ಪ್ಯಾರಿಸ್: ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಮಂಗಳವಾರ ಪ್ಯಾರಿಸ್ ಒಲಿಂಪಿಕ್ಸ್ ನ 50 ಕೆಜಿ ವಿಭಾಗದಲ್ಲಿ ಉಕ್ರೇನ್ ನ ಒಕ್ಸಾನಾ ಲಿವಾಚ್ ಅವರನ್ನು ಸೋಲಿಸುವ ಮೂಲಕ ಚೊಚ್ಚಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಕ್ವಾರ್ಟರ್ ಫೈನಲ್ ನಲ್ಲಿ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ವಿಭಾಗದಲ್ಲಿ ಉಕ್ರೇನ್ ನ ಒಕ್ಸಾನಾ ಲಿವಾಚ್ ಅವರನ್ನು 7-5 ಅಂತರದಿಂದ ಸೋಲಿಸಿದ ವಿನೇಶ್ ಫೋಗಟ್ ಸೆಮಿ ಫೈನಲ್ ಗೆ ಲಗ್ಗೆ ಇಡುವ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ.
ಇದಕ್ಕೂ ಮುನ್ನಾ ನಡೆದ 50 ಕೆಜಿ ವಿಭಾಗದ ಆರಂಭಿಕ ಸುತ್ತಿನಲ್ಲಿ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಹಾಲಿ ಚಿನ್ನದ ಪದಕ ವಿಜೇತೆ ಜಪಾನಿನ ಯುಯಿ ಸುಸಾಕಿ ಅವರನ್ನು ಸೋಲಿಸುವ ಮೂಲಕ ವಿನೇಶ್ ಫೋಗಟ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
ವಿನೇಶ್ ಕೊನೆಯ 5 ಸೆಕೆಂಡುಗಳವರೆಗೆ 0-2 ರಿಂದ ಹಿಂದುಳಿದಿದ್ದರು. ಆದರೆ ಕೊನೆಯಲ್ಲಿ ಮೂರು ಅಂಕಗಳನ್ನು ಪಡೆಯುವ ಮೂಲಕ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನ್ನು 3-2 ಅಂತರದಿಂದ ಸೋಲಿಸಿದರು.
ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಸುಸಾಕಿ ಅವರಿಗೆ ಮೊದಲ ಬಾರಿಗೆ ಸೋಲಾಗಿದೆ. ಈ ಪಂದ್ಯಕ್ಕೂ ಮುನ್ನಾ ಸುಸಾಕಿ ಅವರು 82 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಎಲ್ಲದರಲ್ಲೂ ಗೆಲುವು ಸಾಧಿಸಿದ್ದರು. ವಿನೇಶ್ ಫೋಗಟ್ ಮಂಗಳವಾರ ರಾತ್ರಿ 10-30ಕ್ಕೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯಸ್ನಿಲಿಸ್ ಗುಜ್ಮಾನ್ ಅವರನ್ನು ಎದುರಿಸಲಿದ್ದಾರೆ.
ಭಾರತದ ಮಾಜಿ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ದ ಲೈಂಗಿಕ ಕಿರುಕುಳ ಆರೋಪದಲ್ಲಿ ಕೆಲ ದಿನಗಳ ಹಿಂದೆ ದೆಹಲಿಯ ಜಂತರ್ ಮಂಥರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿನೇಶ್ ಫೋಗಟ್ ಮುಂಚೂಣಿಯಲ್ಲಿದ್ದರು. ನ್ಯಾಯಾಲಯದಲ್ಲಿ ಈ ಪ್ರಕರಣವು ವಿಚಾರಣೆಯಲ್ಲಿದೆ. ವಿನೇಶ್ ಈ ಹಿಂದಿನ ಎರಡು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದರು.
Advertisement