

ಯಕ್ಷದೇವತೆ,
ಹಾಯ್ ಹೇಗಿದ್ದೀರಾ? ನನಗೂ ಆಶ್ಚರ್ಯವಾಗುತ್ತಿದೆ. ನಿಮ್ಮನ್ನು ಏಕವಚನದಲಿ ಮಾತನಾಡಿಸುವುದಕ್ಕೆ ಆಗುತ್ತಿಲ್ಲ. ಇದೇನು ಹೀಗೆ ಮಾತನಾಡುತ್ತಿದ್ದಾನೆ ಎಂದು ಪ್ರಶ್ನೆಗಳು ಏಳುತ್ತಿವೆಯೇ...? ನನ್ನ ಬದುಕಿನ ಪುಟಗಳಲಿ ನಿಮ್ಮ ಪಾತ್ರ ಏನು ಎಂದು ಹೇಳಬಯಸಿದ್ದೇನೆ. ಕೇಳಲು ಸಿದ್ದರಿದ್ದೀರಾ...?
ಯಾವ ಅಮೃತ ಗಳಿಗೆಯಲ್ಲಿ ನನ್ನ ಬಾಳಿಗೆ ಹೆಜ್ಜೆ ಇಟ್ಟಿರೋ ಕಾಣೆ... ಪೋಲಿ, ಪೋಕರಿ ಎಂದು ಕೆಟ್ಟ ಜಂತುವಿನಂತೆ ನೋಡುತ್ತಿದ್ದ ಜನ ಇಂದು ನನ್ನನ್ನು ನೋಡಿ ಸುಖವಾಗಿರು ಎಂದು ಹರಸುವಂತೆ ಮಾಡಿದವರೇ ನೀವು. ಸ್ನೇಹದ ಪಾಲಿನ ಕೊಹಿನೂರ್ ವಜ್ರ ನೀವು ಎಂದರೆ ತಪ್ಪಾಗಲಾರದು. ಬದುಕಿನ ಸುರಂಗದಲಿ ಹಾದಿ ತಪ್ಪಿ ನಡೆಯುತಿದ್ದವನಿಗೆ ಬೆಳ್ಳಿಯ ಕಿರಣಗಳಂತೆ ಬಳಿಸಾರಿ ಒಂದೊಳ್ಳೇ ಬೆಳಕಿನ ಹಾದಿಯಲಿ ನಡೆಯಲು ಬೇಕಿದ್ದ ಯೋಚನೆಗಳ ಮನದಲಿ ತುಂಬಿದ ಅತ್ಯಮೂಲ್ಯ ದೀವಿಗೆ ನೀವು. ಲೋಕದ ಕಣ್ಣಲಿ ಅಪ್ರಯೋಜಕ ಎನಿಸಿಕೊಂಡವನಿಗೆ ಬಂಗಾರದ ಮೌಲ್ಯ ಬರುವಂತೆ ಮಾಡಿದವರು ನೀವು. ಇನ್ನೆಂತಹ ಪದಗಳ ಉಪಯೋಗಿಸಲಿ? ನಾನು ಓದಿದ ಕನ್ನಡ ಪದಕೋಶದಲಿರುವ ಪದಗಳೇ ನೆನಪಿಗೆ ಬರುತ್ತಿಲ್ಲ. ನಿಜ ಹೇಳಬೇಕೆಂದರೆ ಈ ಬಾಳು ಪರಿಚಯಿಸಿದ ಪುಟ್ಟ ಗುರು ನೀವು.
ಸ್ನೇಹದ ಕಡಲಲ್ಲಿ ತೇಲುತ್ತಿದ್ದ ನಮಗೆ ಜನರ ಮಾತುಗಳು ಕೇಳಿಸಲೇ ಇಲ್ಲ. ನಮ್ಮಿಬ್ಬರ ಓಡಾಟಕ್ಕೆ ಪ್ರೀತಿ ಎಂದು ನಾಮಾಂಕಿತ ಮಾಡಿದ ಈ ಸಮಾಜ ನನ್ನ ತಲೆಗೂ ಅದರ ಹುಳು ಬಿಟ್ಟಿದ್ದು ನಿಮಗೆ ತಿಳಿಯಲೇ ಇಲ್ಲ. ಸ್ನೇಹದ ಸಲುಗೆಯಲಿ ಏಕವಚನಕ್ಕೆ ತಿರುಗಿದ ನಮ್ಮ ಮಾತುಗಳನ್ನು ನಾನೂ ತಪ್ಪಾಗಿ. ಗ್ರಹಿಸಿದೆ. ಕೊನೆಗೊಂದು ಕರಾಳ ಗಳಿಗೆಯಲ್ಲಿ ಮಾಡಿದ ಪ್ರೀತಿಯ ಪ್ರಸ್ತಾಪಕ್ಕೆ ನಿಮ್ಮ ಉತ್ತರ ಕೇಳಿ ದಿಗ್ಭ್ರಮೆಗೊಂಡಿದ್ದಂತೂ ನಿಜ. ಅಂದಿನ ನಿಮ್ಮ ಮಾತುಗಳು ಕತ್ತಿಯಂತೆ ಹೃದಯವ ಇರಿದು ಗೆಳೆತನ ದೋಣಿ ವಿಹಾರಕ್ಕೆ ಅಂತ್ಯ ಹಾಡಿತ್ತು.
ನಿಜ ಹೇಳಬೇಕೆಂದರೆ, ನೀವು ನನ್ನನ್ನು ಯಾವತ್ತೂ ಆ ದೃಷ್ಟಿಯಿಂದ ನೋಡಿಲ್ಲ ಎನ್ನುವುದು ತಡವಾಗಿ ಅರ್ಥವಾಯಿತು. ನಾನೊಬ್ಬ ಸಾಮಾನ್ಯ ಮನುಷ್ಯ ಕಣ್ರೀ. ನನ್ನನ್ನು ಸರಿ ದಾರಿಗೆ ತರಲು ದೇವಲೋಕದಿಂದ ಧರಗಿಳಿದ ಯಕ್ಷ ಕನ್ಯೆ ನೀವು. ಕಲ್ಲು, ಬಂಡೆಗಳ ಹಾದಿಯ ಹಿಡಿದು ದಾರಿ ತಪ್ಪಿದ ತೆಪ್ಪದ ಸುಖದ ತೀರ ಸೇರಿಸಿದ ಹಿರಿಮೆ ನಿಮಗೆ ಸಲ್ಲುತ್ತದೆ.
ಮೊನ್ನೆ ಗಾಂಧಿ ಬಜಾರಿನಲ್ಲಿ ಭಾವೀ ಪತಿಯ ಜೊತೆಗಿದ್ದ ನಿಮ್ಮನ್ನು ನೋಡಿದೆ. ಅದ್ಭುತ ಜೋಡಿ ನಿಮ್ಮದು. ನಾಳೆಗಳಿಗೆ ನನ್ನದೊಂದು ಹಾರೈಕೆ ತಿಳಿಸಬೇಕೆಂದು ಈ ಕೆಟ್ಟ ಹೃದಯ ಪಟ್ಟು ಹಿಡಿದಿತ್ತು. ಅದಕ್ಕಾಗಿ ಪತ್ರದ ಕೈಗೆ ಮನವ ನೀಡಿದ್ದೇನೆ. ತಿಳಿ ನೀರಿನ ಸ್ನೇಹದ ಕೆರೆಯ ರಾಡಿ ಮಾಡಿದವ ನಾನು. ಒಂದೇ ಒಂದು ಸಾರಿ ಮನ್ನಿಸಿ ಬಿಡಿ. ಈ ಜನ್ಮಕ್ಕೆ ತೃಪ್ತನಾಗುವೆನು. ಮುಂದಿನ ಜನ್ಮ ಎನ್ನುವುದಿದ್ದರೆ ಒಬ್ಬ ಒಳ್ಳೆಯ ಗೆಳೆಯನಾಗಿ ಮತ್ತೆ ನನ್ನ ಜೀವನದಲ್ಲಿ ನಿಮ್ಮ ಹೆಜ್ಜೆಗಳ ಬಯಸುವೆನು.
ನನ್ನ ನೆನಪೂ ನಿಮಗೆ ಬಾರದೆಂದು ಗೊತ್ತು. ಆದರೆ ದೇವತೆಯಂಥ ನಾವಿಕಳ ಪ್ರತಿದಿನ ನೆನೆದು ಹೃದಯದ ದೇಗುಲದಲ್ಲಿ ಪೂಜಿಸುತ್ತಿರುವ ಹುಲುಮಾನವ ನಾನು. ನನ್ನ ತಪ್ಪನ್ನು ಸಾಧ್ಯವಾದರೆ ದಯವಿಟ್ಟು ಕ್ಷಮಿಸಿ.
ನಿಮ್ಮ ಕೆಟ್ಟ ಗೆಳೆಯ