
ಹೊರಗೆ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯ ಸದ್ದು. ಮನದೊಳಗೆ ಬೆಚ್ಚನೆ ಕೂತಿದ್ದ ಭಾವಗಳ ಗುದ್ದು. ಕುಂತಲ್ಲೇ ಮನಸ್ಸು ಒದ್ದೆಯಾಗಿದೆ. ಕಣ್ಣಲ್ಲಿ ಕನಸು ಹೆಪ್ಪುಗಟ್ಟಿದೆ.
ಅಡ್ಡಾದಿಡ್ಡಿಯಾಗಿ ತಿರುಗುವುದನ್ನು ರೂಢಿಸಿಕೊಂಡಿರುವ ಕಾಲುಗಳಿಗೆ ಮಳೆ ಭೂಮಿಗೆ ಹೊದಿಸಿದ ಬಗ್ಗಡದ ದೆಸೆಯಿಂದ ಕಡಿವಾಣ ಬಿದ್ದಿದೆ. ಪ್ರತಿ ಹೆಜ್ಜೆ ಇಡುವ ಮುನ್ನ ಕಾಲು, ಬುದ್ಧಿಯ ಆಜ್ಞೆಗೆ ಎದುರು ನೋಡುತ್ತಿದೆ.
ಅಡೆತಡೆಗಳ ಹಾದಿಯಲ್ಲಿ ಸಾಗುವುದರಲ್ಲೂ ಒಂದು ಸುಖವಿದೆ ಎಂಬುದರ ಅರಿವಾದದ್ದು ಮಳೆಯ ಹಾವಳಿಗೆ ರೋಸಿ ಹೋಗಿ ಕೆಸರು ಗದ್ದೆಯ ರೂಪ ಧರಿಸಿದ್ದ ರಸ್ತೆಯಲ್ಲಿ ಹೆಜ್ಜೆ ಹಾಕುವಾಗಲೇ...
ಮನೆಯ ಮೂಲೆಯಲ್ಲಿ ಜಡವಾಗಿ ಬಿದ್ದಿದ್ದ ಛತ್ರಿ, ರೇನ್ಕೋಟು, ಜರ್ಕಿನ್ನುಗಳು ಮಳೆಯ ದೆಸೆಯಿಂದ ಊರೂರು ಸುತ್ತಲಾರಂಭಿಸಿವೆ. ಮನಸ್ಸು ಸೋಮಾರಿತನ ಆವಾಹಿಸಿಕೊಂಡು ಬಿದ್ದಲ್ಲೇ ಬಿದ್ದಿರಲು ಹವಣಿಸುತ್ತಿದೆ. ಯಾರನ್ನೂ ಸುಮ್ಮನಿರಲು ಬಿಡದ ಜಗದ ಹಲ್ಲಂಡೆಗಳು ಸೋಮಾರಿತನ ಹೆಚ್ಚು ಕಾಲ ಉಸಿರಾಡಿಕೊಂಡಿರಲು ಬಿಡುತ್ತಿಲ್ಲ.
ಮಳೆಗೂ ಮನಸ್ಸಿಗೂ ಕಾಣದ ಆದೆಂಥದೋ ಸಖ್ಯ. ಕೊಸರಾಡಿಕೊಂಡೇ ನಾವು ನಮಗರಿವಿಲ್ಲದಂತೆ ಮಳೆಯನ್ನು ಪ್ರೀತಿಸುತ್ತೇವೆ.
ಮಳೆ ಜೀವಂತಿಕೆಯ ಮೂರ್ತ ರೂಪ. ಅಳತೆ ಮೀರಿ ಅದು ಭೂಮಿಯೊಂದಿಗೆ ನಂಟು ಬೆಳೆಸಿಕೊಂಡರೆ ಜಗದ ಬದುಕಿನ ಆಯ ತಪ್ಪುತ್ತದೆ. ರೈತ ಕಣ್ಣೀರುಡುತ್ತಾನೆ. ಎಷ್ಟೋ ಊರುಗಳು ಇಲ್ಲವಾಗುತ್ತವೆ.
ಎಲ್ಲವನ್ನೂ ಕೃತಕವಾಗಿ ಸೃಷ್ಟಿಸಲು ಹೊರಟ ನಾವು ಮಳೆಯನ್ನೂ ಸುಮ್ಮನೆ ಬಿಟ್ಟವರಲ್ಲ. ಮೋಡ ಬಿತ್ತನೆ ಮಾಡಿದೆವು. ಮಳೆಯ ಮೇಲೆ ಹಿಡಿತ ಸಾಧಿಸಲು ಹೋದೆವು. ಆದರೆ ಮಳೆ ಅಷ್ಟು ಸುಲಭವಾಗಿ ನಮ್ಮ ತೆಕ್ಕೆಗೆ ಸರಿಯಲಿಲ್ಲ.
ನಾವೆಷ್ಟೇ ಬೈದರೂ, ಹಿಡಿಶಾಪ ಹಾಕಿದರೂ ಮಳೆ ಕ್ಯಾರೆ ಎನ್ನುವುದಿಲ್ಲ. ಮನಸ್ಸಿನ ಕೊಳೆ ತೊಳೆಯುವ ಕಾಯಕದಲ್ಲಿ ಅದು ಸದಾ ಕಾರ್ಯನಿರತ.
- ಎಚ್.ಕೆ. ಶರತ್
Advertisement