
ಪ್ಯಾರಿಸ್: ಅಗ್ರ ಶ್ರೇಯಾಂಕದ ನಿತೇಶ್ ಕುಮಾರ್ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್ ಎಸ್‌ಎಲ್ 3 ವಿಭಾಗದ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಬ್ರಿಟನ್‌ನ ಡೇನಿಯಲ್ ಬೆಥಾಲ್ ಅವರನ್ನು 21-14, 18-21, 23-21 ರಿಂದ ಕಠಿಣ ಪಂದ್ಯದಲ್ಲಿ ಸೋಲಿಸುವ ಮೂಲಕ ಚಿನ್ನದ ಪದಕ ಗೆದ್ದರು.
ಅವನಿ ಲೆಖರಾ ನಂತರ, ಇದು 2024ರ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕವಾಗಿದೆ. ಎರಡು ಚಿನ್ನ, ಮೂರು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಒಳಗೊಂಡಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಇದು ಒಟ್ಟಾರೆ ಭಾರತಕ್ಕೆ ಒಂಬತ್ತನೇ ಪದಕವಾಗಿದೆ.
ಮೊದಲ ಗೇಮ್ ಅನ್ನು 21-14 ರಿಂದ ಗೆದ್ದುಕೊಂಡರೂ, ನಿತೀಶ್ ಅವರು ನೆಟ್‌ನಲ್ಲಿ ಹಿಡಿತ ಸಾಧಿಸಲು ಕಷ್ಟಪಟ್ಟರು. ಇದಕ್ಕೂ ಮೊದಲು, ನಿತೀಶ್ ಹತ್ತು ಪಂದ್ಯಗಳಲ್ಲಿ ಬೆಥಾಲ್ ಅನ್ನು ಸೋಲಿಸಲಿಲ್ಲ. ಆದರೆ ಈ ಬಾರಿ ಅವರು ತಮ್ಮ ವೃತ್ತಿಜೀವನದ ಅತಿದೊಡ್ಡ ಗೆಲುವು ಸಾಧಿಸಿದರು.
ಮತ್ತೊಂದೆಡೆ, 2020ರ ಟೋಕಿಯೊ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಭಾರತದ ಪ್ರಮೋದ್ ಭಗತ್ ವಿರುದ್ಧದ ಫೈನಲ್‌ನಲ್ಲಿ ಸೋಲು ಕಂಡಿದ್ದ ಬ್ರಿಟಿಷ್ ಪ್ಯಾರಾ-ಶಟ್ಲರ್ ಬೆಥಾಲ್‌ಗೆ ಇದು ಮತ್ತೊಮ್ಮೆ ಹೃದಯವಿದ್ರಾವಕ ಕ್ಷಣವಾಗಿದೆ. ಆಗ ಭಗತ್ ಎದುರು ಎರಡು ನೇರ ಗೇಮ್ ಗಳಲ್ಲಿ ಸೋತಿದ್ದ ಬೆಥಾಲ್ ಈ ಬಾರಿ ಕಠಿಣ ಹೋರಾಟ ನೀಡಿದರೂ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.
Advertisement