ಮುರಿದು ಬಿತ್ತು 'ಮೂಗುತಿ ಸುಂದರಿ'ಯ 12 ವರ್ಷಗಳ ದಾಂಪತ್ಯ: ಸಾನಿಯಾ ಮಿರ್ಜಾ ಸಂಸಾರದಲ್ಲಿ ಹುಳಿ ಹಿಂಡಿದ ಆಯೆಷಾ ಒಮರ್ ಯಾರು?

: ಯಶಸ್ವಿ ಕ್ರೀಡಾ ಜೋಡಿಗಳಲ್ಲಿ ಒಂದಾಗಿದ್ದ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ತಮ್ಮ 12 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಪತಿ ಮತ್ತು ಮಗನೊಂದಿಗೆ ಸಾನಿಯಾ ಮಿರ್ಜಾ
ಪತಿ ಮತ್ತು ಮಗನೊಂದಿಗೆ ಸಾನಿಯಾ ಮಿರ್ಜಾ
Updated on

ಮುಂಬೈ: ಯಶಸ್ವಿ ಕ್ರೀಡಾ ಜೋಡಿಗಳಲ್ಲಿ ಒಂದಾಗಿದ್ದ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ತಮ್ಮ 12 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕಳೆದ ಕೆಲವು ದಿನಗಳಿಂದ ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವೈಯಕ್ತಿಕ ಬದುಕಿನಲ್ಲಿ ಉಂಟಾಗಿರುವ ಬಿರುಕಿನ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಈಗ ಈ ವದಂತಿಗೆ ಅಧಿಕೃತ ಮುದ್ರೆ ಬಿದ್ದಿದ್ದು, ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವಿಚ್ಛೇದನ ಪಡೆಯುವುದು ಖಚಿತ ಎಂದು ವರದಿಯಾಗಿದೆ.

ಶೋಯೆಬ್ ಮಲಿಕ್ ಸ್ನೇಹಿತರೊಬ್ಬರು ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದು, ಕ್ರೀಡಾ ಲೋಕದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ದಂಪತಿಗಳು ಈಗಾಗಲೇ ಬಹಳ ದಿನದಿಂದ ಬೇರೆ ಬೇರೆಯಾಗಿ ವಾಸಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಎಲ್ಲಾ ಕಾನೂನು ಸಮಸ್ಯೆಗಳನ್ನು ಬಗೆ ಹರಿಸಿಕೊಂಡ ನಂತರ ವಿಚ್ಛೇದನದ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಸಾನಿಯಾ ಮತ್ತು ಶೋಯೆಬ್ ಅವರ ಸಂಬಂಧದಲ್ಲಿ ಕೆಲವು ತಿಂಗಳುಗಳಿಂದ ಬಿರುಕು ಇತ್ತು. ಇದರಿಂದಾಗಿ ಈ ಜೋಡಿಗಳು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಆದರೆ ಈ ಇಬ್ಬರೂ ಸಹ ಈ ವದಂತಿಯ ಬಗ್ಗೆ ಅಧಿಕೃತವಾಗಿ ಏನನ್ನು ಹೇಳಿಲ್ಲ. ಹೀಗಾಗಿ ಶೀಘ್ರದಲ್ಲೇ ಇಬ್ಬರೂ ಕಾನೂನು ವಿಷಯಗಳನ್ನು ಪೂರ್ಣಗೊಳಿಸಿದ ನಂತರ ಬೇರೆಯಾಗಲಿದ್ದಾರೆ ಎಂದು ವರದಿಯಾಗಿದೆ.

ಆಯೆಷಾ ಒಮರ್ ಪಾಕಿಸ್ತಾನ ಮೂಲದ ಮಾಡೆಲ್, ನಟಿ ಹಾಗೂ ಯೂಟ್ಯೂಬರ್ ಆಗಿ ಪ್ರಖ್ಯಾತಿ ಗಳಿಸಿದ್ದಾರೆ. ಆಯೆಷಾ ಪಾಕಿಸ್ತಾನದ ಖ್ಯಾತ ಸಿನಿಮಾಗಳಾದ 'ಕರಾಚಿ ಸೆ ಲಾಹೋರ್'(2015), ಯಲ್ಘಾರ್(2017), ಕಾಫ್ ಕಂಗನಾ(2019) ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕೆಲ ಮೂಲಗಳ ಪ್ರಕಾರ, ಆಯೆಷಾ ಒಮರ್ ಗರಿಷ್ಠ ಸಂಭಾವನೆ ಪಡೆಯುವ ನಟಿಯಾಗಿದ್ದು, ಯೂಟ್ಯೂಬ್‌ನಲ್ಲೂ ಸಾಕಷ್ಟು ಅಭಿಮಾನಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.  ಆಯೆಷಾ ಒಮರ್, ತಾರಾ ಕ್ರಿಕೆಟಿಗ ಶೋಯೆಬ್ ಮಲಿಕ್ ಜತೆ ಬೋಲ್ಡ್ ಆಗಿ ಫೋಟೊ ಕ್ಲಿಕ್ಕಿಸಿಕೊಂಡು ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದರು. ಇದೇ ಈಗ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಾಂಪತ್ಯ ಜೀವನ ಬೇರ್ಪಡಲು ಕಾರಣ ಎನ್ನಲಾಗುತ್ತಿದೆ.

ಸಾನಿಯಾ ಹಾಗೂ ಮಲಿಕ್ 2010ರ ಎಪ್ರಿಲ್ 12 ರಂದು ಹೈದರಾಬಾದ್‍ನಲ್ಲಿ ಮುಸ್ಲಿಂ ಪದ್ಧತಿಯಂತೆ ತಾಜ್ ಕೃಷ್ಣ ಹೋಟೆಲ್‍ನಲ್ಲಿ ವಿವಾಹವಾಗಿದ್ದರು. ಆ ಬಳಿಕ ಮಲಿಕ್ ಭಾರತದ ಅಳಿಯ ಎಂದೇ ಕರೆಸಿಕೊಳ್ಳುತ್ತಿದ್ದರು. ಮೂಗುತಿ ಸುಂದರಿಯನ್ನು ವರಿಸಿ ಸಂತೋಷವಾಗಿಯೇ ಇದ್ದ ಮಲಿಕ್ ಇದೀಗ ಬೇರೆಯಾಗಲು ಕಾರಣ ಪಾಕಿಸ್ತಾನದ ನಟಿ ಎಂಬ ಅನುಮಾನ ಎದ್ದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com