ಉಪ್ಪುಕಡಲು

ನಮ್ಮ ನಾಡು-ನುಡಿಗೆ ಜ್ಞಾನದ ದೀಪ ಹಚ್ಚಿದವರು ಪ್ರೊ.ಎಸ್.ವಿ. ಪರಮೇಶ್ವರಭಟ್ಟರು.
ಉಪ್ಪುಕಡಲು
Updated on

ನಮ್ಮ ನಾಡು-ನುಡಿಗೆ ಜ್ಞಾನದ ದೀಪ ಹಚ್ಚಿದವರು ಪ್ರೊ.ಎಸ್.ವಿ. ಪರಮೇಶ್ವರಭಟ್ಟರು. 1914ರ ಫ್ರೆಬ್ರವರಿ 8ರಂದು ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿ ಜನಿಸಿದರು. ಈ ಜನ್ಮದಿನದ ಸಂದರ್ಭದಲ್ಲಿ ಅವರ ಸಾಹಿತ್ಯ ಕೊಡುಗೆಗಳನ್ನು ಅವಲೋಕಿಸೋಣ...

'ಪ್ರೀತಿಯ ಕರೆ ಕೇಳಿ... ಆತ್ಮನ ಮೊರೆ ಕೇಳಿ... ನೀ ಬಂದು ನಿಂತಿಲ್ಲಿ ದೀಪಹಚ್ಚ...' ಎಂದು ನಮ್ಮ ನಾಡು- ನುಡಿಗೆ ಜ್ಞಾನದೀಪವನ್ನು ಬೆಳಗಿದವರು ಪ್ರೊ.ಎಸ್.ವಿ. ಪರಮೇಶ್ವರಭಟ್ಟರು.
ಬಂಗಾರದಂತಹ ನಾಕೊಟ್ಟ ದಿನವನು
ನೀ ಮಣ್ಣು ಮಾಡಿದೆಯೆಂದು
ಕೆಂಪನೆ ಮುಖಮಾಡಿ ನನ್ನನೇನೋಳ್ಪನು
ದಿನಪನು ತಾ ಪೋಗುವಂದು
- ಎಂದು, ದಿನವನ್ನು ಕಳೆಯುವವರ ಕುರಿತು, ದಿನಕರ ಮರುಗುತ್ತಾ ಮುಳುಗುತ್ತಾನೆ ಎಂಬುದು ಎಸ್.ವಿ. ಅವರ ಜನಪ್ರಿಯ ನುಡಿ. 86 ವರ್ಷಗಳ ತುಂಬು ಜೀವನದಲ್ಲಿ ದಿನಕರ ನೀಡಿದ ಪ್ರತೀದಿನವನ್ನು ಹೊನ್ನದಿನವಾಗಿಸಿ, ಕನ್ನಡ ಸಾಹಿತ್ಯಕ್ಕೆ 60ಕ್ಕೂ ಹೆಚ್ಚು ಮೌಲ್ಯಯುತ ಕೃತಿಗಳ ಕೊಡುಗೆ ನೀಡಿದ, ಭಟ್ಟರು ಬಹುಶ್ರುತ ವಿದ್ವಾಂಸರು. ಸಂಸ್ಕೃತದ ಮಹಾಕಾವ್ಯಗಳನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ತಂದವರು. ಕನ್ನಡದ ನವೋದಯ ಕಾವ್ಯವನ್ನು ಸುಶ್ರಾವ್ಯವಾಗಿ ಹಾಡಿದವರು. ಕನ್ನಡದ ಆಧುನಿಕ ವಚನಕಾರರು. ನಮ್ಮ ನಾಡು- ನುಡಿಯ ಹಿರಿತನವನ್ನು ಸಹಸ್ರಾರು ಶಿಷ್ಯರಲ್ಲಿ ಬಿತ್ತಿದ ಶ್ರೇಷ್ಠ ಪ್ರಾಧ್ಯಾಪಕರು.
ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರು 1914 ಫೆಬ್ರವರಿ 8ರಂದು ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿ ಜನಿಸಿದರು. ಎಸ್.ವಿ.ಪಿ. ಕನ್ನಡ ಸಾಹಿತ್ಯದ ಮೇರು ಪರ್ವತವಾಗಿ ಗೋಚರಿಸಲು ಕಾರಣ, ಅವರಿಗಿದ್ದ ಬಹುಮುಖಿತ್ವ. ಅವರೊಬ್ಬ ಅನುವಾದಕ, ಸಂಶೋಧಕ, ಸೃಜನಶೀಲ ಕವಿ, ಜೊತೆಗೆ ಮುಕ್ತಕ, ವಚನ ಸಾಹಿತ್ಯ ಹಾಗೂ ಮಕ್ಕಳ ಸಾಹಿತ್ಯದಲ್ಲೂ ಅವರ ಕೊಡುಗೆ ಅಪಾರ.
ಇಂಥ ಬೃಹತ್ ವಿಸ್ತಾರದ ಸಾಹಿತ್ಯಕ ಹರವುಳ್ಳ ಎಸ್.ವಿ.ಪಿ. ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು ಭಾವಗೀತೆಗಳ ಮೂಲಕ. ಭಾವಗೀತೆಗಳಲ್ಲಿ ಭಾವನೆಗಳು ಮಡುಗಟ್ಟಿರುವಂತೆಯೇ ಕವಿಯ ದೃಷ್ಟಿಕೋನದ ಸ್ಪಷ್ಟ ಚಿತ್ರಣವೂ ಸಿಗುತ್ತದೆ. ಎಸ್.ವಿ.ಪಿ.ಯವರ ಜನಪ್ರಿಯ ಭಾವಗೀತೆ 'ಪ್ರೀತಿಯ ಕರೆ ಕೇಳಿ' ಇದಕ್ಕೆ ಸ್ಪಷ್ಟ ನಿದರ್ಶನ. ಎಲ್ಲರ ಮನೆ ಮನಗಳಲ್ಲಿ ಪ್ರೀತಿಯ ದೀಪ ಉರಿಯಲಿ ಎಂಬುದು ಕವಿಯ ಆಶಯ. ಇಲ್ಲಿ ಕವಿಗೆ ಜೀವನದ ಎರಡು ಮಗ್ಗಲುಗಳಾದ ನೋವು- ನಲಿವುಗಳು, ಕತ್ತಲು- ಬೆಳಕುಗಳಾಗಿ ಗೋಚರಿಸುತ್ತವೆ.
ಕರಿಗೆಜ್ಜೆ ಕುಣಿಸುತ್ತಾ,
ಕಣ್ಣೀರ ಮಿಡಿಯುತ್ತಾ,
ಇರುಳಾಕೆ ಬಂದಳು
ದೀಪ ಹಚ್ಚ॥
ಕತ್ತಲಲ್ಲಿ ಕಣ್ಣೀರಿದೆ. ಆಕೆ ಕರಿಗೆಜ್ಜೆ ಕುಣಿಸುತ್ತಾ ಬರುತ್ತಿದ್ದಾಳೆ. ಅದನ್ನು ದೂರಾಗಿಸಲು, ಅರಿವಿನ ದೀಪ ಹಚ್ಚಬೇಕು.
ಬಾನಿನಂಗಳದಲ್ಲಿ
ಚುಕ್ಕಿ ಹೊಳೆದೆಸೆವಂತೆ
ನನ್ನ ಮನದಂಗಳದಿ
ದೀಪ ಹಚ್ಚ॥
ದೂರದ ತಾರಿಕೆಗಳ ಜ್ಞಾನದ ಹೊಳಪು ಮನದಂಗಳದಲ್ಲಿ ಮೂಡಿದ್ದೇ ಆದರೆ ಕತ್ತಲು ಖಂಡಿತಾ ದೂರಾಗುತ್ತದೆ. ಈ ಪದ್ಯದಲ್ಲಿ ಕವಿಯ ಅಧ್ಯಾತ್ಮ ಜಾಗೃತಿ ಮುಂದಿನ ಸಾಲುಗಳಲ್ಲಿ ಸ್ಪಷ್ಟವಾಗುತ್ತದೆ.
ನೀನೆಂಬ ಜ್ಯೋತಿಯಲಿ
ನಾನೆಂಬ ಪತಂಗ
ಸೋತ ಉಲಿ ಏಳಲಿ ದೀಪ ಹಚ್ಚ,
ನನ್ನಂತರಂಗದಲಿ ನಂದದೆ ನಿಂದಿಪ
ನಂದಾದೀಪವಾಗಿರಲಿ, ದೀಪ ಹಚ್ಚ॥
ಹೊಸ ಬದುಕಿಗಾಗಿ, ಇಲ್ಲಿ ನವೋದಯದ ದೀಪ ಹಚ್ಚುವ ಕವಿ, 'ನಾನು' ಎಂಬ ಅಹಂಕಾರದ ಪತಂಗ, ನೀನು ಎಂಬ ಜ್ಞಾನದ ಜ್ಯೋತಿಯಲ್ಲಿ ಸುಟ್ಟು ಹೋಗಲಿ, ನಾನು ಎಂಬುದರ ಸೋಲಿನ ಸೊಲ್ಲು ಕೇಳಿ ಬರಲಿ, ಎಂಬ ಅತ್ಯದ್ಭುತ ಅಧ್ಯಾತ್ಮ ದೃಷ್ಟಿಕೋನವನ್ನು ಅಭಿವ್ಯಕ್ತಿಸುತ್ತಾರೆ. ಈ ಭಾವ ಉದಯಿಸಿದಾಗ, ನಮ್ಮಾಳದ ಅರಿವಿನ ನಂದಾದೀಪ ಎಂದಿಗೂ ಆರದೇ ಉರಿಯುತ್ತದೆ.
ಎಸ್.ವಿ.ಪಿ. ಅವರ ಇನ್ನೊಂದು ಜನಪ್ರಿಯ ಗೀತೆ, 'ತಿಳಿಮುಗಿಲ ತೊಟ್ಟಿಲಲಿ'. ಇದರಲ್ಲಿ ಪ್ರಕೃತಿಯ ನವಿರಾದ ವರ್ಣನೆಯ ಜೊತೆಗೆ, ನವೋದಯದ ಪರಿಕಲ್ಪನೆ ಇದೆ. ಕವಿಗೆ ನಿರ್ಮಲ ಆಕಾಶ ತೊಟ್ಟಿಲಾಗಿ ಕಾಣಿಸುತ್ತಿದೆ. ಅದರಲ್ಲಿ ಚಂದಿರ ಪುಟ್ಟ ಕಂದಮ್ಮನಾಗಿ ತೋರುತ್ತಿದ್ದಾನೆ. ಬೀಸುತ್ತಿರುವ ನವಿರಾದ ಗಾಳಿ ಜೋಗುಳದ ಹಾಡಾಗಿ ಕೇಳಿ ಬರುತ್ತಿದೆ. ಆದರೆ ಇಲ್ಲಿ ಇರುಳು ಋಣಾತ್ಮಕವಾಗಿಯಷ್ಟೇ ಕವಿಗೆ ಕಾಣಿಸದೆ, ಬಾಳಿನ ಶುಭೋದಯ ಮುನ್ನುಡಿಯಾಗಿಯೂ ಕಾಣಿಸುತ್ತದೆ. ಕತ್ತಲಿನಾಚೆಗೆ ಬೆಳಕಿದೆ ಎಂಬ ಸಂದೇಶ ಸಾರುವ ಕವಿತೆ, ಕವಿಯ ಧನಾತ್ಮಕ ಚಿಂತನೆಗೆ, ಜೀವನ್ಮುಖಿ ವಿಚಾರ ಧಾರೆಗೆ ಸಾಕ್ಷಿಯಾಗುತ್ತದೆ.
ಇವರ ಮತ್ತೊಂದು ಮಹತ್ಕೃತಿ 'ಇಂದ್ರಚಾಪ' ಸಾಹಿತ್ಯ ಲೋಕದಲ್ಲಿ ಮೂಡಿದ ಸಾಂಗತ್ಯದ ಸುಂದರ ಕಾಮನಬಿಲ್ಲು. ಸರಳ ಛಂದಸ್ಸಿನ ಚೌಪದಿಗಳಲ್ಲಿ ಮೂಡಿಬಂದಿರುವ 'ಇಂದ್ರಚಾಪ'ದ ಮುಕ್ತಕಗಳು, ಎಸ್.ವಿ.ಪಿ. ಅವರ ಬದುಕಿನ ಏರಿಳಿತಗಳ ಏಳುರಂಗುಗಳನ್ನು ಓದುಗರ ಮನದಲ್ಲಿ ಅತ್ಯಂತ ಮನೋಹರವಾಗಿ ಮೂಡಿಸುತ್ತವೆ.
ಅತ್ಯುತ್ತಮ ಹಾಸ್ಯ ಪ್ರಜ್ಞೆಯುಳ್ಳವರಾಗಿದ್ದ ಎಸ್.ವಿ.ಪಿ. ತಮ್ಮ ಮಾತುಗಳಲ್ಲಿ ನಗೆಗಡಲನ್ನೇ ಉಕ್ಕಿಸುವ ಸಾಮಥ್ರ್ಯ ಹೊಂದಿದ್ದರು. ಉತ್ತಮ ಅಭಿರುಚಿಯ ಹಾಸ್ಯದ ಸಾಲುಗಳನ್ನು ಅವರ 'ಇಂದ್ರಚಾಪ'ದಲ್ಲಿ ಕಾಣಬಹುದು.
ನೀನೊಂದು ಸೀರೆಯನು ನನಗಾಗಿ ತಂದಂತೆ
ನಾ ಕಂಡೆ ಕನಸನು ನಿನ್ನೆ
ನಾಳೆ ಆ ಸೀರೆಯನು ನೀನುಟ್ಟು ಮೆರೆದಂತೆ
ಕನಸನು ಕಾಣೆನ್ನ ಚೆನ್ನೆ॥
ಪತಿ-ಪತ್ನಿಯರ ನಡುವೆ ನಡೆಯುವ ನವಿರಾದ ಹಾಸ್ಯ ಸಂಭಾಷಣೆಗೆ ಇದು ಅತ್ಯುತ್ತಮ ಉದಾಹರಣೆ.
ಸ್ಕೂಟರು ಹೆಳವನಿಗೇನುಪಯೋಗವು
ಬೋಳನಿಗೇಕೆ ಬಾಚಣಿಗೆ
ಅರಸಿಕನಿಗೆ ಏಕೆ ಕಾವ್ಯದ ಗಮಕವು
ಟ್ರಾನ್ಸಿಸ್ಟರೇಕೆ ಕೆಪ್ಪನಿಗೆ॥
ಕಾವ್ಯ ಎನ್ನುವುದು ಅದನ್ನು ಸರಿಯಾಗಿ ಸವಿಯುವವರಿಗೆ ಮಾತ್ರ ಎನ್ನುವ ಸಂದೇಶವನ್ನು ಈ ಹಾಸ್ಯದ ಸಾಲುಗಳ ಮೂಲಕ ಎಸ್.ವಿ.ಪಿ. ವ್ಯಕ್ತಪಡಿಸುತ್ತಾರೆ.
ಎಸ್.ವಿ.ಪಿ. ರಚಿಸಿರುವ ಮುಕ್ತಕಗಳು, ವಚನಗಳು ಹಳತು- ಹೊಸತರ ಸಮಪಾಕದಲ್ಲಿ ಮೂಡಿಬಂದು ಚಿಂತನ ಯೋಗ್ಯವೆನಿಸುತ್ತವೆ. 'ಉಪ್ಪು ಕಡಲು', 'ಉಂಬರ' ಅವರ ಪ್ರಮುಖ ವಚನ ಸಂಕಲನಗಳು. ಈ ವಚನಗಳಲ್ಲಿ ಸಾಮಾಜಿಕ ಸ್ಥಿತಿಗತಿಗಳ ವಸ್ತುನಿಷ್ಠ ವಿಡಂಬನೆ ಆಧುನಿಕ ಉದಾರಣೆಗಳ ಮೂಲಕ ಅಧ್ಯಾತ್ಮ ಚಿಂತನೆಗಳು ಅದ್ಭುತವಾಗಿ ಮೂಡಿಬಂದಿವೆ. 'ಸದಾಶಿವಗುರು' ಎಂಬ ಅಂಕಿತದೊಡನೆ ಈ ವಚನಗಳನ್ನು ರಚಿಸಿ ತಮ್ಮ ಜೀವನದ ಆದರ್ಶವಾಗಿದ್ದ ತಂದೆ ಸದಾಶಿವರಾಯನ್ನು ಬಹಳ ಉಚಿತ ರೀತಿಯಲ್ಲಿ ನೆನೆದಿದ್ದಾರೆ, ಪ್ರೊ.ಎಸ್.ವಿ.ಪಿ.
ಎಸ್.ವಿ.ಪಿ. ಕೇವಲ ಕವಿ ಹೃದಯದ ಭಾವ ಜೀವಿಯಲ್ಲ. ಸಂಶೋಧನಾ ಮನೋಭಾವದ, ಅಧ್ಯಯನ ಶೀಲ ಶಿಸ್ತುಳ್ಳ ವಿದ್ವಾಂಸರೂ ಹೌದು. ಅವರ 'ಕನ್ನಡ ಕಾಳಿದಾಸ ಮಹಾ ಸಂಪುಟ' ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಗ್ರಂಥ. ಕಾಳಿದಾಸ ಮಹಾಕವಿಯ ಸಂಸ್ಕೃತ ಮಹಾಕಾವ್ಯಗಳು ಹಾಗೂ ನಾಟಕಗಳನ್ನು ಈ ಮಹಾಸಂಪುಟದ ಮೂಲಕ, ಕನ್ನಡಕ್ಕೆ ತಂದ ಭಗೀರಥ ಇವರು. ಹೀಗೆ ಕಾಳಿದಾಸನ ಸಂಪೂರ್ಣ ಕೃತಿ ಸಮುದಾಯವನ್ನು ಒಂದೇ ಸಂಪುಟದಲ್ಲಿ ಅನುವಾದಿಸಿದ ನಿದರ್ಶನ ಬೇರಾವ ಭಾರತೀಯ ಭಾಷೆಯಲ್ಲೂ ಇಲ್ಲ.
ಸಂಸ್ಕೃತದ ಪ್ರತಿಭಾವಂತ ನಾಟಕಕಾರ ಭಾಸನನ್ನು ಅತ್ಯುತ್ತಮವಾಗಿ ಕನ್ನಡಿಗರಿಗೆ ತಮ್ಮ 'ಕನ್ನಡ ಭಾಸ ಮಹಾ ಸಂಪುಟ'ದ ಮೂಲಕ ಪರಿಚಯಿಸಿದ್ದಾರೆ. ಇಂದಿನ ಪ್ರಯೋಗಶೀಲ ರಂಗಭೂಮಿಗೂ ಪ್ರಸ್ತುತವಾಗುವ ಭಾಸನ 14 ರೂಪಕಗಳ ಕನ್ನಡೀಕರಣವನ್ನು ಇದರಲ್ಲಿ ಕಾಣಬಹುದು.
ಅನುವಾದದ ಕುರಿತು ಎಸ್.ವಿ.ಪಿ. ಹೀಗೆನ್ನುತ್ತಾರೆ, 'ಭಾಷಾಂತರದಲ್ಲಿ ಭಾವಾಂತರವಾಗಬಾರದು. ಒಟ್ಟಿನಲ್ಲಿ ಮೂಲದಲ್ಲಿದ್ದನ್ನು ಬಿಡದೇ, ಇಲ್ಲದನ್ನು ಸೇರಿಸದೇ, ಮೂಲ ಅಭಿವ್ಯಕ್ತಿಯ ಸೊಗಸನ್ನು ಸಾಧ್ಯವಾದಷ್ಟು ಇಟ್ಟುಕೊಂಡೇ, ಕನ್ನಡದಲ್ಲಿ ಒಡಮೂಡುವಂತೆ ಮಾಡುವುದು ನನ್ನ ಉದ್ದೇಶ, ಆದರೂ ಮೂಲ ಮೂಲವೇ, ಅನುವಾದ ಅನುವಾದವೇ, ಆದರೂ ಅನುವಾದವಿರಲೇಬೇಕು. ಮೂಲವನ್ನು ಅರಿಯದವರ ದೃಷ್ಟಿಯಿಂದಲಾದರೂ'.
ಎಸ್‌ವಿಪಿ ಅವರು ಸಾಹಿತ್ಯ ಹರಿವ ತುಂಗೆ. ಮಲೆನಾಡ ತುಂಗೆಯಾಗಿ, ಮೈಸೂರ ಕಾವೇರಿಯಾಗಿ ಹರಿದು ಕರಾವಳಿಯ ಸಾಗರ ಸೇರಿ ಉಪ್ಪು ಕಡಲಾಗಿ ಬೆಳೆದವರು. <




ನಾನೇಕೆ ಬರೆಯುತ್ತೇನೆ?

ಇದು ಎಲ್ಲ ಬರಹಗಾರರನ್ನು ಕಾಡುವ ಪ್ರಶ್ನೆ. ಬರೆಯಲಾರದ, ಬರವಣಿಗೆಯನ್ನು ಆಸ್ವಾದಿಸಲಾರದ ಜನರ ಕುಹಕವೂ ಇದೇ! ಅದಕ್ಕೆ ಬಹಳ ಮಾರ್ಮಿಕವಾಗಿ ಉತ್ತರಿಸುತ್ತಾರೆ ಅವರು.
ನೀವು ಬರೆಯದಿದ್ದರೆ ಪ್ರಪಂಚವೇನು ಮುಳುಗಿ ಹೋಹುದೆ?
ಹೀಗೆಂದರೊಬ್ಬರೆನಗೊಮ್ಮೆ, ಕೊಂಕು ನುಡಿಚುಚ್ಚಿ
'ನಾನು ಬರೆಯದಿದ್ದರೆ ಪ್ರಪಂಚ ಮುಳುಗಿ ಹೋಹುವುದಿಲ್ಲ,
ನಾನೇ ಮುಳುಗಿ ಹೋಹೆನು' ಎಂದೆನು ನನ್ನ ಮನಬಿಚ್ಚಿ
ಸರಿ ತಾನೇ, ಆ ಪ್ರಶ್ನೆಗೆ, ಈ ಉತ್ತರ, ಸದಾಶಿವಗುರು॥
ನಾನು ಬರೆಯುವುದು ನನ್ನ ಆತ್ಮಸಂತೋಷಕ್ಕೆ, ಬಂದ ಭಾವಗಳನ್ನು ದಾಖಲಿಸದಿದ್ದರೆ, ನಾನು ಮುಳುಗೇ ಹೋಗುತ್ತೇನೆಂಬ ತೀವ್ರತೆ ಇದ್ದಾಗ ಮಾತ್ರ, ಉತ್ತಮ ಸಾಹಿತ್ಯ ಮೂಡಿ ಬರಲು ಸಾಧ್ಯ ಎಂಬ ಎಸ್.ವಿ.ಪಿ. ಅವರ ಸಾರ್ವಕಾಲಿಕ ಸಂದೇಶ ಎಲ್ಲಾ ಸಂದರ್ಭದ ಬರಹಗಾರರಿಗೆ ಅತ್ಯಂತ ಸೂಕ್ತ ಕಿವಿ ಮಾತು.
'ರಸಋಷಿ ಕುವೆಂಪು' ಎಸ್.ವಿ.ಪಿ. ಅವರ ಮತ್ತೊಂದು ಮೌಲ್ಯಯುತ ಗ್ರಂಥ. ಮೈಸೂರು ವಿವಿ ಪ್ರಸಾರಾಂಗ ಇದನ್ನು 5 ಸಂಪುಟಗಳಲ್ಲಿ ಪ್ರಕಟಿಸಿದೆ. ಕುವೆಂಪುರವರ ಬಹುಮುಖ ಪ್ರತಿಭೆಯನ್ನು ಎಳೆಎಳೆಯಾಗಿ ಎಸ್.ವಿ.ಪಿ. ತೆರೆದಿಡುತ್ತಾರೆ.
ಇದನ್ನು ಗಮನಿಸಿದ ಕುವೆಂಪು ಭಟ್ಟರಿಗೆ ಹೀಗೆ ಪತ್ರ ಬರೆಯುತ್ತಾರೆ, 'ನನ್ನ ಸಾಹಿತ್ಯದ ಕುರಿತು ಬರೆಯಲು, ನಿಮಗಿಂತ ಉತ್ತಮತರ ಅಧಿಕಾರಿ ದೊರೆಯುವುದು ಕಷ್ಟ. ನನ್ನಂತೆಯೇ ನೀವೂ ಹುಟ್ಟಿ, ಬೆಳೆದು ಮಲೆಕಾಡುಗಳ ಸಾನಿಧ್ಯದ ದಿವ್ಯ ಸೌಂದರ್ಯದ ಪೀಯೂಷವನ್ನು ಆಸ್ವಾದಿಸಿದ್ದೀರಿ. ಭಾಷಾ ಪಾಂಡಿತ್ಯದಲ್ಲಿ, ನನ್ನೆಲ್ಲಾ ವಾಚ್ಯ, ಲಕ್ಷ್ಯ, ವ್ಯಂಗ್ಯಗಳನ್ನು ತಲಸ್ಪರ್ಶಿಯಾಗಿ ಅರಿಯುವ ಸಾಮರ್ಥ್ಯವನ್ನು ಪಡೆದಿದ್ದೀರಿ. ಆದರೆ ಒಂದು ಹೆದರಿಕೆ ! ಜನರು ನಿಮ್ಮ ಗ್ರಂಥವನ್ನೇ ಓದಿ ತೃಪ್ತರಾಗಿ, ನನ್ನ ಕೃತಿಗಳನ್ನು ಎಲ್ಲಿ ಓದದೇ ಹೋಗುತ್ತಾರೊ ಎಂದು! ಹಾಗಾದರೂ ಆಗಿ ಹೋಗಲಿ! ನಷ್ಟವೇನಿಲ್ಲ! ಭಟ್ಟ ಪರಮೇಶ್ವರನಿಗೆ ಜಯವಾಗಲಿ! ಎಸ್.ವಿ.ಪಿ. ಅವರಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇಕೆ?

-ಎಚ್.ಎಸ್. ನವೀನಕುಮಾರ್ ಹೊಸದುರ್ಗ
naveensushru71@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com