

ಮುಸ್ಸಂಜೆಯ ಹೊತ್ತಿನಲ್ಲಿ ಮನಸ್ಸು ಮತ್ತೆ ಮುದುಡಿ ಕುಳಿತಿದೆ. ಏನೋ ಹೇಳಲಾಗದ ಬೇಸರ. ಹೊಸತನ್ನು ಪಡೆದುಕೊಂಡ ಹುಮ್ಮಸ್ಸಿನೊಂದಿಗೆ ಹಳೆಯ ಕೊಂಡಿಯೊಂದು ಕಳಚಿಹೋದ ನೋವು. ಇದನ್ನು ಕಂಡು ಖುಷಿಪಡಬೇಕೆ ಅಥವಾ ದುಃಖಿಸಬೇಕೆ ಎಂಬುದು ಅರ್ಥವಾಗದೇ ಮನಸ್ಸು ತೊಳಲಾಡುತ್ತಿದೆ. ಜೊತೆ ಜೊತೆಗೆ ಮನದಲ್ಲಿ ಮಾತ್ರ ಅದೇ ಪ್ರಶ್ನೆ ಮತ್ತೆ ಮತ್ತೆ ಮೂಡಿ ಮಾಯವಾಗುತ್ತಿದೆ. "ಸ್ನೇಹವೆಂದರೆ ಬೇಕಾದಾಗ ತೊಟ್ಟು ಬೇಡದಿದ್ದಾಗ ಬಿಸಾಕುವ ಮೈ ಮೇಲಿನ ಬಟ್ಟೆಗಳಂತೆಯೇ?'
ಅವರೇ ಬಯಸಿ ಬಯಸಿ ಬಿಗಿದುಕೊಂಡ ಬಂಧನವನ್ನು ಮುಂದೊಂದು ದಿನ ತಮಗೆ ಸಂಬಂಧಿಸಿದ್ದೇ ಅಲ್ಲವೆನ್ನುವಂತೆ ತೊರೆದು ಹೋಗುತ್ತಾರೇಕೆ? ಕತ್ತರಿಯಲ್ಲಿ ಕಾಗದವನ್ನು ತುಂಡರಿಸುವಂತೆ ತನ್ನ ಮನಸ್ಸನ್ನು ಚೂರು ಚೂರು ಮಾಡಿ ಹೋಗುವುದು ಸರಿಯೇ? ತನ್ನ ಸ್ನೇಹ, ಮಮತೆ, ಪ್ರೀತಿ, ನಂಬಿಕೆಗಳಿಗೆ ಅವರಲ್ಲಿ ಬೆಲೆಯೇ ಇಲ್ಲವೇ ?? ತಮಗೆ ಬೇಕಾದಾಗ ತನ್ನಿಂದ ಏನೆಲ್ಲ ಬಗೆಯ ಸಹಾಯ ತೆಗೆದುಕೊಂಡಿರಲಿಲ್ಲವೇ? ಅವರ ಆಟದಲ್ಲಿ ತಾನೊಂದು ದಾಳವಾಗಿಬಿಟ್ಟೆನೇ? ಹೃದಯದ ಆಳದಲ್ಲಿ ಮೊರೆಯುವ ಈ ಪ್ರಶ್ನೆಗಳಿಗೆ ಉತ್ತರಿಸುವವರಾರು?
ಮನುಷ್ಯ ಜನ್ಮದ ಎಲ್ಲ ಬಗೆಯ, ಕೊನೆಗೆ ರಕ್ತ ಸಂಬಂಧಕ್ಕಿಂತಲೂ ಶ್ರೇಷ್ಟವಾದುದು ಸ್ನೇಹ ಸಂಬಂಧ. ಮೊದಲೆಲ್ಲಾ ಸ್ನೇಹಕ್ಕಾಗಿ, ಸ್ನೇಹಿತರಿಗಾಗಿ ಪ್ರಾಣ ಬೇಕಾದರೂ ಒತ್ತೆ ಇಡುತ್ತಿದ್ದರು. ಈಗ ಪ್ರಾಣ ಬಿಡಿ, ಚೈನಾದಲ್ಲಿ ತಯಾರಾಗುವ ಮಾಲುಗಳಂತೆಯೇ ಮನುಷ್ಯ ಮನುಷ್ಯರ ನಡುವಿನ ಸ್ನೇಹ ಸಂಬಂಧವೂ ಅಲ್ಪಾಯುಷ್ಯವಾಗುತ್ತಿದೆಯಲ್ಲಾ? ಬೇರೆಯವರ ಬೇಸರ, ನೇವುಗಳಿಗೆ ನಮ್ಮಲ್ಲಿ ಬೆಲೆ ಇಲ್ಲದಾಯಿತೇ? ಪ್ರಾಣಿಗಳಿಗಿಂತ ಹೀನನಾದನೇ ಮನುಷ್ಯ?
ಈಗ ಮನಸ್ಸನ್ನು ಮುದುಡಿಸಿಕೊಂಡು ಕೂತರೇನು ಪ್ರಯೋಜನ? ಪ್ರಪಂಚ ವಿಶಾಲವಾಗಿದೆ. ಸುಂದರವಾಗಿದೆ. ಯಾರೋ ಒಬ್ಬರು ನಮ್ಮಿಂದ ದೂರವಾದರೆಂದರೆ ಬೇರೆ ಯಾರೋ ಒಳ್ಳೆಯ ಮನಸ್ಸಿನವರು ನಮ್ಮ ಜೊತೆಗಾರರಾಗಬಹುದೆಂಬ ಆಶಾಭಾವನೆಯಿಂದ ಮನಸ್ಸಿಗೆ ಸಮಾಧಾನ ಹೇಳಬೇಕು. ಅಷ್ಟಕ್ಕೂ ನಮ್ಮ ಜೊತೆಯಲ್ಲಿ ಇರುವ ಅದೃಷ್ಟ ಅವರ ಹಣೆಯಲ್ಲಿ ಬರೆದಿಲ್ಲವೆಂದರೆ ಯಾರು ತಾನೇ ಏನು ಮಾಡಬಲ್ಲರು? ಹೋಗಲಿ ಬಿಡಿ. ಯಾವಾಗಲೂ ಕಳೆದ ಕಹಿ ಕ್ಷಣಗಳನ್ನು ನೆನಪಿನಂಗಳದಿಂದ ಝಾಡಿಸಿ ತೊಳೆದು ಅರಳಿರುವ ಸುಂದರ ನಾಳೆಗಳತ್ತ ಗಮನ ಹರಿಸುವುದೇ ಜಾಣತನ.
- ಲಹರಿ