
ಪ್ಯಾರಿಸ್: ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸೆಮಿಫೈನಲ್‌ನಲ್ಲಿ ಚೀನಾದ ಜೋಡಿಯ ವಿರುದ್ಧ ಸೋತಿದ್ದಾರೆ. ಇದು ಜೋಡಿಯ ಎರಡನೇ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕವಾಗಿದೆ.
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಂ.1 ಡಬಲ್ಸ್ ಜೋಡಿಯಾದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಕಂಚಿನ ಪದಕ ಗೆಲ್ಲುವುದರೊಂದಿಗೆ ತಮ್ಮ ಅಭಿಯಾನ ಮುಗಿಸಿದ್ದಾರೆ. ಸೆಮಿಫೈನಲ್‌ನಲ್ಲಿ ವಿಶ್ವ 11ನೇ ಶ್ರೇಯಾಂಕಿತ ಚೈನಿಸ್ ಜೋಡಿ ಚೆನ್ ಬೊ ಯಾಂಗ್-ಲಿಯು ಯಿ ಎದುರು 19-21, 21-18, 12-21 ಸೆಟ್‌ಗಳಲ್ಲಿ ಸೋಲುವ ಮೂಲಕ ತಮ್ಮ ಅಭಿಯಾನ ಮುಗಿಸಿದ್ದಾರೆ. ಈ ಮೂಲಕ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈ ಜೋಡಿ ಎರಡನೇ ಬಾರಿಗೆ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ.
ಇದಕ್ಕೂ ಮೊದಲು ಇಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪದಕ ಖಚಿತಪಡಿಸಿಕೊಂಡಿತು. ಪುರುಷರ ಡಬಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಜೋಡಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಸೆಮಿಫೈನಲ್‌ಗೇರಿತು. ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.3 ಜೋಡಿ ಸಾತ್ವಿಕ್-ಚಿರಾಗ್, ಮಲೇಷ್ಯಾದ 2 ಬಾರಿ ಒಲಿಂಪಿಕ್ ಪದಕ ವಿಜೇತ ಆ್ಯರೊನ್ ಚಿಯಾ-ಸೊಹ್ ವೂಯ್ ಯಿಕ್ ವಿರುದ್ಧ 21-12, 21-9ರಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ ನಾಲ್ಕು ವರ್ಷಗಳ ಹಿಂದೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿಯಾ-ಸೊಹ್ ವಿರುದ್ಧ ಸೋತು ಪದಕ ತಪ್ಪಿಸಿಕೊಂಡಿದ್ದಕ್ಕೆ ಭಾರತೀಯ ಜೋಡಿ ಸೇಡು ತೀರಿಸಿಕೊಂಡಿತು.
ಸಾತ್ವಿಕ್-ಚಿರಾಗ್‌ಗೆ ಇದು 2ನೇ ವಿಶ್ವ ಚಾಂಪಿಯನ್‌ಶಿಪ್ ಪದಕ. 2022ರಲ್ಲಿ ಈ ಜೋಡಿ ಕಂಚು ಗೆದ್ದಿತ್ತು. ಸಾತ್ವಿಕ್ ಮತ್ತು ಚಿರಾಗ್ ಇಬ್ಬರೂ ಪಂದ್ಯದ ಮೊದಲ ಪಂದ್ಯವನ್ನು ಗೆಲ್ಲಲು ವಿಫಲರಾದರು, 19-21 ಅಂತರದಿಂದ ಸ್ವಲ್ಪದರಲ್ಲೇ ಸೋತರು. ಆದಾಗ್ಯೂ, ಅವರು ಎರಡನೇ ಪಂದ್ಯದಲ್ಲಿ ಉತ್ತಮ ಚೇತರಿಕೆ ಸಾಧಿಸುವಲ್ಲಿ ಯಶಸ್ವಿಯಾದರು, ಅದನ್ನು 21-18 ಅಂತರದಿಂದ ಗೆದ್ದರು, ಅಂತಿಮವಾಗಿ ಮೂರನೇ ಪಂದ್ಯವನ್ನು 12-21 ಅಂತರದಿಂದ ಸೋತರು.
Advertisement