WFI ಅಧ್ಯಕ್ಷ, ಬಿಜೆಪಿ ಸಂಸದ ಭ್ರಿಜ್ ಭೂಷಣ್ ರಿಂದ ಲೈಂಗಿಕ ಕಿರುಕುಳ; ಮಹಿಳಾ ಕುಸ್ತಿಪಟುಗಳಿಂದ ಪ್ರತಿಭಟನೆ
ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಹಲವು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಖ್ಯಾತ ಕುಸ್ತಿ ಪಟು ವಿನೇಶ್ ಫೋಗಟ್...
Published: 19th January 2023 01:09 AM | Last Updated: 19th January 2023 05:03 PM | A+A A-

ವಿನೇಶ್ ಫೋಗಟ್ - ಭ್ರಿಜ್ ಭೂಷಣ್
ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಹಲವು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಖ್ಯಾತ ಕುಸ್ತಿ ಪಟು ವಿನೇಶ್ ಫೋಗಟ್ ಅವರು ಬುಧವಾರ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಕ್ರೀಡಾ ಆಡಳಿತಾಧಿಕಾರಿ ಮತ್ತು ಬಿಜೆಪಿ ಸಂಸದ ತಿರಸ್ಕರಿಸಿದ್ದಾರೆ.
ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ನಂತರ ಡಬ್ಲ್ಯುಎಫ್‌ಐ ಜೊತೆ ಭಿನ್ನಾಭಿಪ್ರಾಯ ಹೊಂದಿರುವ ವಿನೇಶ್ ಅವರು, ಲಖನೌದ ರಾಷ್ಟ್ರೀಯ ಶಿಬಿರದಲ್ಲಿ ಹಲವಾರು ತರಬೇತುದಾರರು ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ಶೋಷಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆದರೆ ತಾನು ಅಂತಹ ಶೋಷಣೆಯನ್ನು ಎಂದಿಗೂ ಎದುರಿಸಲಿಲ್ಲ ಎಂದು 28 ವರ್ಷದ ಯುವತಿ ವಿನೇಶ್ ಸ್ಪಷ್ಟಪಡಿಸಿದ್ದಾರೆ. ಇಂದು ಬಿಜೆಪಿ ಸಂಸದನ ವಿರುದ್ಧ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದು, ಧರಣಿಯಲ್ಲಿ WFI ಅಧ್ಯಕ್ಷರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಕುಸ್ತಿಪಟು ಹಾಜರಿದ್ದರು ಎಂದು ಹೇಳಿದ್ದಾರೆ.
ಇದನ್ನು ಓದಿ: ನಿಷೇಧಿತ ಡ್ರಗ್ ಸೇವೆನೆ ಆರೋಪದ ಮೇಲೆ ದ್ಯುತಿ ಚಾಂದ್ ತಾತ್ಕಾಲಿ ಅಮಾನತು
ಕೆಲ ಕೋಚ್‌ಗಳು ಒಕ್ಕೂಟದ ಬೆಂಬಲದಿಂದ ಮಹಿಳಾ ಕೋಚ್‌ಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಕುಸ್ತಿಗೆ ಬರುವ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ. ಕುಸ್ತಿ ಒಕ್ಕೂಟದ ಅಧ್ಯಕ್ಷರೇ ಅದೆಷ್ಟೋ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿನೇಶ್ ಫೋಗಟ್ ಆರೋಪಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನ ಪುರುಷರ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮೆರೆದ ಬಜರಂಗ್ ಪೂನಿಯಾ ಕೂಡ ಈ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಈ ವಿಚಾರದಲ್ಲಿ ತಮಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.