ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಸಂತಸದ ಸುದ್ದಿ. ಭಾರತದ ಕುಸ್ತಿಪಟು ರಿತಿಕಾ ಹೂಡಾ ಅವರು ಮಹಿಳೆಯರ 76 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಮುಕ್ತಾಯದ ಹಂತ ತಲುಪುತ್ತಿದ್ದು, ಕೊನೆಯ ದಿನದಂದು ಕುಸ್ತಿಪಟು ರೀತಿಕಾ ಹೂಡಾ ಅವರು ಉತ್ತಮ ಪ್ರದರ್ಶನ ನೀಡಿ, ಹಂಗೇರಿಯ ಬರ್ನಾಡೆಟ್ ನ್ಯಾಗಿ ಅವರ ವಿರುದ್ಧ 12-2 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ರಿತಿಕಾ ಹೂಡಾ ಅವರಿಗೆ ಕ್ವಾರ್ಟರ್ ಫೈನಲ್ ನಲ್ಲಿ ಕಠಿಣ ಪೈಪೋಟಿ ಎದುರಾಗಲಿದ್ದು, ಅಗ್ರ ಶ್ರೇಯಾಂಕಿತೆ ಕಿರ್ಗಿಸ್ತಾನದ ಐಪೆರಿ ಮೆಡೆಟ್ ಅವರನ್ನು ಎದುರಿಸಬೇಕಾಗಿದೆ.
ಪುರುಷರ ಕುಸ್ತಿ ವಿಭಾಗದಲ್ಲಿ ಭಾರತದ ಏಕಮಾತ್ರ ಸ್ಪರ್ಧಿಯಾಗಿದ್ದ ಅಮನ್ ಸೆಹ್ರಾವತ್ ಅವರು ಶುಕ್ರವಾರ ಕಂಚಿನ ಪದಕ ಗೆದ್ದಿದ್ದಾರೆ. ಇದು ಈ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಐದನೇ ಕಂಚು ಮತ್ತು ಆರನೇ ಒಟ್ಟಾರೆ ಪದಕವಾಗಿದೆ.
Advertisement