

ಹಳೆಯ ನೆನಪುಗಳನ್ನು ತೆರೆದಿಟ್ಟರೆ ಅವನೇನಾ... ಇವನು? ಎನ್ನುವ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಕಾಡುತ್ತಿವೆ. ನನ್ನ ಪ್ರಶ್ನೆಗಳಿಗೆ ಉತ್ತರಿಸು, ಬಳಿಕ ಎಲ್ಲಾ ನಿನ್ನ ನಿರ್ಧಾರದಂತೆ.
ಬಾನಂಗಳದ ಬೆಳದಿಂಗಳು ನೀನು. ಕಾಡುಮಲ್ಲಿಗೆಯಾಗಿದ್ದ ನನ್ನಲ್ಲಿ ಹೊಸ ಬಾಳ ಪರಿಮಳವನ್ನು ತಂದು ನಡುದಾರಿಯಲ್ಲಿ ಬಿಟ್ಟೆಯಾ? ಕುಸುಮ ಪ್ರೇಮಾಂಜಲಿಯ ಹಿಡಿದು ಬಂದೆ. ಬರೀ ನೆನಪಾಗಿ ಉಳಿಯಲು ಆಸೆ ಪಡುವೆಯಾ? ನಿನ್ನ ಪ್ರೀತಿಯಿಂದ ಜೀವನದಲ್ಲಿ ಅನೇಕ ಬದಲಾವಣೆಯನ್ನು ಕಂಡಿಹ ನನ್ನನ್ನು ದೂರ ಮಾಡಬೇಡ. ಹೇಗೆ ಮರೆಯಲಿ ನಿನ್ನ? ಹದಗೆಟ್ಟ ನನ್ನ ಆರೋಗ್ಯಕ್ಕೆ ಒಳ್ಳೆಯ ಮಾತುಗಳಿಂದಲೇ ಆರೈಕೆ ಮಾಡಿದೆ. ನೊಂದಿಹ ಮನಸ್ಸಿಗೆ ಸಂತೈಸಿ ನನ್ನ ಮೊಗದಲ್ಲಿ ನಗುವನ್ನು ತಂದ ನಿನ್ನನ್ನು ಹೇಗೆ ಮರೆಯಲಿ ಹೇಳು?
ನಿನ್ನ ಹೆಗಲ ಮೇಲೆ ಮಲಗಿದ್ದಾಗ ಅಮ್ಮನ ಮಡಿಲಲ್ಲೇ ಮಲಗಿದ ಸಂತೋಷ ನನಗೆ. ನಿನ್ನ ಹೆಗಲ ಮೇಲೆ ಮಲಗಿ ನಿದ್ರಿಸಲು ಅನುಮತಿ ಕೊಟ್ಟ ನಿನ್ನ ಮನಸ್ಸಿಗೆ ನನ್ನ ನಮನ. ಒಳ್ಳೆಯ ಗೆಳೆಯನಾಗಿ, ಆತ್ಮೀಯ ಬಂಧುವಾಗಿ, ಸುಖ-ದುಃಖಗಳಲ್ಲಿ ಭಾಗಿಯಾಗಿದ್ದ ನೀನು ಈ ಮನಸ್ಸನ್ನು ತೊರೆದು ಹೋಗುವೆಯಾ? ಸುಳ್ಳಿನ ಪಂಜರದಲ್ಲಿ ಬಂಧಿತನಾಗಬೇಡ. ನಿನ್ನ ಮೃದುವಾದ ಮಾತುಗಳನ್ನು ಕೇಳುತ್ತಿದ್ದ ಕಿವಿಗಳಿಗೆ ಕಠೋರವಾದ ನಾಟಕೀಯ ಮಾತುಗಳನ್ನು ಹೇಳಬೇಡ. "ಅಯ್ಯೋ...! ಕೆಟ್ಟವನಿವನು" ಎನ್ನುವಂತೆ ಹುಸಿಯಾಗಿ ಪ್ರತಿಕ್ರಿಯಿಸಬೇಡ. ನಿನ್ನ ನಿಷ್ಕಲ್ಮಶವಾದ ಪ್ರೀತಿಯನ್ನು ಕಂಡ ನನ್ನ ಮನಸ್ಸನ್ನು ಘಾಸಿಗೊಳಿಸಬೇಡ. ಮನಸ್ಸಿನಲ್ಲಿರುವ ಮಾತುಗಳನ್ನು ಹೇಳಿ ಹಕ್ಕಿಯಂತೆ ಹಾರಾಡು.
ಮೊದಲು ಪ್ರೀತಿಸಿದ ನಿನ್ನ ಹೃದಯಕ್ಕೆ 'ಒಲ್ಲೆ' ಎಂದು ಹೇಳಿದೆ. ಈಗ ಒಪ್ಪಿಕೊಂಡ ಮನವನ್ನು ದೂರ ತಳ್ಳುವೆಯಾ? ಒಂದು ನಗುವಿಗಾಗಿ ಆಸೆ ಪಡುತ್ತಿದ್ದ ನಿನ್ನ ಹೃದಯಕ್ಕೆ ಆ ನಗು ಬೇಡವಾಯಿತೇ? ನನ್ನೀ ಮಾತುಗಳ ಆಲಿಸುವಿಕೆಗೆ ಹಾತೊರೆಯುತ್ತಿದ್ದ ನಿನ್ನ ಮನಸ್ಸಿಗೆ ಆ ಮಾತು ಈಗ ಬೇಡವಾಯಿತೇ? ಬಿಟ್ಟುಹೋಗುವ ಮುನ್ನ ನಿನ್ನಲ್ಲಿದ್ದ ಪ್ರೀತಿ ಈಗ ದೂರವಾಯಿತೇ? ಕೈ ಹಿಡಿದು ಮದುವೆಯ ಕನಸು ಕಂಡ ನಿನ್ನ ಕಣ್ಗಳಿಗೆ ನನ್ನೀ ಮುಖ ನೆನಪಿಲ್ಲವೇ? ನನ್ನ ತಪ್ಪುಗಳನ್ನಾದರೂ ತಿಳಿಸು. ನಿನ್ನ ಮೌನದ ಉತ್ತರವನ್ನು ನಾ ಹೇಗೆ ಅರಿಯಲಿ ಹೇಳು? ಹಳೆಯ ನೆನಪುಗಳನ್ನು ತೆರೆದಿಟ್ಟರೆ ಅವನೇನಾ... ಇವನು? ಎನ್ನುವ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಕಾಡುತ್ತಿವೆ. ನನ್ನ ಪ್ರಶ್ನೆಗಳಿಗೆ ಉತ್ತರಿಸು, ಬಳಿಕ ಎಲ್ಲಾ ನಿನ್ನ ನಿರ್ಧಾರದಂತೆ.
ನಿನ್ನ ಪ್ರೀತಿಯ ಬಲೆಗೆ ಬಿದ್ದ ನನ್ನನ್ನು ಎತ್ತಲು ನನ್ನಿಂದಲೇ ಸಾಧ್ಯವಿಲ್ಲ. ಇನ್ನು ನೀ ಪ್ರಯತ್ನಿಸಬೇಡ. ನಿನ್ನಲ್ಲೇ ಜೀವನವನ್ನೇ ಕಂಡಿರುವೆ. ಕನಸಿನರಮನೆಯಲ್ಲಿ ಮದುಮಗಳಾಗಿ ನಿನ್ನ ಬರುವಿಕೆಗಾಗಿ ಕಾದ ನನ್ನ ಕನಸನ್ನು ನನಸಾಗಿ ಮಾಡು. ನನ್ನೀ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸು. ನಿನ್ನ ಉತ್ತರಕ್ಕಾಗಿ ಪ್ರತಿಕ್ಷಣವೂ ಕಾಯುವ...
ನಿನ್ನ ಪ್ರೀತಿಯ ಗೆಳತಿ.
ಶಾಲಿನಿ