ಡಬ್ಲ್ಯೂಎಫ್ ಐ ಅಧ್ಯಕ್ಷರ ವಿರುದ್ಧದ ಆರೋಪ: ತನಿಖಾ ಸಮಿತಿ ರಚನೆಗೆ ಕುಸ್ತಿಪಟುಗಳು ಐಒಎಗೆ ಮನವಿ

ಭಾರತ ಕುಸ್ತಿ ಫೆಡರೇಶನ್ ವಿರುದ್ಧ ಹೋರಾಡುತ್ತಿರುವ ಒಲಿಂಪಿಯನ್ ಕುಸ್ತಿಪಟು ಮತ್ತು 2022 ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಬಜರಂಗ್ ಪೂನಿಯಾ, ತಮ್ಮ ಬೇಡಿಕೆಗಳನ್ನು ಆಲಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಮನವಿ ಮಾಡಿದ್ದಾರೆ.
ಪ್ರತಿಭಟನಾನಿರತ ಕುಸ್ತಿಪಟುಗಳು
ಪ್ರತಿಭಟನಾನಿರತ ಕುಸ್ತಿಪಟುಗಳು

ನವದೆಹಲಿ: ಭಾರತ ಕುಸ್ತಿ ಫೆಡರೇಶನ್ ವಿರುದ್ಧ ಹೋರಾಡುತ್ತಿರುವ ಒಲಿಂಪಿಯನ್ ಕುಸ್ತಿಪಟು ಮತ್ತು 2022 ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಬಜರಂಗ್ ಪೂನಿಯಾ, ತಮ್ಮ ಬೇಡಿಕೆಗಳನ್ನು ಆಲಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಮನವಿ ಮಾಡಿದ್ದಾರೆ.

ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಬುಧವಾರದಿಂದ ನಡೆಯುತ್ತಿರುವ  ಡಬ್ಲ್ಯುಎಫ್‌ಐ ಮತ್ತು ಅದರ ಅಧ್ಯಕ್ಷ ಬ್ರಿಜ್ ಭೂಷಣ್ ಸರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ರವಿ ದಹಿಯಾ ಮತ್ತು ದೀಪಕ್ ಪುನಿಯಾ ಇತರ ಆಟಗಾರರು ಭಾಗವಹಿಸಿದ್ದಾರೆ.

ಬ್ರಿಜ್ ಭೂಷಣ್ ಸರಣ್ ಸಿಂಗ್ ಅದರ ತರಬೇತುದಾರರಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಮತ್ತು ಫೆಡರೇಶನ್‌ನ ಕಾರ್ಯನಿರ್ವಹಣೆಯಲ್ಲಿನ ದುರುಪಯೋಗದ ಆರೋಪ ಮಾಡಿರುವ ಕುಸ್ತಿಪಟುಗಳು ಒಕ್ಕೂಟದ ಸಂಪೂರ್ಣ ಪುನರ್ ರಚನೆಗೆ ಒತ್ತಾಯಿಸಿದ್ದಾರೆ. 

ಪ್ರತಿಭಟನೆಯ ಮೂರನೇ ದಿನವಾದ ಇಂದು ಜಂತರ್ ಮಂತರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪುನಿಯಾ, ಕ್ರೀಡಾಪಟುಗಳು ತಮ್ಮ ಅಭ್ಯಾಸವನ್ನು ಬಿಟ್ಟು ಇಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗಿರುವುದು ಬೇಸರ ತಂದಿದೆ. ನಮ್ಮ ಹೋರಾಟ ಕೇವಲ ಭಾರತದ ಕುಸ್ತಿ ಒಕ್ಕೂಟದ ವಿರುದ್ಧವಾಗಿದೆ. ನಮ್ಮ ಬೇಡಿಕೆಗಳನ್ನು ಆಲಿಸಲು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಕ್ರೀಡಾ ಸಚಿವರಿಗೆ ಮನವಿ ಮಾಡುತ್ತೇವೆ. ಡಬ್ಲ್ಯೂಎಫ್ ಐ ವಿರುದ್ಧದ ಹೋರಾಟ ರಾಜಕೀಯ ತಿರುವು ಪಡೆದುಕೊಂಡಿದೆ ಎಂದರು. 

"ಬ್ರಿಜ್ ಭೂಷಣ್ ಸರ್ ರಣ್ ಸಿಂಗ್ ಮುಂದೆ ಬರಲು ಕಾಯುತ್ತಿದ್ದೇವೆ.  ಭವಿಷ್ಯದ ನಮ್ಮ ಯುವ ಕುಸ್ತಿಪಟುಗಳಿಗಾಗಿ ನಮ್ಮ ವೃತ್ತಿಜೀವನವನ್ನು ಪಣಕ್ಕಿಟ್ಟು ಹೋರಾಟ ಮಾಡುತ್ತಿರುವುದಾಗಿ ಪುನಿಯಾ ತಿಳಿಸಿದರು. 

ಇದಕ್ಕೂ ಮುನ್ನಾ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಗೆ ತೆರಳಿದ ಪ್ರತಿಭಟನಾಕಾರರು, ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿ ರಚಿಸುವಂತೆ ಒತ್ತಾಯಿಸಿದ್ದಾರೆ. 

ಬ್ರಿಜ್ ಭೂಷಣ್ ಸರಣ್ ಸಿಂಗ್ ಅವರಿಂದ  ಲೈಂಗಿಕ ಕಿರುಕುಳದ ಬಗ್ಗೆ ತಮ್ಮ ಹಲವಾರು ಕಿರಿಯ ಸಹೋದ್ಯೋಗಗಳು ಮಾಹಿತಿ ನೀಡಿರುವುದಾಗಿ ಕುಸ್ತಿಪಟುಗಳು ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಪಿಟಿ ಉಷಾ ಅವರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.  

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರಾದ ರವಿ ದಹಿಯಾ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಐವರು ಕುಸ್ತಿಪಟುಗಳು ಪತ್ರಕ್ಕೆ ಸಹಿ ಹಾಕಿದ್ದಾರೆ. ರಿಯೊ ಗೇಮ್ಸ್ ಕಂಚಿನ ವಿಜೇತ ಸಾಕ್ಷಿ ಮಲಿಕ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತರಾದ ವಿನೇಶ್ ಫೋಗಟ್ ಮತ್ತು ದೀಪಕ್ ಪುನಿಯಾ ಸಹ ಸಹಿ ಹಾಕಿದ್ದಾರೆ.

ಡಬ್ಲ್ಯೂಎಫ್ ಐ ವಿಸರ್ಜಿಸಬೇಕು ಮತ್ತು ಅದರ ಅಧ್ಯಕ್ಷರನ್ನು ವಜಾಗೊಳಿಸಬೇಕು ಎಂದು ಕುಸ್ತಿಪಟುಗಳು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.  ರಾಷ್ಟ್ರೀಯ ಒಕ್ಕೂಟದ ವ್ಯವಹಾರಗಳನ್ನು ನಡೆಸಲು ಕುಸ್ತಿಪಟುಗಳೊಂದಿಗೆ ಸಮಾಲೋಚಿಸಿ ಹೊಸ ಸಮಿತಿಯನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com