
ಪ್ಯಾರಿಸ್: ಫ್ರಾನ್ಸ್ ನಲ್ಲಿ ಶನಿವಾರದಿಂದ ಆರಂಭವಾಗಿರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನವೇ ಶೂಟಿಂಗ್ ನಲ್ಲಿ ಭಾರತಕ್ಕೆ ಸಿಹಿ ಸುದ್ದಿ ಸಿಕ್ಕಿದ್ದು, ಶೂಟರ್ ಮನು ಭಾಕರ್ ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ಈ ಮೂಲಕ ಪದಕದ ನಿರೀಕ್ಷೆ ಮೂಡಿಸಿದ್ದಾರೆ.
22 ವರ್ಷದ ಮನು ಭಾಕರ್ ಅವರು ಅರ್ಹತಾ ಸ್ಪರ್ಧೆಯಲ್ಲಿ 600 ಅಂಕಗಳಿಗೆ 580 ಅಂಕಗಳನ್ನು ಗಳಿಸಿದ್ದು, ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವುದರೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಒಟ್ಟು 45 ಅಥ್ಲೀಟ್‌ಗಳು ಭಾಗವಹಿಸಿದ್ದ ಅರ್ಹತಾ ಸುತ್ತಿನಲ್ಲಿ 580 ಅಂಕಗಳನ್ನು ಗಳಿಸಿದ ಮನು ಮೂರನೇ ಸ್ಥಾನ ಗಳಿಸಿದರೆ, ಅದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಇನ್ನೋರ್ವ ಶೂಟರ್ ರಿದಮ್ ಸಾಂಗ್ವಾನ್ ಅವರು 15ನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.
ಮೂರು ವರ್ಷಗಳ ಹಿಂದೆ ಪಿಸ್ತೂಲ್ ದೋಷದಿಂದಾಗಿ ಫೈನಲ್ ಪ್ರವೇಶಿಸಲು ವಿಫಲರಾಗಿದ್ದ ಮನು ಭಾಕರ್ ಅವರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನ ಆರು ಸುತ್ತಿನಲ್ಲೂ ಮನು ಅದ್ಭುತ ಪ್ರದರ್ಶನ ನೀಡಿದರು. ಮೊದಲ ಸೀರಿಸ್ನಲ್ಲಿ 100ಕ್ಕೆ 97 ಅಂಕ ಕಲೆಹಾಕಿದ ಮನು, ಎರಡನೇ ಸೀರಿಸ್ನಲ್ಲಿ 97 ಅಂಕಗಳನ್ನು ಸಂಪಾಧಿಸಿದರು. ಈ ಅಮೋಘ ಪ್ರದರ್ಶನದ ಮೂಲಕ ಮನು, ಮೊದಲಾರ್ಧ ಮುಗಿಯುವ ವೇಳೆಗೆ 300ಕ್ಕೆ 292 ಅಂಕಗಳನ್ನು ಸಂಪಾಧಿಸಿ, ಫೈನಲ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು.
Advertisement