

ಇದೀಗ ಪರೀಕ್ಷೆಯ ಕಾಲ. ಒಂದೊಂದೇ ಹೆಜ್ಜೆಯಿಟ್ಟು ಬರುತ್ತಿರುವ ಪರೀಕ್ಷೆಗಳ ನೆಪದಲ್ಲಿ ಕೆಲವು ಚೇತೋಹಾರಿ ವಿಷಯಗಳನ್ನು ಹಂಚಿಕೊಳ್ಳಬೇಕೆನಿಸಿದೆ. ಮಕ್ಕಳು ಮಾಣಿಕ್ಯ. ಆದರೆ ಅವುಗಳಿಗೆ ಹೊಳಪು ಕೊಡುವುದಷ್ಟೆ ಶಿಕ್ಷಕರ ಕೆಲಸ. ಯಾರ ಮನೆಯಂಗಳದ್ದೋ ಸಸಿಯೊಂದು ಶಿಕ್ಷಕರ ಬಳಿಗೆ ಹೋಗಿ ಬೆಳವಣಿಗೆ ಬಯಸುತ್ತದೆ. ಅವರು ನೀರೆರೆದು ಪೋಷಿಸುತ್ತಾರೆ. ಆನಂತರ ಶಿಕ್ಷಕರು ಅಂದುಕೊಳ್ಳುವುದು ಹೀಗೆ; ಇವೆಲ್ಲ ಕಪ್ಪೆಚಿಪ್ಪುಗಳು. ನಮ್ಮ ಮಾತಿನ ಹನಿಯಿಂದ ಮುತ್ತಾಗಲು ಕಿವಿದೆಳೆದು ಕುಳಿತಿವೆ. ಅಂಥ ಹಲವು ಮುತ್ತುಗಳ ನೆನಪು ಸಂತೋಷ ಕೊಡುವುದುಂಟು: ನಮ್ಮಲ್ಲಿ ಬೆಳೆದವು ಎಂದು; ಹಾಗೇ ದುಃಖ ನಮ್ಮಲ್ಲೇ ಉಳಿಯವು ಎಂದು!
---
ಎರಡು ವರ್ಷಗಳ ಹಿಂದೆ... ಮೊದಲ ಸೆಮಿಸ್ಟರ್ನಲ್ಲಿ ಮೊದಲ ತರಗತಿ. ಬಹಳ ಬಿರುಸಿನಿಂದ, ಹುರುಪಿನಿಂದ ಮೌಲ್ಯವಿವೇಚನೆ ಮಾಡುತ್ತ ಪಾಠ ಮಾಡಿದೆ, ಪಠ್ಯವೂ ಅದಕ್ಕೆ ಲಗತ್ತಾಗಿಯೇ ಇತ್ತು. ಸೊಗಸಾಗಿ ತರಗತಿ ನಡೆಸಿದೆ ಎಂಬ ತೃಪ್ತಿಯಿಂದ ಹೊರಗೆ ಬಂದೆ. ಹಿಂದೆ ಹೆಜ್ಜೆ ಸಪ್ಪಳ, 'ಸಾರ್, ಸಾರ್' ಎಂಬ ಕೂಗು. ನಿಂತೆ. 'ಸಾರ್, ನೀವು ಪಾಠ ಮಾಡುತ್ತ ದೇಶದ ಬಗ್ಗೆ ಅತೀವ ಕಾಳಜಿ, ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬಹಳ ಖೇದ ವ್ಯಕ್ತಪಡಿಸಿದಿರಿ. ನಾನು ಈ ದೇಶಕ್ಕಾಗಿ ಏನು ಮಾಡಲಿ ಹೇಳಿ?'
ಅಡಿಯಿಂದ ಮುಡಿಯವರೆಗೆ ದಿಟ್ಟಿಸಿದೆ. ಸಾಮಾನ್ಯ ಮಧ್ಯಮ ವರ್ಗದ ಹುಡುಗ. ಅವನ ಮನಸ್ಸು ಮಣ್ಣಮುದ್ದೆಯಂತೆ ಈ ಕ್ಷಣ ನಾನು ಏನು ಹೇಳುತ್ತೇನೋ ಅದನ್ನು ಚಿರಂತನವಾಗಿ ಮುದ್ರಿಸಿಕೊಳ್ಳಲು ತಯಾರಾಗಿದೆ; ಸ್ವಾತಿ ಹನಿಗಾಗಿ ಬಾಯ್ಪಿಟ್ಟ ಕಪ್ಪೆಚುಪ್ಪು! 'ಪಿಯು ಪರೀಕ್ಷೆಯಲ್ಲಿ ನೀನು ಗಳಿಸಿದ ಶೇಕಡಾವಾರು ಅಂಕ?' - 'ಶೇ.70'. 'ಪ್ರಶ್ನೆಪತ್ರಿಕೆ ಇದ್ದದ್ದು 100 ಅಂಕಗಳಿಗೆ. ನೀನು ಗಳಿಸಿದ್ದು ಶೇ.70. ಉಳಿದ ಶೇ. 30 ಎಲ್ಲಿ ಹೋಯ್ತು?' ಅವನಿಗೆ ಅರ್ಥವಾಗಲಿಲ್ಲ. 'ಸಾರ್...' ಎಂದ.
ನಾನು ಮುಂದುವರಿದು ಹೇಳಿದೆ. 'ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ಪಾತ್ರಗಳನ್ನು ಚೆನ್ನಾಗಿ, ಸಮರ್ಥವಾಗಿ ನಿರ್ವಹಿಸಬೇಕು. ಅದೇ ದೇಶಕ್ಕೆ ನಮ್ಮಿಂದ ಸಲ್ಲಬಹುದಾದ ಅತಿ ದೊಡ್ಡ ಸೇವೆ.
ನೀನು ವಿದ್ಯಾರ್ಥಿ. ನಿನ್ನ ಕರ್ತವ್ಯ ವಿದ್ಯಾರ್ಜನೆ ಮಾಡುವುದು. ಇಲ್ಲಿ ಚೌಕಾಸಿ ಮಾಡಬಾರದು, ಪೂರ್ಣಾಂಕ ಪಡೆಯಬೇಕು. 100ಕ್ಕೆ ನೂರು! ತಿಳಿಯಿತೆ? ಅದೇ ನೀನು ಈ ದೇಶಕ್ಕೆ ಮಾಡಬಹುದಾದ ದೊಡ್ಡ ಸೇವೆ'. ಸರಿಯೆಂದು ತಲೆ ಆಡಿಸಿ ಹೋದ. ಈ ವಿಷಯ ಅಲ್ಲಿಗೆ ಮರೆತೆ. ಸೆಮಿಸ್ಟರ್ ಅಂತ್ಯದ ಫಲಿತಾಂಶ ಬಂದ ಬಳಿಕ ಮತ್ತೆ ಪ್ರತ್ಯಕ್ಷನಾದ. ಸಾರ್, ರಿಸಲ್ಟ್ ಬಂತು... ಗಣಿತ ನೂರಕ್ಕೆ ನೂರು, ಭೌತವಿಜ್ಞಾನದಲ್ಲಿ ನೂರಕ್ಕೆ 98, ಇಲೆಕ್ಟ್ರಾನಿಕ್ಸ್ ನೂರಕ್ಕೆ 99... ಚೀಲದಿಂದ ಸಿಹಿಯ ಡಬ್ಬಿ ತೆಗೆದು ಮುಂದೆ ಚಾಚಿದ. ಪ್ರತಿ ಸೆಮಿಸ್ಟರ್ ಅಂತ್ಯದ ವೇಳೆಗೆ ಸಿಹಿ ಸುದ್ದಿ ತರುತ್ತಲೇ ಇರುತ್ತಾನೆ. ಅಂದಿನಿಂದ ಇಂದಿನವರೆಗೂ ಅವನು ಆಗಾಗ ವೇದಿಕೆಯ ಮೇಲೆ ಬರುತ್ತಲೇ ಇರುತ್ತಾನೆ, ಪಾರಿತೊಷಕಗಳನ್ನು ಪಡೆಯುತ್ತಲೇ ಇರುತ್ತಾನೆ... ಅವನು ಹಾಗೆ ಬಂದಾಗಲೆಲ್ಲ ನಾನು ಆನಂದದಿಂದ ಬೀಗುತ್ತೇನೆ. ಇವನ ಹೆಸರು ರಾಜೀವ ಪೂರ್ಣಚಂದ್ರ. ಇವನಂಥ ಹಲವರು ಇದ್ದಾರೆ. ಭೋದಕವೃಂದಕ್ಕೇ ಪ್ರೇರಕರಾಗುವಂಥವರು. ಇವರನ್ನು ಕಂಡಾಗಲೆಲ್ಲ ಅಂದುಕೊಳ್ಳುತ್ತೇನೆ.... ಮಕ್ಕಳು ಇವರೇ ನಮ್ಮ.... ಅಂತ.
- ರಘು ವೆಂಕಟಾಚಲಯ್ಯ
('ವಿವೇಕ ಹಂಸ' ಪತ್ರಿಕೆಯಿಂದ ಆಯ್ದುಕೊಂಡ ಬರಹ