

ಪಾಂಡವರು ವನವಾಸ ಮಾಡುತ್ತಿದ್ದ ಸಂದರ್ಭ. ಕಾಡಿನಲ್ಲಿ ಅವರೆಲ್ಲ ಜೊತೆ ಜೊತೆಯಲ್ಲಿ ಅಡ್ಡಾಡುತ್ತಿದ್ದರು. ಜೊತೆಗೆ ದ್ರೌಪದಿಯೂ ಇರುತ್ತಿದ್ದಳು. ಹೀಗೇ ನಡೆದಾಡುತ್ತಿದ್ದಾಗ ಒಮ್ಮೆ ಅಪರೂಪದ ಸುಗಂಧವೊಂದು ಗಾಳಿಯಲ್ಲಿ ತೇಲಿಬಂತು, ಎಲ್ಲರಿಗೂ ಆ ಸುಗಂಧ ತುಂಬಾ ಆಕರ್ಷಕವೆನಿಸಿತು. ಈ ಸುವಾಸನೆ ಎಲ್ಲಿಂದ ಬರುತ್ತಿದೆ ಎಂಬುದನ್ನು ತಿಳಿಯಲು ಉತ್ಸಾಹಿಗಳಾದರು. ದ್ರೌಪದಿಗೆ ಈ ಪರಿಮಳಯುಕ್ತವಾದ ವಾಸನೆ ಯಾವುದೋ ಹೂವಿನದ್ದೇ ಇರಬೇಕೆಂದು ಹೊಳೆಯಿತು. ತಕ್ಷಣವೇ ಈ ವಾಸನೆ ಬರುತ್ತಿರುವ ದಿಕ್ಕಿಗೆ ಹೋದರೆ ಹೂವನ್ನು ಪಡೆಯಲು ಅನುಕೂಲ ಎನ್ನುತ್ತಾ, ಯಾರನ್ನು ಕಳುಹಿಸಿದರೆ ಈ ನನ್ನ ಆಸೆ ನೆರವೇರೀತು ಎಂದು ಯೋಚಿಸುತ್ತಾ ಇದ್ದಾಗ ತಕ್ಷಣವೇ ಈ ಕೆಲಸಕ್ಕೆ ಜಗಜಟ್ಟಿ ಭೀಮನೇ ತಕ್ಕವನು ಎಂದುಕೊಂಡು ಭೀಮನ ಬಳಿಗೆ ಬಂದಳು. "ಈ ಸುಗಂಧವನ್ನು ಹೊತ್ತಿರುವ ಪುಷ್ಪವೊಂದು ಇಲ್ಲಿಯೇ ಹತ್ತಿರ ಎಲ್ಲಿಯೋ ಇದೆ. ನನಗೆ ಆ ಪುಷ್ಪ ಬೇಕೇ ಬೇಕು. ಅದನ್ನು ಏನಾದರೂ ಮಾಡಿ ತರುವೆಯಾ?" ಎಂದು ಭೀಮನನ್ನು ಕೇಳಿಕೊಂಡಳು.
ತಕ್ಷಣವೇ ಭೀಮ ಕಾರ್ಯಪ್ರವೃತ್ತನಾದ. ಸುಗಂಧದ ವಾಸನೆ ಬರುತ್ತಿರುವ ಕಡೆಗೆ ಹೊರಟು, ಗುಡ್ಡ, ಬೆಟ್ಟ ನದಿ ಎಲ್ಲವನ್ನೂ ದಾಟಿದ. ಬೆಟ್ಟದ ಕಾಲು ದಾರಿಯಲ್ಲಿ ಕಪಿಯೊಂದು ಕುಳಿತಿತ್ತು. 'ನನ್ನ ದಾರಿಗೆ ಅಡ್ಡ ಕುಳಿತಿರುವ ಈ ಕಪಿಗೆ ಬುದ್ಧಿ ಕಲಿಸಬೇಕು' ಎಂದುಕೊಳ್ಳುತ್ತಾ. "ಏಯ್ ಕಪಿ, ದಾರಿ ಬಿಡು, ನನ್ನ ದಾರಿಗೆ ಅಡ್ಡ ಬರಬೇಡ" ಎಂದು ರೇಗಿದ. ಕಪಿ ಸೌಮ್ಯವಾಗಿ "ನಾನು ಮುದುಕ. ಹಾಗಾಗಿ ಏಳಲಾರೆ, ನೀನು ಪಕ್ಕದ ದಾರಿಯಲ್ಲಿ ಹೋಗು" ಎಂದಿತು. ಭೀಮನಿಗೆ ಕೋಪ ಬಂದು ನನ್ನನ್ನೇನಂತ ತಿಳಿದಿದ್ದೀ? ಈ ಕಪಿ ? ನಾನು ಪಾಂಡವರಲ್ಲಿ ಭೀಮ ಎನ್ನುವುದು ನಿನಗೆ ಗೊತ್ತಿಲ್ಲವೆಂದು ಕಾಣುತ್ತೆ. ದಾರಿಬಿಡು" ಮತ್ತೆ ರೇಗಿದ. ಕಪಿ ದಾರಿ ಬಿಡಲಿಲ್ಲ. "ಕೊಂಚ ನನ್ನ ಬಾಲವನ್ನು ಆಕಡೆಗೆ ಎತ್ತಿಡು, ನಂತರ ನೀನು ಹೋಗುವಿಯಂತೆ" ಎಂದಿತು. ಸಿಟ್ಟಿಗೆದ್ದ ಭೀಮ ಬಾಲ ಹಿಡಿದು ಕಪಿಯನ್ನು ಎಸೆಯಲು ಯೋಚಿಸಿದ. ಆದರೆ ಅವನಿಂದ ಕಪಿಯ ಬಾಲ ಅಲ್ಲಾಡಿಸಲಾಗಲಿಲ್ಲ. ಗದೆಯಲ್ಲಿ ಮೀಟಿದ, ಆಗಲೂ ಬಾಲ ಅಲ್ಲಾಡಲಿಲ್ಲ. ನನ್ನಂತಹ ಶೂರನಿಗೇ ಚಳ್ಳೇಹಣ್ಣು ತಿನ್ನುವಂತೆ ಮಾಡುತ್ತಿರುವ ಈ ಕಪಿ ಯಾರಿರಬಹುದು? ಎನ್ನುತ್ತಾ "ನೀನು ಯಾರು?" ಎಂದು ಕೇಳಿದ. "ನಾನು ಶ್ರೀರಾಮನ ಭಂಟ ಹನುಮಂತ, ನಾನು ನಿನ್ನನ್ನು ನೋಡಬೇಕೆಂದು ಆಸೆ ಪಟ್ಟಿದ್ದೆ, ಇಂದು ಆ ಆಸೆ ನೆರವೇರಿತು."
ಭೀಮ ಹನುಮಂತನಿಗೆ ನಮಸ್ಕಾರ ಮಾಡಿದ. ಆಗ ಹನುಮಂತನು "ಹತ್ತಿರದಲ್ಲೇ ಕುಬೇರನ ಸರೋವರ ಇದೆ. ಅಲ್ಲಿ ಸೌಗಂಧಿಕಾ ಪುಷ್ಪವಿದೆ. ಹೋಗಿ ಅದನ್ನು ಪಡೆದುಕೋ" ಎಂದು ಹೇಳಿದ. ಆ ನಂತರದಲ್ಲಿ ದ್ರೌಪದಿಯ ಆಸೆಯಂತೆ ಸೌಗಂಧಿಕಾ ಪುಷ್ಪವನ್ನು ತಂದು ಒಪ್ಪಿಸಿದ ಭೀಮ.
-ಎ.ಕೆ.ಪಟ್ಟಾಭಿ