

ನವದೆಹಲಿ: ಒಲಿಂಪಿಕ್ ಕನಸನ್ನು ಬೆನ್ನಟ್ಟಲು 18 ತಿಂಗಳ ವಿರಾಮದ ನಂತರ ಮತ್ತೆ ವಾಪಸ್ಸಾಗುವುದಾಗಿ ಕುಸ್ತಿಪಟು ವಿನೇಶ್ ಫೋಗಟ್ ಘೋಷಿಸಿದ್ದಾರೆ. ಕುಸ್ತಿ ನಿವೃತ್ತಿ ನಿರ್ಧಾರದಿಂದ ಹೊರಬಂದಿರುವುದಾಗಿ ಅವರು ಶುಕ್ರವಾರ ದೃಢಪಡಿಸಿದ್ದಾರೆ.
ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಫೈನಲ್‌ನಲ್ಲಿ ವಿವಾದಾತ್ಮಕ ಅನರ್ಹತೆಯ ನಂತರ ಫೋಗಟ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದರು. ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಚಿನ್ನದ ಪದಕಕ್ಕೆ ಅವರು ಲಗ್ಗೆ ಇಟ್ಟಿದ್ದರು.
ಫೈನಲ್ ನಲ್ಲಿ ಅಮೆರಿಕದ ಸಾರಾ ಆನ್ ಹಿಲ್ಡೆಬ್ರಾಂಡ್ ವಿರುದ್ಧ ಸ್ಪರ್ಧಿಸಲು ಸಿದ್ಧರಾಗಿದ್ದರು. ಆದರೆ ತೂಕದ ಮಿತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಅನರ್ಹಗೊಳಿಸಲಾಗಿತ್ತು. ಇದರಿಂದ ಒಲಿಂಪಿಕ್ ಪದಕವನ್ನು ಕಳೆದುಕೊಂಡಿದ್ದ ಫೋಗಟ್ ಕುಸ್ತಿಗೆ ವಿದಾಯ ಹೇಳಿದ್ದರು. ಆದರೆ, ಇದೀಗ ತನ್ನ ನಿವೃತ್ತಿ ನಿರ್ಧಾರವನ್ನು ಹಿಂಪಡೆದಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವೇ ಅಂತಿಮವೇ ಎಂದು ಜನರು ಕೇಳುತ್ತಲೇ ಇದ್ದರು. ಇದಕ್ಕೆ ದೀರ್ಘಕಾಲದವರೆಗೆ ನನ್ನ ಬಳಿ ಉತ್ತರವಿರಲಿಲ್ಲ. ಒತ್ತಡದಿಂದ, ನಿರೀಕ್ಷೆಗಳಿಂದ, ನನ್ನ ಸ್ವಂತ ಮಹತ್ವಾಕಾಂಕ್ಷೆಗಳಿಂದ ದೂರವಿರಬೇಕಾಗಿತ್ತು. ವರ್ಷಗಳಲ್ಲಿ ಮೊದಲ ಬಾರಿಗೆ ನನ್ನಷ್ಟಕ್ಕೆ ನಾನೇ ಆತ್ಮಾವಲೋಕನ ಮಾಡಿಕೊಂಡೆ, "ನನ್ನ ಕ್ರೀಡಾ ಬದುಕು, ಸಾಧನೆಗಳು, ಸಂದ ಪ್ರಶಸ್ತಿ ಪುರಸ್ಕಾರಗಳು, ಆಘಾತ, ತ್ಯಾಗ ಎಲ್ಲವನ್ನೂ ಅರ್ಥ ಮಾಡಿಕೊಂಡೆ. ಪ್ರಪಂಚವು ಎಂದಿಗೂ ನೋಡದ ನನ್ನನ್ನು ನಾನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಂಡೆ. ಅದರಲ್ಲಿ ನಾನು ಸತ್ಯವನ್ನು ಕಂಡುಕೊಂಡಿದ್ದೇನೆ, ಇನ್ನೂ ಈ ಕ್ರೀಡೆಯನ್ನು ಪ್ರೀತಿಸುತ್ತೇನೆ. ಇನ್ನೂ ಸ್ಪರ್ಧಿಸಲು ಬಯಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
‘ಬೆಂಕಿ ಎಂದಿಗೂ ಆರುವುದಿಲ್ಲ. ಮೌನದಲ್ಲಿ, ನಾನು ಮರೆತಿದ್ದ ಒಂದು ವಿಷಯವನ್ನು ನಾನು ಕಂಡುಕೊಂಡೆ. ‘ಬೆಂಕಿ ಎಂದಿಗೂ ಆರುವುದಿಲ್ಲ.' ಅದು ಆಯಾಸ ಮತ್ತು ಶಬ್ದದ ಕೆಳಗೆ ಹೂತುಹೋಗಿತ್ತು.ಶಿಸ್ತು, ದಿನಚರಿ, ಹೋರಾಟ... ಅದು ನನ್ನ ಬದುಕಿನಲ್ಲಿ ಬೇರೂರಿದೆ. ನಾನು ಎಷ್ಟೇ ದೂರ ಹೋದರೂ, ನನ್ನ ಒಂದು ಭಾಗವು ಅಖಾಡದ ಮೇಲೆಯೇ ಉಳಿದಿದೆ. ಹಾಗಾಗಿ ಇಲ್ಲಿ ನಾನು, ನಿರ್ಭೀತ ಹೃದಯ ಮತ್ತು ಯಾರಿಗೂ ಬಗ್ಗದ ಮನೋಭಾವದೊಂದಿಗೆ 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತಯಾರಿ ನಡೆಸಲಿದ್ದೇನೆ. ಈ ಬಾರಿ ನನ್ನ ಬೆಂಬಲಕ್ಕೆ ನನ್ನ ಮಗ ಕೂಡ ಇರುತ್ತಾನೆ ಎಂದು ಬರೆದುಕೊಂಡಿದ್ದಾರೆ.
ಅತ್ಯುತ್ತಮ ವೃತ್ತಿಜೀವನದಲ್ಲಿ ಫೋಗಟ್ ಎರಡು ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಕಂಚಿನ ಪದಕಗಳನ್ನು (2019 ಮತ್ತು 2022), ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ (2018) ಮತ್ತು ಕಂಚು (2014) , ಅಲ್ಲದೇ ಮೂರು ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕಗಳನ್ನು (2014, 2018, 2022) ಗೆದಿದ್ದಾರೆ. ಅವರು 2021 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು.
Advertisement