ಡೈಮಂಡ್ ಲೀಗ್: ಸತತ ಎರಡನೇ ಬಾರಿಗೆ ಚಿನ್ನ ಗೆದ್ದ ನೀರಜ್ ಚೋಪ್ರಾ

ಟೋಕಿಯೋ ಒಲಿಂಪಿಕ್ ಚ್ಯಾಂಪಿಯನ್ ನೀರಜ್ ಚೋಪ್ರಾ ತಮ್ಮ ಗೆಲುವಿನ ಪ್ರಯಾಣ ಮುಂದುವರೆಸಿದ್ದು, ಇದೀಗ ಲುಸ್ಸಾನ್ ಡೈಮಂಡ್‌ ಲೀಗ್‌ನಲ್ಲಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೀರಜ್ ಚೋಪ್ರಾ
ನೀರಜ್ ಚೋಪ್ರಾ

ನವದೆಹಲಿ: ಟೋಕಿಯೋ ಒಲಿಂಪಿಕ್ ಚ್ಯಾಂಪಿಯನ್ ನೀರಜ್ ಚೋಪ್ರಾ ತಮ್ಮ ಗೆಲುವಿನ ಪ್ರಯಾಣ ಮುಂದುವರೆಸಿದ್ದು, ಇದೀಗ ಲುಸ್ಸಾನ್ ಡೈಮಂಡ್‌ ಲೀಗ್‌ನಲ್ಲಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬರೋಬ್ಬರಿ ಒಂದು ತಿಂಗಳ ಬಳಿಕ ಸಂಪೂರ್ಣ ಗಾಯದಿಂದ ಚೇತರಿಸಿಕೊಂಡು ಜಾವೆಲಿನ್ ಸ್ಪರ್ಧೆಗೆ ಮರಳಿರುವ ಚಿನ್ನದ ಹುಡುಗ ನೀರಜ್ ಚೋಪ್ರಾ, ಶುಕ್ರವಾರ ತಡರಾತ್ರಿ ನಡೆದ ಪ್ರತಿಷ್ಠಿತ ಡೈಮಂಡ್‌ ಲೀಗ್ ಸರಣಿಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

25 ವರ್ಷದ ನೀರಜ್ ಚೋಪ್ರಾ, ಕಳೆದ ತಿಂಗಳು ಅಭ್ಯಾಸ ನಡೆಸುವ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಕಳೆದೊಂದು ತಿಂಗಳಿನಲ್ಲಿ ನೀರಜ್ ಚೋಪ್ರಾ ಮೂರು ಪ್ರಮುಖ ಸ್ಪರ್ಧೆಗಳಿಂದ ಹೊರಗುಳಿದಿದ್ದರು. ಇದೀಗ ಲುಸ್ಸಾನ್ ಡೈಮಂಡ್‌ ಲೀಗ್ ಸ್ಪರ್ಧೆಯ 5ನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 87.66 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ನೀರಜ್ ಚೋಪ್ರಾ, ಮೊದಲ ಪ್ರಯತ್ನದಲ್ಲಿ ಪೌಲ್ ಮಾಡಿದರು. ಇದಾದ ಬಳಿಕ ಎರಡನೇ ಪ್ರಯತ್ನದಲ್ಲಿ 83.52 ಮೀಟರ್ ದೂರ ಜಾವೆಲಿನ್ ಎಸೆದರು. ಇನ್ನು ಮೂರನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 85.04 ಮೀಟರ್ ದೂರ ಜಾವೆಲಿನ್ ಥ್ರೋ ಮಾಡಿದರು. ಇನ್ನು ನಾಲ್ಕನೇ ಪ್ರಯತ್ನ ಪೌಲ್ ಆಯಿತು.

ಇನ್ನು ಐದನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 87.66 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟರು. ಇನ್ನು ಆರನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 84.15 ಮೀಟರ್ ದೂರ ಎಸೆಯುವ ಮೂಲಕ ತಮ್ಮ ಕೊನೆಯ ಪ್ರಯತ್ನ ಮುಗಿಸಿದರು.

ಇನ್ನುಳಿದಂತೆ ಜರ್ಮನಿಯ ಜೂಲಿನ್ ವೆಬರ್‌ 87.03 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರೆ, ಜೆಕ್ ಗಣರಾಜ್ಯದ ಜೇಕೊಬ್ ವೆಡ್ಲೆಜೆಕ್ 86.13 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ನೀರಜ್ ಚೋಪ್ರಾ ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದ ಲುಸ್ಸಾನ್ ಡೈಮಂಡ್‌ ಲೀಗ್ ಸ್ಪರ್ಧೆಯಲ್ಲಿ ಚೊಚ್ಚಲ ಬಾರಿಗೆ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು.

ಇದಾದ ಕೆಲವು ತಿಂಗಳಿನಲ್ಲೇ ನೀರಜ್ ಚೋಪ್ರಾ ಡೈಮಂಡ್‌ ಲೀಗ್ ಟ್ರೋಫಿ ಫೈನಲ್‌ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com