Saina Nehwal-'ಇನ್ನು ನನ್ನ ಕೈಯಿಂದ ಸಾಧ್ಯವಿಲ್ಲ': ಬ್ಯಾಡ್ಮಿಂಟನ್ ವೃತ್ತಿ ಜೀವನಕ್ಕೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಣೆ
ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ನಿಂದ ನಿವೃತ್ತಿ ಘೋಷಿಸಿದ್ದು, ವೃತ್ತಿಪರ ಕ್ರೀಡೆಗೆ ಬೇಕಾದ ಅಗತ್ಯಗಳನ್ನು ತಮ್ಮ ದೇಹ ಇನ್ನು ಮುಂದೆ ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ದೀರ್ಘಕಾಲದ ಮೊಣಕಾಲಿನ ಸಮಸ್ಯೆಯಿಂದಾಗಿ ಸೈನಾ ನೆಹ್ವಾಲ್ ಕಳೆದ ಎರಡು ವರ್ಷಗಳಿಂದ ಆಟದಿಂದ ಹೊರಗುಳಿದಿದ್ದಾರೆ. ಕೊನೆಯ ಬಾರಿಗೆ 2023 ರಲ್ಲಿ ಸಿಂಗಾಪುರ ಓಪನ್‌ನಲ್ಲಿ ಉನ್ನತ ಮಟ್ಟದಲ್ಲಿ ಆಡಿದ್ದರು. 2012 ರ ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಪಾಡ್‌ಕ್ಯಾಸ್ಟ್ ಒಂದರಲ್ಲಿ ಮಾತನಾಡುತ್ತಾ ಈ ಘೋಷಣೆ ಮಾಡಿದ್ದಾರೆ.
ನಾನು ಎರಡು ವರ್ಷಗಳ ಹಿಂದೆ ಆಟವಾಡುವುದನ್ನು ನಿಲ್ಲಿಸಿದ್ದೆ. ನಾನು ನನ್ನ ಸ್ವಂತ ಇಚ್ಛೆಯಂತೆ ಕ್ರೀಡಾ ಕ್ಷೇತ್ರಕ್ಕೆ ಬಂದದ್ದು, ಈಗಲೂ ನನ್ನ ಸ್ವಂತ ಇಚ್ಛೆಯಂತೆ ನಿರ್ಗಮಿಸುತ್ತಿದ್ದೇನೆ, ಆದ್ದರಿಂದ ಅದನ್ನು ಘೋಷಿಸುವ ಅಗತ್ಯವಿಲ್ಲ ಎಂದು ಸೈನಾ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದರು.
ಮಾಜಿ ವಿಶ್ವ ನಂ. 1 ಬ್ಯಾಡ್ಮಿಂಟನ್ ಆಟಗಾರ್ತಿ, ತನ್ನ ಮೊಣಕಾಲಿನ ಸಮಸ್ಯೆಯಿಂದಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ.
ನನಗೆ ಸಂಧಿವಾತವಿದೆ, ನನ್ನ ಹೆತ್ತವರಿಗೆ ಅದು ತಿಳಿಯಬೇಕಾಗಿತ್ತು, ನನ್ನ ತರಬೇತುದಾರರು ಅದನ್ನು ತಿಳಿದುಕೊಳ್ಳಬೇಕಾಗಿತ್ತು, ನಾನು ಅವರಿಗೆ,ಬಹುಶಃ ನಾನು ಇನ್ನು ಮುಂದೆ ಆಟವಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೇನೆ ಎಂದರು. ಔಪಚಾರಿಕವಾಗಿ ನಾನು ನಿವೃತ್ತಿ ಘೋಷಿಸಿಲ್ಲ, ಆದರೆ ಜನರು ನಾನು ಆಡದಿರುವುದನ್ನು ನೋಡಿ ಅರ್ಥಮಾಡಿಕೊಳ್ಳುತ್ತಾರೆ ಎಂದಿದ್ದಾರೆ.
ನನ್ನ ನಿವೃತ್ತಿಯನ್ನು ಘೋಷಿಸುವುದು ಅಷ್ಟು ದೊಡ್ಡ ವಿಷಯ ಎಂದು ನಾನು ಭಾವಿಸಿರಲಿಲ್ಲ. ನನ್ನ ಮೊಣಕಾಲು ಇತ್ತೀಚೆಗೆ ಸಪೋರ್ಟ್ ಮಾಡುತ್ತಿಲ್ಲ, ಹೀಗಾಗಿ ಸಮಯ ಮುಗಿದಿದೆ ಎಂದು ನಾನು ಭಾವಿಸಿದೆ ಎಂದರು. ವಿಶ್ವದ ಅತ್ಯುತ್ತಮ ಆಟಗಾರ್ತಿಯಾಗಲು ಎಂಟರಿಂದ ಒಂಬತ್ತು ಗಂಟೆಗಳ ಕಾಲ ತರಬೇತಿ ಪಡೆಯುತ್ತಿದ್ದೆ, ಈಗ ನನ್ನ ಮೊಣಕಾಲು ಒಂದು ಅಥವಾ ಎರಡು ಗಂಟೆ ಆಡಲು ಸಾಧ್ಯವಾಗುತ್ತಿಲ್ಲ ಎಂದರು.
2016 ರ ರಿಯೋ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್ ವೃತ್ತಿಜೀವನಕ್ಕೆ ಅಪಾಯಕಾರಿಯಾದ ಮೊಣಕಾಲಿನ ಗಾಯಕ್ಕೆ ಒಳಗಾದರು. ಆದಾಗ್ಯೂ, ಅವರು 2017 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದರು. ಅವರ ಮೊಣಕಾಲು ಸಮಸ್ಯೆ ಸಾಧನೆಗೆ ಅಡ್ಡಿಯಾಗುತ್ತಲೇ ಇತ್ತು.
2024 ರಲ್ಲಿ ತಮ್ಮ ಮೊಣಕಾಲುಗಳಲ್ಲಿ ಸಂಧಿವಾತ ಇದೆ ಎಂದು ಗೊತ್ತಾಯಿತು. ನಂತರ ಕಾರ್ಟಿಲೆಜ್ ಸವೆದುಹೋಗಿದೆ ಎಂದು ಪರೀಕ್ಷೆ ಮಾಡಿ ವೈದ್ಯರು ಹೇಳಿದ್ದರು. ಇದರಿಂದಾಗಿ ಉನ್ನತ ಮಟ್ಟದ ಸ್ಪರ್ಧೆಗೆ ಅಗತ್ಯವಾದ ತೀವ್ರ ತರಬೇತಿ ಪಡೆಯುವುದು ಅವರಿಗೆ ಕಷ್ಟವಾಗುತ್ತಿತ್ತು.

