ಬಡವನ ಗುಡಿಸಲಿಗೆ ಬಲಗಾಲಿಟ್ಟು ಬಂದ ದೇವತೆ...

ಬಡವನ ಗುಡಿಸಲಿಗೆ ಬಲಗಾಲಿಟ್ಟು ಬಂದ ದೇವತೆ...
Updated on: 

ಮುದ್ದು ಗೊಂಬೆ...
ಬದುಕಿನ ಧಡಕಿಯಲಿ, ನೂರೆಂಟು ಆಲೋಚನೆಗಳನ್ನು ತಲೆಗೆ ಮೆತ್ತಿಕೊಂಡು, ಚಾಚಿದರೆ ಕೈಗೆಟುಕುವಷ್ಟು ಕಷ್ಟಗಳನ್ನು ಮೈಗೆ ಮೆತ್ತಿಕೊಂಡು ನಿಶಾಚರಿಯಂತೆ ಹಗಲಿರುಳು ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ವೇಳೆ, ಮುದ್ದುಗೊಂಬೆಯಂತೆ ಮುಗುಳ್ನಗೆ ಚೆಲ್ಲಿ ಬದುಕಲ್ಲಿ ಬಲಗಾಲಿಟ್ಟು ಬಂದವಳು ನೀನು. ನೀನು ಬಂದ ಮೇಲೆ ಮುನಿದು ಕೂತ ಬುದುಕು ಖಿಲ್ಲನೆ ನಕ್ಕಿತು. ಹೆಗಲಿಗೇರಿದ ಕಷ್ಟದ ಹೊರೆ ಒಂಚೂರು ಕಡಮೆಯಾಗಿ ಹಾಯೆನಿಸಿತು. ಒಬ್ಬ ಒಳ್ಳೆಯ ಗೆಳತಿಯಾಗಿ ಕಾಲಿಟ್ಟವಳು ಆಮೇಲೆ ಜೊತೆಗಾತಿಯಾಗಿ ಹೆಜ್ಜೆಯಲ್ಲಿ ಹೆಜ್ಜೆ ಇಡಲು ಪ್ರಾರಂಭಿಸಿದೆ. ನಾನಿರುವ ಸ್ಥಿತಿಯಲ್ಲಿ ತಿರುಗಿ ಕೂಡ ನೋಡದ ಬಂಧುಗಳು, ಸ್ನೇಹಿತರು ಒಳಗೊಳಗೇ ಮುಸಿಮುಸಿ ನಗುತ್ತ ಮಜಾ ತೆಗೆದುಕೊಳ್ಳುತ್ತಿದ್ದಾಗ, ಹಿಂದೆ ಮುಂದೆ ನೋಡದೆ ಬರಿಗೈಯ ಫಕೀರನ ಕೈ ಹಿಡಿದು ಒಲವನಗೆ ಚೆಲ್ಲಿದೆ. ಬಟ್ಟೆ ಹರಿದುಕೊಂಡ ಮಗು ಅಂಗಡಿಯ ಶೋಕೇಸಿನಲ್ಲಿಟ್ಟ ಮುದ್ದುಗೊಂಬೆಗೆ ಕಣ್ಣರಳಿಸಿ ಆಸೆಪಟ್ಟಷ್ಟೇ ನಿನ್ನಿಷ್ಟಪಟ್ಟಿದ್ದೆ. ಬಡವ ಕಣೇ ನಾನು. ತೆಕ್ಕೆತುಂಬ ಪ್ರೀತಿ ಕೊಡಬಲ್ಲೆನೇ ಹೊರತು ಬಂಗಾರದೊಡವೆ ಮಾಡಿಸಲಾರೆ, ಕ್ಷಮೆ ಇರಲಿ...
ಗರೀಬನ ಮನೆಗೆ ಭಾಗ್ಯಲಕ್ಷ್ಮಿ ಬಂದಾಗ ಆಗುತ್ತದಲ್ಲ, ಅಂತಹ ಖುಷಿ ನನ್ನ ಗುಡಿಸಲಲ್ಲಿ ತುಂಬಿತ್ತು. ಎದೆ ತುಂಬಿಕೊಂಡ ವೇದನೆಗಳ ಭಾರವನ್ನೆಲ್ಲ ನಿನ್ನೆದುರು ಹರವಿ ಹಗುರಾಗಿಬಿಡುತ್ತಿದ್ದೆ. ನೀನು ಕೊಡುವ ಕಂಫರ್ಟ್ ಇತ್ತಲ್ಲ, ಅದು ತೋಳಿನಲ್ಲಿ ಆನೆ ಬಲ ತುಂಬಿಬಿಡುತ್ತಿತ್ತು. ಹರಿದ ಒಂದೇ ಅಂಗಿಯನ್ನು ಹೊಲಿದು ಪದೇ ಪದೆ ತೊಡುತ್ತಿದ್ದನನ್ನನ್ನು ಕಂಡು ಅಂಗಡಿಗೆ ಕರೆದೊಯ್ದು ಒಂದೆರಡು ಜೊತೆ ಬಟ್ಟೆ ಕೊಡಿಸಿದ್ದೆ. ನಮ್ಮಿಬ್ಬರ ಅನ್ಯೋನ್ಯತೆ ಊರಿನಲ್ಲೆಲ್ಲ ಗುಲ್ಲೆಬ್ಬಿಸಿತ್ತು. ದೇವತೆಯಂಥವಳು ಪಕ್ಕಕ್ಕಿದ್ದಾಗ ಅಂತಹುದಕ್ಕೆಲ್ಲ ಕೇರೇ ಮಾಡಲಿಲ್ಲ ನಾನು.
ನೀನು ಬಂದ ಮೇಲೆ ಅದೆಷ್ಟು ಚೆಂದವೆನಿಸಿತ್ತು ಬದುಕು? ಬೆಳಗು ಮುಂಜಾನೆಯೆದ್ದು ಖಾಯಿಲೆ ಬಿದ್ದ ತಾಯಿಗೆ ಔಷಧಿ ಕುಡಿಸಿ, ತಮ್ಮನನ್ನು ಶಾಲೆಗೆ ತಯಾರುಮಾಡಿ, ಟಿಫಿನ್ ಕಟ್ಟಿಕೊಟ್ಟು ಕೆಲಸಕ್ಕೆ ಹೋಗುತ್ತಿದ್ದೆ. ತಂದೆ ಎಂಬುವವನು ನಮ್ಮ ಬದುಕಿನಿಂದ ಯಾವತ್ತೋ ಜವಾಬ್ದಾರಿ ಕಳೆದುಕೊಂಡುಬಿಟ್ಟಿದ್ದ. ಇದ್ದ ಒಂದು ಆಸರೆಯೆಂದರೆ ದೇವತೆಯಂಥ ತಾಯಿ. ಅವಳಿಗೋ ಮೇಲೇಳಲಾರದಷ್ಟು ಖಾಯಿಲೆಗಳು, ಪಾಲಿಗಿದ್ದ ಅವಳೊಬ್ಬಳನ್ನು ಉಳಿಸಿಕೊಲ್ಳಲು ಎಳೆಯ ಹೆಗಲು ಹೊರಬಾರದ ಹೊರೆ ಹೊರುವುದನ್ನು ರೂಢಿ ಮಾಡಿಕೊಂಡವು. ಅರ್ಧ ಕಲಿತು ಶಾಲೆಗೆ ಸಲಾಮು ಹೊಡೆದು ಬಿಟ್ಟೆ. ತಮ್ಮನನ್ನಾದರೂ ಓದಿಸೋಣವೆಂಬ ತುಂಬ ಹಂಬಲ.
ನೀನು ಬಂದೆ ನೋಡು, ಅಮ್ಮನಿಗೆ ನಿಜವಾದ ಮಗಳು ಸಿಕ್ಕ ಸಂಭ್ರಮ. ಪುಟ್ಟ ತಮ್ಮ ತನ್ನ ಬೊಗಸೆ ಕಂಗಳಿಂದ ನಿನ್ನ ದಿಟ್ಟಿಸಿದ್ದೇ ದಿಟ್ಟಿಸಿದ್ದು. ಅವನ ಕೆನ್ನೆ ಗಿಲ್ಲಿ ಪಾಠ ಹೇಳಿಕೊಡಲು ಶುರು ಮಾಡಿದೆ. ಎರಡು ಹೊತ್ತು ಬಿಸಿಯಾದ ಊಟ ನಿಮ್ಮನೆಯಿಂದ ಪಾರ್ಸಲ್ ಬರತೊಡಗಿತು. ನಮ್ಮಂಥವರಿಗೂ ದೇವರು ಕರುಣೆ ತೋರುತ್ತಾನೆಂದು ತಿಳಿದಿದ್ದೇ ಆವಾಗ.
ನನ್ನಲ್ಲಿ ಕೃತಜ್ಞತೆ ಎನ್ನೋದು ಕಡಲಂತೆ ಕೆನೆಗಟ್ಟಿತ್ತು. ನೀನು ಅದೇ ದೊಡ್ಡ ನಗೆ ನಕ್ಕು ನನ್ನ ಒರಟು ಕೆನ್ನೆಗೆ ಮುತ್ತಿಟ್ಟಿದ್ದೆ.  ನನ್ನಂಥ ಅದೃಷ್ಟವಂತ ಬೇರೊಬ್ಬನಿಲ್ಲ ಎಂದುಕೊಳ್ಳುವಷ್ಟರಲ್ಲಿಯೇ ಕಾಲನ ಕರಾಳ ಕಣ್ಣು ತನ್ನ ವಕ್ರದೃಷ್ಠಿ ನನ್ನ ಬದುಕಿನ ಮೇಲೆ ಬಿದ್ದಿತ್ತು. ನಮ್ಮ ಮನೆಗೆ ಬರದಂತೆ ನಿನಗೆ ಲಕ್ಷ್ಮಣರೇಖೆ ಎಳೆಯಲಾಯಿತು. ಸಂಪ್ರದಾಯದ ಬಿಗಿ ಹಿಡಿತಗಳು ಪ್ರರಸ್ಪರರ ಭಾವನೆಗಳ ಕತ್ತುಹಿಚುಕಿ ಗೇಲಿ ಮಾಡಿ ನಕ್ಕಿದ್ದು ದುರಾದೃಷ್ಟವಲ್ಲದೇ ಮತ್ತಿನ್ನೇನು? ನಿನ್ನ ಬರುವಿಕೆ ನಿಂತ ಮೇಲೆ ನಿಜವಾಗಿ ಘಾಸಿಗೊಂಡವಳೆಂದರೆ ನನ್ನ ತಾಯಿ. ಒಮ್ಮೆಲೆ ಊಟ ಮಾಡುವುದನ್ನೇ ಬಿಟ್ಟಳು. ನಿನ್ನ ಬರುವಿನ ನಿರೀಕ್ಷೆಯಲ್ಲಿಯೇ ಆಕೆಯ ಅಕ್ಷಿಗಳು ಅರೆತೆರೆದ ಸ್ಥಿತಿಯಲ್ಲಿಯೇ ನಿರ್ಜೀವವಾಗಿದ್ದವು. ಇದ್ದ ಒಂದು ಆಸರೆ ಕಳಚಿಹೋಗಿ ಸೋತ ಕಾಲುಗಳು ಬೇರೆ ಊರಿಗೆ ಗುಳೆ ಹೊರಟಿದ್ದವು. ನಮ್ಮಂಥವರು ಕನಸು ಕಾಣಬಾರದು ಕಣೇ. ಕನಸು ಕಾಣಲು ಅರ್ಹತೆ ಇಲ್ಲದವರು ನಾವು. ಈ ಪತ್ರ ನೀ ಓದುತ್ತಿರುವ ಹೊತ್ತಿಗೆ ನಾವು ಅದ್ಯಾವುದೋ ಹೆಸರು ಗೊತ್ತಿಲ್ಲದ ಊರಿನಲ್ಲಿ ಜೀತಕ್ಕಿರುತ್ತೇವೆ. ಪಾಪಿ ಹೊಟ್ಟೆ ತುಂಬಿಸಬೇಕಲ್ಲ? ಕ್ಷಮೆ ಇರಲಿ...                  
- ನಿನ್ನವನು

- ನಾಗೇಶ್ ಜೆ. ನಾಯಕ, ಬೈಲಹೊಂಗಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com