ನಲ್ಲೇ ಎನ್ನಲೇ ನಿನ್ನ? ಗೆಳತಿ ಎನ್ನಲೇ ನಿನ್ನ?

ನಲ್ಲೇ ಎನ್ನಲೇ ನಿನ್ನ? ಗೆಳತಿ ಎನ್ನಲೇ ನಿನ್ನ?

ನಿಜ ಫ್ರೆಂಡ್ಸ್! ಒಬ್ಬ ಹುಡುಗ ಹುಡುಗಿ ನಡುವಿನ ಸಂಬಂಧವೇ ಅಂತಹದ್ದು. ಅದು ಸ್ನೇಹಾನ-ಪ್ರೀತೀನಾ ತಿಳಿಯಲ್ಲ. ನನ್ನ- ಅವಳ ನಡುವಿನ ಬಾಂಧವ್ಯವೂ ಅಂತಹದ್ದೇ. ಒಂದು ಗಳಿಗೆಯೂ ಬಿಟ್ಟಿರಲಾರದ, ಪದಗಳಿಗೆ ಸಿಗದ ಅನುಭೂತಿ ಅದು. ಪ್ರತಿದಿನವೂ ನಮ್ಮ ಮಧ್ಯೆ ಮಾತು, ಜಗಳ ಇದ್ದೇ ಇರುತ್ತಿತ್ತು.
ಅವಳು ಚಿಕ್ಕ-ಚಿಕ್ಕ ವಿಷಯಕ್ಕೆಲ್ಲಾ ಕೋಪಿಸಿಕೊಳ್ಳುತ್ತಿದ್ದಳು. ನಂತರ ಅವಳಾಗೇ ಸರಿ ಹೋಗುತ್ತಿದ್ದಳು. ಇದೆಲ್ಲಾ ಸ್ನೇಹಾನೆ ಅಲ್ವ? ನಮ್ಮಿಬ್ಬರ ಸ್ನೇಹ ಬರೀ ನಿನ್ನೆ ಇಂದಿನದಲ್ಲ; ಆರು ವರ್ಷದ್ದು. ನಾನು ಪಿಯುಸಿ ಓದುವಾಗ ನನ್ನ ಸ್ನೇಹಿತೆಯ ಸಹಪಾಠಿ ಅವಳು. ಆಗ ನನಗೆ ಹುಡುಗಿಯರ ಪರಿಚಯ ಅಷ್ಟಿರಲಿಲ್ಲ. ಅಂತಹ ಸಮಯದಲ್ಲಿ ಅವಳ ಪರಿಚಯ ಆಯಿತು. ಪರಿಚಯ ಸ್ನೇಹ ಆಗೋಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಆಗ ಹಾಯ್ ಬಾಯ್ ಅಂತ ಮಾತಾಡುತ್ತಾ ಇದ್ದೆವು. ಪಿಯುಸಿ ಮುಗಿಯಿತು. ನಂತರ ಅವರ ತಾಯಿಗೆ ವರ್ಗಾವಣೆಯಾಯಿತು. ಆಗ ಅವಳು ಒಂದು ವರ್ಷ ನನ್ನಿಂದ ದೂರಾದಳು.
ಮತ್ತೆ ನಾ ಅವಳಿದ್ದ ಊರಿಗೆ ಹೋದಾಗ ಆಕಸ್ಮಿಕವಾಗಿ ಸಿಕ್ಕಿದಳು. ಆಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಆಗಲಿಂದ ನಾವು ತುಂಬಾ ಹತ್ತಿರವಾಗಿಬಿಟ್ಟೆವು. ಆದರೆ ಅದು ಬರೀ ಸ್ನೇಹಾನಾ, ಇಲ್ಲ ಪ್ರೀತೀನಾ ಎಂಬುದು ಇಂದಿಗೂ ಯಕ್ಷ ಪ್ರಶ್ನೆಯಾಗಿದೆ. ಆದರೆ ಅವಳು ಜೊತೆಗಿದ್ದರೆ ಪ್ರಪಂಚದಲ್ಲಿ ಇನ್ನೇನೂ ಬೇಡ ಅನ್ನಿಸುತ್ತದೆ. ಅದು ಅವಳ ಮನಸ್ಸಿಗೂ ತಿಳಿದಿರುವ ಸತ್ಯ. ಬರೀ ಮಾತಿನಿಂದ ಶುರುವಾದ ನಮ್ಮ ಗೆಳೆತನ ಅವಳು ಸಿಕ್ಕಾಗ ದೇವಸ್ಥಾನ, ಅಲ್ಲಿಲ್ಲಿ ಸುತ್ತಾಡುವುದರವರೆಗೂ ಬೆಳೆಯಿತು. ಏನೇ ಮಾಡಿದರೂ ಅವಳೂ ನನ್ನ ಜೊತೆ ಇರಬೇಕು. ಅನ್ನುವಷ್ಟು ಗಾಢ ಆಯ್ತು ನಮ್ಮ ಪ್ರೀತಿಯ ಗೆಳೆತನ.
ಮನಸ್ಸೇ ಹಾಗಲ್ಲವೇ? ಯಾರನ್ನಾದರೂ ತೀರಾ ಹಚ್ಚಿಕೊಂಡರೆ ಅವರನ್ನು ಬಿಟ್ಟು ಒಂದು ನಿಮಿಷ ಕೂಡ ಇರಲ್ಲ. ಅವಳೂ ಹಾಗೇನೇ; ತಿಂಗಳಿಗೆ ಎರಡು ಬಾರಿಯಾದರೂ ನಮ್ಮಿಬ್ಬರ ಭೇಟಿ ಆಗುತ್ತದೆ. ಆಗಲೂ ಬರೀ ಮಾತಷ್ಟೇ. ಇನ್ನೇನಿಲ್ಲ. ಅವಳ ಜೊತೆಗೆ ಜಗಳ, ಮಾತು ಜಾಸ್ತಿ. ಮೊದಲು ಜಗಳ ನಾನೇ ಮಾಡುತ್ತಿದ್ದೆ. ಅದ್ರಲ್ಲಿ ಏನೋ ಖುಷಿ. ಹಾಗಂತ ಅವಳೇನೂ ಮೌನಿಯಲ್ಲ. ಅವಳಿಗೆ ಕೋಪ ಬಂದರೆ ನನ್ನನ್ನು ಚೆನ್ನಾಗಿ ಗೋಳು ಹೊಯ್ದುಕೊಳ್ಳುತ್ತಾಳೆ. ಒಂದೆರಡು ದಿನ ಮಾತೇ ಅಡಿಸೊಲ್ಲ. ಫೋನ್ ಸ್ವಿಚ್ ಆಫ್ ಮಾಡಿ ಬಿಡುತ್ತಿದ್ದಳು. ಸ್ನೇಹಕ್ಕೆ ಎಲ್ಲಾ ನೋವು-ದುಃಖಗಳನ್ನು ಅಳಿಸೋ ಶಕ್ತಿ ಇದೆ ಅಂತಾರೆ. ಅದು ನನ್ನ ಪಾಲಿಗೂ ನಿಜ ಆಯಿತು. ಅವಳ ಪರಿಚಯ ಆಕಸ್ಮಿಕ ಆದರೂ ಬಾಂಧವ್ಯ ಜಾಸ್ತಿನೇ ಆಯಿತು. ಅವಳು ಮನಸ್ಸಿಗೆ ಎಷ್ಟು ಹತ್ತಿರ ಆದಳು ಅಂದರೆ ಒಂದು ದಿನ ಅವಳ ಜೊತೆ ಮಾತಾಡದೆ ಹೋದರೆ ಮನಸ್ಸಲ್ಲಿ ಏನನ್ನೋ ಕಳೆದುಕೊಂಡ ಕಳವಳ, ಇಷ್ಟೆಲ್ಲಾ ಆದರೂ ಈ ಪ್ರಶ್ನೆ ಮನದ ಮೂಲೆಯಲ್ಲಿ ಹಾಗೇ ಉಳಿದುಕೊಂಡಿದೆ. ನಮ್ಮ ನಡುವೆ ಇರೋದು ಸ್ನೇಹಾನಾ? ಪ್ರೀತೀನಾ?

= ಧನಂಜಯ ಆರ್. ಮಧು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com