ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಮೇರಿ ಕೋಮ್ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚನೆ
ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ತನಿಖೆ ನಡೆಸಲಿರುವ ಸಮಿತಿಗೆ ಬಾಕ್ಸಿಂಗ್ ಪಟು ಎಂಸಿ ಮೇರಿ ಕೋಮ್ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ.
Published: 23rd January 2023 05:26 PM | Last Updated: 23rd January 2023 07:00 PM | A+A A-

ಬ್ರಿಜ್ ಭೂಷಣ್ ಶರಣ್ ಸಿಂಗ್
ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ತನಿಖೆ ನಡೆಸಲಿರುವ ಸಮಿತಿಗೆ ಬಾಕ್ಸಿಂಗ್ ಪಟು ಎಂಸಿ ಮೇರಿ ಕೋಮ್ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ.
ಸರ್ಕಾರ ನೇಮಿಸಿದ ಐವರು ಸದಸ್ಯರ ಈ ಸಮಿತಿಯ ಮುಂದಿನ ತಿಂಗಳು ಡಬ್ಲ್ಯುಎಫ್‌ಐನ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಸೋಮವಾರ ಘೋಷಿಸಿದ್ದಾರೆ.
ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್, ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಮಿಷನ್ ಒಲಿಂಪಿಕ್ ಸೆಲ್ ಸದಸ್ಯೆ ತೃಪ್ತಿ ಮುರ್ಗುಂಡೆ, ಟಿಒಪಿಎಸ್ ಮಾಜಿ ಸಿಇಒ ರಾಜಗೋಪಾಲನ್ ಮತ್ತು SAI ಮಾಜಿ ಕಾರ್ಯಕಾರಿ ನಿರ್ದೇಶಕಿ ರಾಧಿಕಾ ಶ್ರೀಮಾನ್ ಅವರು ಮೇಲ್ವಿಚಾರಣಾ ಸಮಿತಿಯ ಸದ್ಯಸ್ಯರಾಗಿದ್ದಾರೆ.
ಇದನ್ನು ಓದಿ: ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ತನಿಖೆಗೆ 7 ಸದಸ್ಯರ ಸಮಿತಿ ರಚಿಸಿದ ಐಒಎ
ಡಬ್ಲ್ಯುಎಫ್‌ಐ ಮತ್ತು ಸಿಂಗ್ ವಿರುದ್ಧ ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ರವಿ ದಹಿಯಾ ಸೇರಿದಂತೆ ದೇಶದ ಕೆಲವು ಪ್ರಮುಖ ಕುಸ್ತಿಪಟುಗಳು ಮೂರು ದಿನ ಪ್ರತಿಭಟನೆ ನಡೆಸಿದ ನಂತರ ಮೇಲ್ವಿಚಾರಣಾ ಸಮಿತಿ ರಚಿಸಲು ಅನುರಾಗ್ ಠಾಕೂರ್ ನಿರ್ಧರಿಸಿದ್ದರು.
ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಕಳೆದ ಶುಕ್ರವಾರ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಲು ಏಳು ಸದಸ್ಯರ ಸಮಿತಿ ರಚಿಸಿದೆ.