
ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದ ಮನು ಭಾಕರ್ ಹೆಸರು ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ನಾಪತ್ತೆಯಾಗಿರುವುದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಮನು ಭಾಕರ್ ಸ್ವತಃ ಮಾತನಾಡಿದ್ದು, ಅವರು ನೀಡಿರುವ ಪ್ರತಿಕ್ರಿಯೆ ಅಚ್ಚರಿ ಮೂಡಿಸುತ್ತಿದೆ.
ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿ ಮನು ಭಾಕರ್ ಅವರ ಹೆಸರನ್ನು ಶಿಫಾರಸು ಮಾಡದ ಬೆಳವಣಿಗೆ ಬೆನ್ನಲ್ಲೇ ಕ್ರೀಡಾ ಸಚಿವಾಲಯ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿತ್ತು.
ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ, 22 ವರ್ಷದ ಪಿಸ್ತೂಲ್ ಕ್ರೀಡಾಪಟು ಸಾಮಾಜಿಕ ಜಾಲತಾಣದಲ್ಲಿ ಈ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸುವಾಗ "ನನ್ನ ಕಡೆಯಿಂದ ಲೋಪವಾಗಿರಬಹುದು"ಎಂದು ಭಾಕರ್ ತಿಳಿಸಿದ್ದಾರೆ.
"ಅತ್ಯಂತ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಯಲ್ಲಿ ನನ್ನ ಹೆಸರು ತಪ್ಪಿಹೋಗಿರುವುದರ ಬಗ್ಗೆ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ - ಒಬ್ಬ ಕ್ರೀಡಾಪಟುವಾಗಿ ನನ್ನ ದೇಶಕ್ಕಾಗಿ ಆಡುವುದು ಮತ್ತು ಸಾಧಿಸುವುದು ಎಂಬುದಷ್ಟೇ ನನ್ನ ಪಾತ್ರ ಎಂದು ನಾನು ಹೇಳಲು ಬಯಸುತ್ತೇನೆ."
"ಅರ್ಜಿಯನ್ನು ಸರಿಪಡಿಸುವ ಸಂದರ್ಭದಲ್ಲಿ ನನ್ನ ಕಡೆಯಿಂದ ಒಂದು ಲೋಪವಾಗಿದೆ ಎಂದು ನಾನು ನಂಬುತ್ತೇನೆ" ಎಂದು ಭಾಕರ್ X ನಲ್ಲಿ ಬರೆದಿದ್ದಾರೆ.
ಪ್ರಶಸ್ತಿ ಬಂದರೂ, ಸಿಗದಿದ್ದರೂ ದೇಶಕ್ಕಾಗಿ ಸಾಧನೆ ಮಾಡುವುದೇ ತನ್ನ ಗುರಿ ಎಂದು ಭಾಕರ್ ಇದೇ ವೇಳೆ ಹೇಳಿದ್ದಾರೆ. "ಪ್ರಶಸ್ತಿಗಳು ಮತ್ತು ಗುರುತಿಸುವಿಕೆ ನನ್ನನ್ನು ಪ್ರೇರೇಪಿಸುತ್ತದೆ ಆದರೆ ಅದೊಂದೇ ನನ್ನ ಗುರಿಯಲ್ಲ" ಎಂದು ಅವರು ಹೇಳಿದ್ದಾರೆ. "ಪ್ರಶಸ್ತಿ ಏನೇ ಇರಲಿ, ನನ್ನ ದೇಶಕ್ಕಾಗಿ ಹೆಚ್ಚು ಪದಕಗಳನ್ನು ಗೆಲ್ಲಲು ನಾನು ಪ್ರೇರೇಪಿಸುತ್ತೇನೆ. ಇದು ಎಲ್ಲರಿಗೂ ವಿನಂತಿ, ದಯವಿಟ್ಟು ಈ ಬಗ್ಗೆ ಊಹಾಪೋಹಕ್ಕೆ ದಾರಿಮಾಡಿಕೊಡಬೇಡಿ" ಎಂದು ಅವರು ಹೇಳಿದರು.
ಆಕೆಯ ತಂದೆ ರಾಮ್‌ಕಿಶನ್ ಭಾಕರ್ ಅವರು ಕ್ರೀಡಾ ಸಚಿವಾಲಯ ಮತ್ತು ಆಯ್ಕೆ ಸಮಿತಿಯನ್ನು ಆಕೆಯ ಸಾಧನೆಗಳ ಹೊರತಾಗಿಯೂ ಪ್ರಶಸ್ತಿಗಾಗಿ ಕಡೆಗಣಿಸಿದ್ದಕ್ಕಾಗಿ ಅಸಮಾಧಾನ ಹೊರಹಾಕಿದ್ದರು. ಒಲಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮನು ಭಾಕರ್ ಭಾಜನರಾಗಿದ್ದಾರೆ.
ಪ್ಯಾರಿಸ್‌ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ (ಸರಬ್ಜೋತ್ ಸಿಂಗ್ ಅವರೊಂದಿಗೆ) ಸ್ಪರ್ಧೆಗಳಲ್ಲಿ ಅವರು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
Advertisement