ಬಹುಮಾನದ ಹಣದಲ್ಲಿ ಒಡಿಶಾ ರೈಲು ದುರಂತ ಸಂತ್ರಸ್ತರ ನಿಧಿಗೆ 20 ಲಕ್ಷ ರೂ. ದೇಣಿಗೆ ನೀಡಿದ ಭಾರತ ಫುಟ್ಬಾಲ್ ತಂಡ

ಲೆಬನಾನ್ ತಂಡವನ್ನು 2-0 ಅಂತರದಿಂದ ಸೋಲಿಸಿದ ಭಾರತ ಫುಟ್ಬಾಲ್ ತಂಡ ಇಂಟರ್ ಕಾಂಟಿನೆಂಟಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಗೆಲುವಿನ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಭಾರತ ತಂಡಕ್ಕೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು.
ಭಾರತೀಯ ಫುಟ್ಬಾಲ್ ತಂಡ
ಭಾರತೀಯ ಫುಟ್ಬಾಲ್ ತಂಡ

ನವದೆಹಲಿ: ಲೆಬನಾನ್ ತಂಡವನ್ನು 2-0 ಅಂತರದಿಂದ ಸೋಲಿಸಿದ ಭಾರತ ಫುಟ್ಬಾಲ್ ತಂಡ ಇಂಟರ್ ಕಾಂಟಿನೆಂಟಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಗೆಲುವಿನ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಭಾರತ ತಂಡಕ್ಕೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಇದಾದ ಬಳಿಕ ಭಾರತ ಫುಟ್ಬಾಲ್ ತಂಡ ತೆಗೆದುಕೊಂಡ ನಿರ್ಧಾರ ಅಭಿಮಾನಿಗಳ ಮನ ಗೆದ್ದಿದೆ.

ಕೋಚ್ ಇಗೊರ್ ಸ್ಟಿಮ್ಯಾಕ್ ನೇತೃತ್ವದ ಭಾರತೀಯ ಫುಟ್ಬಾಲ್ ತಂಡವು ಒಡಿಶಾ ದುರಂತದ ಸಂತ್ರಸ್ತರಿಗೆ ಬಹುಮಾನದ 20 ಲಕ್ಷ ರೂ.ಗಳನ್ನು ನೀಡಲು ನಿರ್ಧರಿಸಿದೆ. ಈ ಬಗ್ಗೆ ಭಾರತ ಫುಟ್ಬಾಲ್ ತಂಡ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.

ಭಾರತೀಯ ಫುಟ್ಬಾಲ್ ತಂಡ ಟ್ವೀಟ್ ನಲ್ಲಿ 'ನಮ್ಮ ವಿಜಯದ ನಂತರ ತಂಡಕ್ಕೆ ಬಹುಮಾನದ ಹಣವನ್ನು ನೀಡಿದ ಒಡಿಶಾ ಸರ್ಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಇದಾದ ನಂತರ, ಈ ತಿಂಗಳ ಆರಂಭದಲ್ಲಿ ರೈಲು ಅಪಘಾತದಲ್ಲಿ ದುರದೃಷ್ಟವಶಾತ್ ಪ್ರಾಣಹಾನಿಗೆ ತುತ್ತಾಗಿರುವ ಕುಟುಂಬಗಳ ಪರಿಹಾರ ಮತ್ತು ಪುನರ್ವಸತಿಗಾಗಿ ನಾವು ಆ ಬಹುಮಾನದ ಹಣದಿಂದ 20 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುವುದಾಗಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಸರ್ವಾನುಮತದಿಂದ ನಿರ್ಧರಿಸಿದ್ದೇವೆ. ಜನರು ಅನುಭವಿಸಿದ ನಷ್ಟವನ್ನು ಯಾರೂ ಸರಿದೂಗಿಸಲು ಸಾಧ್ಯವಿಲ್ಲ, ಆದರೆ ಈ ಕಷ್ಟದ ಸಮಯದಲ್ಲಿ ಕುಟುಂಬಗಳಿಗೆ ಈ ಮೊತ್ತವು ಸಣ್ಣ ಸಹಾಯವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಅದು ಹೇಳಿದೆ.

ಭಾನುವಾರ ನಡೆದ ಇಂಟರ್‌ಕಾಂಟಿನೆಂಟಲ್ ಕಪ್‌ನ ಫೈನಲ್‌ನಲ್ಲಿ ನಾಯಕ ಸುನಿಲ್ ಛೆಟ್ರಿ ಮತ್ತು ಲಾಲಿಯಾಂಜುವಾಲಾ ಚಾಂಗ್ಟೆ ಅವರ ಗೋಲುಗಳ ನೆರವಿನಿಂದ ಭಾರತ 2-0 ಗೋಲುಗಳಿಂದ ಲೆಬನಾನ್ ಅನ್ನು ಸೋಲಿಸುವ ಮೂಲಕ ಇಂಟರ್‌ಕಾಂಟಿನೆಂಟಲ್ ಕಪ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಭಾರತ ಎರಡನೇ ಬಾರಿಗೆ ಈ ಪ್ರಶಸ್ತಿ ಗೆದ್ದಿದೆ. 2018ರಲ್ಲಿ ಕೀನ್ಯಾವನ್ನು ಸೋಲಿಸುವ ಮೂಲಕ ಭಾರತ ಟ್ರೋಫಿಯನ್ನು ಗೆದ್ದುಕೊಂಡಿತು. 2019ರಲ್ಲಿ ಭಾರತವು ನಾಲ್ಕನೇ ಮತ್ತು ಕೊನೆಯ ಸ್ಥಾನಕ್ಕೆ ತೃಪ್ತಿಗೊಂಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com