ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೇಹದ ತೂಕ ಹೆಚ್ಚಳದಿಂದ ಫೈನಲ್ ಪಂದ್ಯದಿಂದ ಅನರ್ಹಗೊಂಡು ಪದಕ ವಂಚಿತರಾದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಶನಿವಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರಿಗೆ ಅದ್ದೂರಿ ಸ್ವಾಗತ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ವಿನೇಶ್ ಫೋಗಟ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು, ಜಯ ಘೋಷಣೆ ಕೂಗಿ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಭಾವುಕರಾದ ವಿನೇಶ್, ದೇಶದ ಜನರಿಂದ ಇಷ್ಟೊಂದು ಪ್ರೀತಿ ಮತ್ತು ಗೌರವ ಸಿಕ್ಕಿರುವುದು ನನ್ನ ಅದೃಷ್ಟ ಎಂದರು. ದೇಶದ ಎಲ್ಲಾ ಜನರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಕುಸ್ತಿಪಟು ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಅವರನ್ನು ಚಾಂಪಿಯನ್‌ನಂತೆ ಸ್ವಾಗತಿಸಲಾಗುತ್ತಿದೆ. ವಿನೇಶ್‌ನ ಪಯಣವನ್ನು ಬೀದಿಗಳಿಂದ ವೇದಿಕೆಯತ್ತ ದೇಶ ನೋಡಿದೆ. ಎಲ್ಲಾ ದೇಶವಾಸಿಗಳಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ ಎಂದರು.
ಕುಸ್ತಿಪಟು ಸಾಕ್ಷಿ ಮಲ್ಲಿಕ್ ಮಾತನಾಡಿ, ಇದೊಂದು ದೊಡ್ಡ ದಿನ.ವಿನೇಶ್ ದೇಶ ಮತ್ತು ಮಹಿಳೆಯರಿಗಾಗಿ ಮಾಡಿರುವ ಸಾಧನೆ ಅದ್ಭುತ. ಅವರು ಈ ಗೌರವವನ್ನು ಮುಂದುವರೆಸುತ್ತಾರೆ ಎಂದು ಭಾವಿಸುತ್ತೇನೆ. ಆಕೆ ನಮಗೆ ಚಾಂಪಿಯನ್ ಆಗಿದ್ದಾರೆ ಎಂದರು.
ಬಳಿಕ ವಿನೇಶ್ ಫೋಗಟ್ ಹರಿಯಾಣದ ತನ್ನ ಸ್ವಗ್ರಾಮಕ್ಕೆ ತೆರೆದ ವಾಹನದಲ್ಲಿ ತೆರಳಿದರು. ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ, ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಜೊತೆಯಲ್ಲಿದ್ದರು.
ಈ ತಿಂಗಳ ಆರಂಭದಲ್ಲಿ ನಡೆದ ಮಹಿಳೆಯರ 50 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ 100 ಗ್ರಾಂ ಅಧಿಕ ತೂಕ ಹೊಂದಿದ್ದರಿಂದ ಪೋಗಟ್ ಅವರನ್ನು ಪಂದ್ಯದಿಂದ ಅನರ್ಹಗೊಳಿಸಲಾಗಿತ್ತು. ಬಳಿಕ ಜಂಟಿ ಬೆಳ್ಳೆ ಪದಕಕ್ಕಾಗಿ ಕ್ರೀಡಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರಿಂದ ಫೋಗಟ್ ಪ್ಯಾರಿಸ್‌ನಲ್ಲಿಯೇ ಉಳಿದಿದ್ದರು. ಆದರೆ, ಅ ಅರ್ಜಿಯೂ ಬುಧವಾರ ವಜಾಗೊಂಡಿತ್ತು.
Advertisement