
ಸತತ ಎರಡನೇ ಒಲಿಂಪಿಕ್ ಪದಕ ಗೆಲ್ಲುವ ಛಲದೊಂದಿಗೆ ಅತ್ಯುತ್ತಮ ಪ್ರದರ್ಶಿಸಿರುವ ಭಾರತೀಯ ಹಾಕಿ ತಂಡವು ನಡೆಯುತ್ತಿರುವ ಪ್ಯಾರಿಸ್ ಗೇಮ್ಸ್‌ನ ಸೆಮಿಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ ಸೆಣೆಸಲಿದೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಈ ಬಾರಿ ಚಿನ್ನ ಗೆಲ್ಲಲಿ ಎಂದು ದೇಶದ ಜನತೆಯ ಆಶಯವಾಗಿದೆ.
1980ರ ಮಾಸ್ಕೋ ಕ್ರೀಡಾಕೂಟದಲ್ಲಿ ಭಾರತ ಕೊನೆಯದಾಗಿ ಚಿನ್ನದ ಪದಕ ಗೆದ್ದಿತ್ತು. ಭಾರತ ಒಟ್ಟು ಎಂಟು ಒಲಂಪಿಕ್ ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ. ಇನ್ನು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಇತಿಹಾಸ ನಿರ್ಮಿಸಲು ಉತ್ತಮ ಅವಕಾಶ ಒದಗಿಬಂದಿದೆ. ಸೆಮಿಫೈನಲ್ ಗೆಲುವು ಭಾರತಕ್ಕೆ ಬೆಳ್ಳಿಯನ್ನು ಖಚಿತಪಡಿಸುತ್ತದೆ.
ಭಾನುವಾರ ಐಕಾನಿಕ್ ಯೆವ್ಸ್-ಡು-ಮನೋಯಿರ್ ಸ್ಟೇಡಿಯಂನಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಹಾಕಿ ಪಡೆ ಬ್ರಿಟನ್ ವಿರುದ್ಧ ಜಿದ್ದಾಜಿದ್ದಿನ ಪ್ರದರ್ಶನ ನೀಡಿತ್ತು. ಪ್ರತಿಸ್ಪರ್ಧಿ ಫಾರ್ವರ್ಡ್ ವಿಲ್ ಕಲ್ನಾನ್ ಅವರ ಮುಖಕ್ಕೆ ಉದ್ದೇಶಪೂರ್ವಕವಾಗಿ ಹೊಡೆದರು ಎಂಬ ಕಾರಣಕ್ಕೆ ಅಮಿತ್ ರೋಹಿದಾಸ್ ಗೆ ಕೆಂಪು ಕಾರ್ಡ್ ತೋರಿಸಲಾಗಿತ್ತು.
ಹೀಗಾಗಿ ತಂಡ ನಂತರ ಸುಮಾರು 40 ನಿಮಿಷಗಳ ಕಾಲ 10 ಆಟಗಾರರೊಂದಿಗೆ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡವು ಆಡಬೇಕಾಯಿತು. ನಿಗದಿತ ಸಮಯದಲ್ಲಿ 1-1 ಗೋಲುಗಳೊಂದಿಗೆ ಪಂದ್ಯ ಟೈ ಆಯಿತು. ಹೀಗಾಗಿ ನಂತರ ಪೆನಾಲ್ಟಿ ಶೂಟ್ ಔಟ್ ನೀಡಲಾಯಿತು. ಅದರಲ್ಲಿ ಭಾರತ 4-2 ಗೋಲುಗಳಿಂದ ವಿಜೇತರಾಗಿ ಹೊರಹೊಮ್ಮಿತು.
Advertisement