

ಸಾಮಾನ್ಯವಾಗಿ ಪ್ರವಾಸ ಹೊರಡುವಾಗ ಧರಿಸುವ ಬಟ್ಟೆಯ ಬಗ್ಗೆ ಟಿ.ಪಿ. ಕೈಲಾಸಂ ಅವರು ಅಷ್ಟು ಗಮನ ಕೊಡುತ್ತಿರಲಿಲ್ಲ. ಅವರ ಈ ನೀತಿಯೇ ಒಮ್ಮೆ ತಮಾಷೆಯ ಪ್ರಕರಣಕ್ಕೆ ಕಾರಣವಾಯಿತು.
1930ರ ಸುಮಾರದು. ತಮಿಳುನಾಡಿನ ತಿರುಚ್ಚಿಯಲ್ಲಿ ಕನ್ನಡ ಸಂಘದವರು ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದರು. ಮುಖ್ಯ ಅತಿಥಿಗಳಾಗಿ ಬರಲು ಟಿ.ಪಿ. ಕೈಲಾಸಂ ಅವರಿಗೆ ಆಹ್ವಾನ ಬಂತು. ಬೆಂಗಳೂರಿನಲ್ಲಿ ರಾತ್ರಿ ರೈಲೇರಿದ ಟಿಪಿ, ತಿರುಚ್ಚಿ ತಲುಪುವಾಗ ಬೆಳಗ್ಗೆ ಐದಾಗಿತ್ತು. ತೆಳು ಬನಿಯನ್ನು, ಕೊಳೆಯಿಂದಲೇ ಬಣ್ಣಮಯವಾಗಿದ್ದ ಲುಂಗಿ, ಬಗಲಿಗೊಂದು ಕೈಚೀಲ... ಇವು ಕೈಲಾಸಂರ ಡ್ರೆಸ್ಕೋಡು! ತಿರುಚ್ಚಿ ಸ್ಟೇಷನ್ನಿನಲ್ಲಿ ಇಳಿದ ಕೂಡಲೇ ಒಮ್ಮೆ ಮೈಮುರಿದು, ಕನ್ನಡಸಂಘದವರು ಕರೆದೊಯ್ಯಲು ಬಂದಿದ್ದಾರಾ ಎಂದು ನೋಡಿದರು. ಯಾರೂ ಬಂದಿರಲಿಲ್ಲ. ಅವರು ಬರುವುದರೊಳಗೆ ಸಿಗರೇಟನ್ನಾದರೂ ಸೇದಿಬರೋಣ ಅಂತ ಇನ್ನೇನು ಹೊರಡಬೇಕೆನ್ನುಷ್ಟರಲ್ಲಿ ಯಾರೋ ಟಿಪಿಯವರ ಹೆಗಲಿಗೆ ಕೋಲಿನಿಂದ ತಿವಿದರು. ಟಿಪಿ ತಿರುಗಿ ನೋಡಿದಾಗ, ಅದೊಂದು ಶ್ರೀಮಂತ ಕಾಯ ಎಂದು ಗೊತ್ತಾಯಿತು. ಆ ಧನಿಕ ಟಿಪಿ ಅವರಿಗೆ ಹೇಳಿದ, 'ಇದೆಲ್ಲ ನನ್ನ ಲಗ್ಗೇಜು. ಹೊರಗಡೆ ತೆಗೆದುಕೊಂಡು ನನ್ನ ಕಾರಿನಲ್ಲಿ ಇಡು. ಎಷ್ಟು ರೇಟು ಅಂತ ಇಲ್ಲೇ ಹೇಳು, ಕೊನೆಗೆ ಚಂಯ್ಯಾಪಂಯ್ಯಾ ಅನ್ಬೇಡ'.
ಕೈಲಾಸಂ ನಗುತ್ತಲೇ, 'ಆಗಲಿ ಬುದ್ದಿ, ನಾನು ಅಂತ ಚಂಯ್ಯಾಂಪಂಯ್ಯಾ ಪಾರ್ಟಿಯೇ ಅಲ್ಲ. ಬೆಳ್ಬೆಳಗ್ಗೆ ಬೋಣಿ ಮಾಡಿಕೊಡಿ ಸಾಕು. ನೀವೆಷ್ಟು ಕೊಡುತ್ತೀರೋ, ಅಷ್ಟು ತೆಗೆದುಕೊಳ್ತೀನಿ' ಎನ್ನುತ್ತಾ ಆ ಧನಿಕನ ಪೆಟ್ಟಿಗೆ, ಬಟ್ಟೆ ಸಾಮಾನುಗಳನ್ನೆಲ್ಲ ಹೆಗಲಿಗೇರಿಸಿಕೊಂಡರು. 'ನಡೀರಿ ಸ್ವಾಮಿ, ಹೋಗೋಣ. ಎಲ್ಲಿದೆ ನಿಮ್ಮ ಕಾರು?' ಎನ್ನುತ್ತಾ ಆ ಧನಿಕ ತೋರಿಸಿದ ಹಾದಿ ಹಿಡಿದರು ಟಿಪಿ. ಆ ಕ್ಷಣದಲ್ಲಿ ಕೈಲಾಸಂ ಎಷ್ಟು ಸ್ಪೀಡಾಗಿ ಹೆಜ್ಜೆ ಹಾಕಿದರೆಂದರೆ, ಅವರನ್ನು ಹಿಂಬಾಲಿಸಿದ ಧನಿಕ ಏದುಸಿರು ಬಿಡತೊಡಗಿದ. ತನ್ನ ಲಗ್ಗೇಜನ್ನು ಈತ ಎಲ್ಲಿ ಹೊತ್ತೋಡುತ್ತಾನೆಂಬ ದಿಗಿಲಲ್ಲಿ ಪದೇ ಪದೇ ಕೂಗುತ್ತಿದ್ದ. ಧನಿಕನ ಆತಂಕ ಕಂಡ ಕೈಲಾಸಂ, ಮೆತ್ತನೆ ಹೆಜ್ಜೆಯೂರ ತೊಡಗಿದರು.
ಅಷ್ಟರಲ್ಲೇ ಕನ್ನಡ ಸಂಘದ ಕಾರ್ಯಕರ್ತರು ಬಂದರು. ಚೆಟ್ಟಿಯಾರರ ಲಗ್ಗೇಜು ಹೊತ್ತಿದ್ದ ಕೈಲಾಸಂ ಅವರನ್ನು ಕಂಡು, 'ಸಾರ್ ನೀವೇಕೆ ಇಷ್ಟು ಸಾಮಾನು ಹೊತ್ತಿದ್ದೀರಿ' ಎನ್ನುತ್ತಾ ಎಲ್ಲವನ್ನೂ ಕೆಳಗಿಳಿಸಿಕೊಂಡರು. ಅಂದಿನ ಕಾರ್ಯಕ್ರಮಕ್ಕೆ ಚೆಟ್ಟಿಯಾರರು ಅಧ್ಯಕ್ಷರು, ಕೈಲಾಸಂ ಮುಖ್ಯ ಅತಿಥಿ!
ಕೊಂಚ ಅವಮಾನಿತರಾದ ಚೆಟ್ಟಿಯಾರರಿಗೆ ಕೈಲಾಸಂ ಅವರ ಗುರುತೇ ಸಿಗದೇ ಕೇಳಿದರು, 'ನೀವೇನಾ ಕೈಲಾಸಂ'. ಆಗ ಕೈಲಾಸಂ ಸಿಗರೇಟಿನ ತುದಿಗೆ ಬೆಂಕಿ ಕಡ್ಡಿ ಕೀರಿ, ಒಂದು ಧಂ ಎಳೆದು ಹೇಳಿದರು, 'ಹೌದು ಸಾರ್... ನಾನೇ ಕೈಲಾಸಂ, ಬಿ.ಎ., ಎ.ಆರ್.ಸಿ. (ಲಂಡನ್), ಎಫ್.ಆರ್.ಜಿ.ಎಸ್. (ಲಂಡನ್). ವಿಶ್ವದ ಅತ್ಯಂತ ಉನ್ನತ ಶಿಕ್ಷಣ ಪಡೆದ ಕೂಲಿ!