
ನವದೆಹಲಿ: 2030 ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುವ ಭಾರತದ ಬಿಡ್ ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. "ವಿಶ್ವ ದರ್ಜೆಯ ಕ್ರೀಡಾಂಗಣಗಳು, ಅತ್ಯಾಧುನಿಕ ತರಬೇತಿ ಸೌಲಭ್ಯಗಳು ಮತ್ತು ಉತ್ಸಾಹಭರಿತ ಕ್ರೀಡಾ ಸಂಸ್ಕೃತಿ"ಯಿಂದಾಗಿ ಅಹಮದಾಬಾದ್ ಅನ್ನು ಆತಿಥೇಯ ನಗರವಾಗಿ ಪ್ರಸ್ತಾಪಿಸಲಾಗಿದೆ.
ಕಾಮನ್ ವೆಲ್ಸ್ ಕ್ರೀಡಾಕೂಟ ಆಯೋಜಿಸುವ ಕುರಿತು ಮಾರ್ಚ್ ತಿಂಗಳಲ್ಲಿ ಭಾರತ ಆಸಕ್ತಿ ವ್ಯಕ್ತಪಡಿಸಿತ್ತು. ತದನಂತರ ಈ ಪ್ರಸ್ತಾವನೆಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಅನುಮೋದನೆ ನೀಡಿತ್ತು. ಇದಾದ ಕೆಲವೇ ದಿನಗಳಲ್ಲಿ ಇದೀಗ ಕೇಂದ್ರ ಸಚಿವ ಸಂಪುಟವು ಸಮ್ಮತಿ ನೀಡಿದೆ.
"ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಕಾಮನ್‌ವೆಲ್ತ್ ಗೇಮ್ಸ್ (CWG) 2030 ಗಾಗಿ ಬಿಡ್ ಸಲ್ಲಿಸುವ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿದೆ ಎಂದು PIB ಹೇಳಿಕೆಯಲ್ಲಿ ತಿಳಿಸಿದೆ.
ಸಂಬಂಧಿತ ಸಚಿವಾಲಯಗಳು, ಇಲಾಖೆಗಳು ಮತ್ತು ಪ್ರಾಧಿಕಾರಗಳಿಂದ ಅಗತ್ಯ ಖಾತ್ರಿಗಳೊಂದಿಗೆ ಆತಿಥೇಯ ಸಹಯೋಗ ಒಪ್ಪಂದಕ್ಕೆ (HCA) ಸಹಿ ಹಾಕಲು ಮತ್ತು ಬಿಡ್ ಅಂಗೀಕರಿಸಲ್ಪಟ್ಟ ಸಂದರ್ಭದಲ್ಲಿ ಗುಜರಾತ್ ಸರ್ಕಾರಕ್ಕೆ ಅಗತ್ಯವಿರುವ ಅನುದಾನ ಮಂಜೂರಾತಿಗೂ ಸಹಿ ಹಾಕಲು ಅನುಮೋದನೆಯನ್ನು ನೀಡಿದೆ ಎಂದು ಮಾಹಿತಿ ನೀಡಲಾಗಿದೆ.
ಕಾಮನ್ ವೆಲ್ತ್ ಕ್ರೀಡಾಕೂಟಕ್ಕಾಗಿ ಬಿಡ್ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದ್ದು, IOA ಮುಂದಿನ 48 ಗಂಟೆಗಳಲ್ಲಿ ಔಪಚಾರಿಕತೆಯನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಭಾರತವು ಕೊನೆಯದಾಗಿ 2010 ರಲ್ಲಿ CWG ಅನ್ನು ಆಯೋಜಿಸಿತ್ತು.
ಗ್ಲಾಸ್ಗೋದಲ್ಲಿ ನವೆಂಬರ್ ಕೊನೆಯ ವಾರದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಸಾಮಾನ್ಯ ಸಭೆಯು ಅತಿಥೇಯ ದೇಶವನ್ನು ನಿರ್ಧರಿಸುತ್ತದೆ. ಬಜೆಟ್‌ನ ನಿರ್ಬಂಧಗಳನ್ನು ಉಲ್ಲೇಖಿಸಿ ಕೆನಡಾ ರೇಸ್‌ನಿಂದ ಹಿಂದೆ ಸರಿದಿದ್ದರಿಂದ ಭಾರತ ಕ್ರೀಡಾಕೂಟ ಆಯೋಜಿಸಲು ಉತ್ಸುಕವಾಗಿದೆ.
ಅಹಮದಾಬಾದ್ ನಲ್ಲಿ ಕ್ರೀಡಾಕೂಟ ಆಯೋಜನೆ: ಅಹಮದಾಬಾದ್ ಕ್ರೀಡಾಕೂಟ ಆಯೋಜನೆಗೆ ಸೂಕ್ತವಾದ ಆತಿಥೇಯ ನಗರವಾಗಿದೆ ಎಂದು ಕ್ಯಾಬಿನೆಟ್ ಸಭೆ ಬಳಿಕ PIB ಹೇಳಿಕೆಯಲ್ಲಿ ತಿಳಿಸಿದೆ. ಅಹಮದಾಬಾದ್ ವಿಶ್ವ ದರ್ಜೆಯ ಕ್ರೀಡಾಂಗಣಗಳು, ಅತ್ಯಾಧುನಿಕ ತರಬೇತಿ ಸೌಲಭ್ಯಗಳು ಮತ್ತು ಉತ್ಸಾಹಭರಿತ ಕ್ರೀಡಾ ಸಂಸ್ಕೃತಿಯನ್ನು ನೀಡುವ ಆದರ್ಶ ಆತಿಥೇಯ ನಗರವಾಗಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣವು ಈಗಾಗಲೇ 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಅನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ" ಎಂದು ಅದು ಹೇಳಿದೆ.
ಭಾರತವು 2036 ರ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸುವ ಗುರಿಯನ್ನು ಹೊಂದಿದ್ದು, ಅಹಮದಾಬಾದ್ ಅತಿಥೇಯ ನಗರವಾಗಿ ಮುಂಚೂಣಿಯಲ್ಲಿದೆ. ಈ ಮಹತ್ವಾಕಾಂಕ್ಷೆಯೊಂದಿಗೆ ನಗರದ ಕ್ರೀಡಾ ಮೂಲಸೌಕರ್ಯವನ್ನು ಮೇಲ್ದರ್ಜೇಗೇರಿಸಲಾಗುತ್ತಿದೆ. ಇದೀಗ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗಳನ್ನು ಆಯೋಜಿಸುತ್ತಿದೆ.
Advertisement