ್ಲರ್, ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಈಗ ಒಬ್ಬ ಪದಕ ವಿಜೇತ ಕೂಡ!
ನಿನ್ನೆ ಭಾನುವಾರ ಆ ತಾಯಿಯ ಹೃದಯ ಸಂಭ್ರಮದಿಂದ ತೇಲಾಡುತ್ತಿತ್ತು. ಕಾರಣ ಆಕೆಯ ಮಗ ಪ್ಯಾರಾ ಶಟ್ಲರ್ ಸುಹಾಸ್ ಯತಿರಾಜ್ ಪುರುಷರ ಸಿಂಗಲ್ಸ್ ಎಸ್ ಎಲ್ 4 ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದಿದ್ದರು.
Published: 06th September 2021 12:39 PM | Last Updated: 07th September 2021 08:11 PM | A+A A-

ಸುಹಾಸ್ ಯತಿರಾಜ್
ಶಿವಮೊಗ್ಗ: ನಿನ್ನೆ ಭಾನುವಾರ ಆ ತಾಯಿಯ ಹೃದಯ ಸಂಭ್ರಮದಿಂದ ತೇಲಾಡುತ್ತಿತ್ತು. ಕಾರಣ ಆಕೆಯ ಮಗ ಪ್ಯಾರಾ ಶಟ್ಲರ್ ಸುಹಾಸ್ ಯತಿರಾಜ್ ಪುರುಷರ ಸಿಂಗಲ್ಸ್ ಎಸ್ ಎಲ್ 4 ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದಿದ್ದರು. ಅಲ್ಲಿ ಪದಕ ಘೋಷಣೆಯಾಗಿ ಹಂಚಿಕೆಯಾದ ನಂತರ ಇತ್ತ ಪುತ್ರನಿಗೆ ಕರೆ ಮಾಡಿ ಖುಷಿಯಿಂದ ಹರಸಿದರು ತಾಯಿ. ಆಗ ಮಗ ತನ್ನ ತಾಯಿಯಲ್ಲಿ ಕೇಳಿದ್ದು, ಅಮ್ಮ ನಾನು ಹೇಗೆ ಆಡಿದೆ, ಚಿನ್ನದ ಪದಕ ಬರಬಹುದಿತ್ತೇನೋ? ಎಂದು.
ಪಾದದ ಕೀಲಿನಲ್ಲಿ ನ್ಯೂನತೆಯಿರುವ ಕಾರಣ ಪ್ಯಾರಾಲಿಂಪಿಕ್ ಆಟಗಾರನಾಗಿರುವ ಸುಹಾಸ್ ಯತಿರಾಜ್ ಮನೆಯಲ್ಲಿ ಎಲ್ಲರಿಗೂ ಅವರ ಸಾಧನೆ ಬಗ್ಗೆ ಹೆಮ್ಮೆ, ಸಂತೋಷವಿದೆ. ಈ ಸುಹಾಸ್ ಕರ್ನಾಟಕ ಮೂಲದವರು ಎಂಬುದು ಮತ್ತೊಂದು ಹೆಮ್ಮೆಯ ವಿಷಯ .
ನಮಗೆಲ್ಲರಿಗೂ ಆತನ ಸಾಧನೆ ಸಂತೋಷ ತಂದಿದೆ. ಪ್ಯಾರಾಲಿಂಪಿಕ್ ನಲ್ಲಿ ಆಡುವ ಅವನ ಕನಸು ನನಸಾಗಿದೆ. ಆತ ಚಿನ್ನ ಗೆಲ್ಲುತ್ತಾನೆ ಎಂದು ಭಾವಿಸಿದ್ದೆವು. ಆದರೂ ಬೆಳ್ಳಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾನೆ. ಪ್ರಧಾನಿ ಮೋದಿಯವರು ಆತನ ಜೊತೆ ಮಾತನಾಡಿರುವುದು ಇನ್ನಷ್ಟು ಖುಷಿ ನೀಡಿತು ಎಂದು ಸುಹಾಸ್ ಅವರ ತಾಯಿ ಜಯಶ್ರೀ ಪ್ರತಿಕ್ರಿಯಿಸಿದ್ದಾರೆ.
ಸುಹಾಸ್ ಪ್ರಸ್ತುತ ನೊಯ್ಡಾ ಜಿಲ್ಲೆಯ ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿದ್ದಾರೆ. ಐಎಎಸ್ ಅಧಿಕಾರಿಯಾಗಿ ಸೇವೆ ಮತ್ತು ನೊಯ್ಡಾದಲ್ಲಿ ಬ್ಯಾಡ್ಮಿಂಟನ್ ಎರಡಕ್ಕೂ ಸಮಯ ಹೊಂದಿಸಿಕೊಳ್ಳುವುದು ಸುಹಾಸ್ ಅವರ ವಿಶೇಷತೆ. ಪ್ರಸ್ತುತ ದೇಶದಲ್ಲಿ ಕೊರೋನಾ ಇರುವುದರಿಂದ ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಕೆಲಸ ಇರುತ್ತದೆ.ಹೀಗಿರುವಾಗ ಕೆಲಸದ ಮಧ್ಯೆ ಬ್ಯಾಡ್ಮಿಂಟನ್ ಗೆ ಸಮಯ ಹೊಂದಿಸಿಕೊಂಡು ಆಡುವುದು ಅವರಿಗೆ ಸ್ವಲ್ಪ ಕಷ್ಟವಾದರೂ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಹಗಲು ಹೊತ್ತಿನಲ್ಲಿ ಕಚೇರಿ ಕೆಲಸ ಮಾಡಿ ಮುಗಿಸಿ ರಾತ್ರಿ ಹೊತ್ತು ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಆಟವಾಡುತ್ತಾರಂತೆ.
ಸುಹಾಸ್ ಅವರು ಬ್ಯಾಡ್ಮಿಂಟನ್ ನ್ನು ವೃತ್ತಿಯಾಗಿ ತೆಗೆದುಕೊಂಡಿದ್ದು 2016ರಲ್ಲಿ. ಅದೇ ವರ್ಷ ಚೀನಾದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗಳಿಸಿದ್ದರು. ಅಲ್ಲಿಂದ ನಂತರ ಅವರು ತಮ್ಮ ಆಟದಲ್ಲಿ ಮತ್ತಷ್ಟು ಸಾಧಿಸುತ್ತಾ ಹೋಗಿ ಇದೀಗ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ತಂದಿದ್ದಾರೆ.
ಸುಹಾಸ್ ಆದರ್ಶ ವಿದ್ಯಾರ್ಥಿ: ಚಿಕ್ಕ ವಿದ್ಯಾರ್ಥಿಯಿದ್ದಾಗಲೇ ಸುಹಾಸ್ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. 2007ರಲ್ಲಿ ಬೆಂಗಳೂರಿನಲ್ಲಿ ಕೆಲಸವೊಂದಕ್ಕೆ ಸೇರಿ ನಂತರ ಸಿವಿಲ್ ಸರ್ವಿಸ್ ಪರೀಕ್ಷೆ ಬರೆದರು. ಹಾಸನದಲ್ಲಿ ಜನಿಸಿದ ಸುಹಾಸ್ ಬಹುತೇಕ ಶಿಕ್ಷಣ ಪೂರೈಸಿದ್ದು ಶಿವಮೊಗ್ಗದಲ್ಲಿ, ಅಲ್ಲಿನ ಡಿವಿಎಸ್ ಇಂಡಿಪೆಂಡೆಂಟ್ ಪಿಯು ಕಾಲೇಜ್ ನಲ್ಲಿ.
ಸುರತ್ಕಲ್ ನ ಎನ್ ಐಟಿಕೆಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಜಿನಿಯರಿಂಗ್ ಮುಗಿಸಿದ ಸುಹಾಸ್ ಅವರ ಬಗ್ಗೆ ಶಿವಮೊಗ್ಗ ಡಿವಿಎಸ್ ಕಾಲೇಜಿನ ಉಪನ್ಯಾಸಕ ಹೆಚ್ ಸಿ ಉಮೇಶ್ ಬಹಳ ಖುಷಿಯಿಂದ ಮಾತನಾಡುತ್ತಾರೆ, ಅವರೊಬ್ಬ ಆದರ್ಶ ವಿದ್ಯಾರ್ಥಿಯಾಗಿದ್ದರು. ಎಂಜಿನಿಯರಿಂಗ್ ಮುಗಿಸಿ ಯುಪಿಎಸ್ ಸಿ ಪರೀಕ್ಷೆ ಬರೆದರು, ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದರು ಎನ್ನುತ್ತಾರೆ.
ಜೀವನದಲ್ಲಿ ಇಷ್ಟು ಎತ್ತರಕ್ಕೆ ಏರಿದರೂ ತಾವು ಹತ್ತಿದ ಏಣಿಯನ್ನು ಸುಹಾಸ್ ಮರೆತಿಲ್ಲ, ಕಳೆದ ವರ್ಷ ಪಿಯುಸಿ ಓದಿದ ಕಾಲೇಜಿಗೆ ಪತ್ನಿ ಮತ್ತು ಮಗುವನ್ನು ಕರೆದುಕೊಂಡು ಬಂದಿದ್ದರಂತೆ. ನಾಗರಿಕ ಸೇವಾ ಪರೀಕ್ಷೆ ಮತ್ತು ಕ್ರೀಡೆ ಎರಡನ್ನೂ ಅವರು ಗಂಭೀರವಾಗಿ ತೆಗೆದುಕೊಂಡಿದ್ದರು ಎನ್ನುತ್ತಾರೆ.