
ಮಳೆಗಾಲದ ಇಳಿಸಂಜೆಯಲ್ಲಿ ಬಾನ ಮಡಿಲಿಂದ ತೊಟ್ಟಿಕ್ಕುತ್ತಿಹ ಅಶ್ರುಧಾರೆ, ಅಂತರಂಗದಲ್ಲಿ ನವಿರಾದ ಭಾವನೆಗಳನ್ನು ಹುಟ್ಟು ಹಾಕುತ್ತದೆ. ಮನಸ್ಸು ಮೌನವಾಗಿ ಅದ್ಯಾವುದೋ ಲೋಕದ ವಾಸಿಯಾಗುತ್ತದೆ. ನೆನಪುಗಳನ್ನೆಲ್ಲ ನೇವರಿಸಿ ಮಾತಿಗೆ ಕೂತರೆ ಸಾಕು ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ. ಮಳೆಗಾಲದ ಘಳಿಗೆಗಳೇ ಅಪೂರ್ವ. ಬೆಚ್ಚಗೆ ಬಚ್ಚಿಟ್ಟುಕೊಂಡ ನೂರೆಂಟು ನೆನಪುಗಳು ಕಣ್ಣ ಮುಂದೆ ಮೆರವಣಿಗೆ ಹೊರಡುತ್ತವೆ. ಮನಸ್ಸು ಮಿಡಿಯುತ್ತದೆ. ಹೃದಯ ಹಾಡುತ್ತದೆ. ಕಣ್ಣಂಚಲ್ಲಿ ಈಗಲೋ ಆಗಲೋ ತೊಟ್ಟಿಕ್ಕುವ ಕಂಬನಿ ಸಾವಿರ ಕಥೆ ಹೇಳುತ್ತದೆ.
ಅದೊಂದು ದಿನ ಮಳೆ, ರಚ್ಚೆ ಹಿಡಿದ ಮಗುವಿನಂತೆ ಧರೆಗಿಳಿಯುತ್ತಲೇ ಇತ್ತು. ಮನೆಯಿಂದ ಛತ್ರಿ ತರಲು ಮರೆತ ನಾನು ಮರದ ಕೆಳಗೆ ನಿಂತೆ. ದೂರದಲ್ಲಿ ಬಣ್ಣದ ಛತ್ರಿ ಬಿಚ್ಚಿಕೊಂಡು, ಇಷ್ಟಗಲ ಕಣ್ಣತುಂಬ ಅಸಂಖ್ಯ ಕನಸುಗಳನ್ನು ಹೊತ್ತು ಬೀಳ್ವ ಮಳೆಗೆ ಮೈಮುದ್ದೆಯಾಗಿಸಿ, ಒಂದೊಂದೆ ಹೆಜ್ಜೆಯಿಟ್ಟು ನನ್ನೆಡೆಗೆ ನಡೆದು ಬಂದೆ ನೋಡು; ಅಂತಹ ಮಳೆಯಲ್ಲೂ ನನ್ನ ಹಣೆಯ ಮೇಲೆ ಬೆವರ ಸಾಲು. ಜೋರಾದ ಮಳೆಗೆ ಮುಂದೆ ಸಾಗಲಾರದೆ ನಾನಿದ್ದ ಮರದ ಬಳಿಗೇ ನೀನು ಬಂದಾಗ ಎದೆಯಲ್ಲಿ ಸಂಗೀತದ ಸಪ್ತಸ್ವರ. ನಿನ್ನ ಕಣ್ಣಿನಲ್ಲಿನ ಜೀವಂತಿಕೆ ನಿನ್ನನ್ನು ಮಾತನಾಡಿಸಲೇಬೇಕು ಎಂಬ ಹಂಬಲ ಹುಟ್ಟಿಸಿದ್ದು ಸುಳ್ಳಲ್ಲ.
"ಹಲೋ... ಯಾವ ಕಡೆ ಹೊರಟಿದ್ದೀರಾ...? ಇವತ್ತು ಮಳೆ ನಿಲ್ಲೋ ಹಾಗೆ ಕಾಣ್ತಿಲ್ಲ ಕಣ್ರೀ... ಛತ್ರಿ ಮನೇಲೇ ಮರೆತು ಬಂದ್ಬಿಟ್ಟೆ. ಕಾಲೇಜ್ಗೆ ಬೇರೆ ಲೇಟಾಗ್ತಾ ಇದೆ" ಅಂದದ್ದಷ್ಟೇ ತಡ, ನಿನ್ನ ಚಿನಕುರಳಿ ಮಾತಿನ ಭೋರ್ಗರೆತಕ್ಕೆ ಬೆಕ್ಕಸ ಬೆರಗಾಗಿ ಬಿಟ್ಟೆ. ಎರಡೇ ಎರಡು ನಿಮಿಷದ ಭೇಟಿ ಶಾಶ್ವತವಾದ ಸ್ನೇಹಕ್ಕೆ ತಿರುಗುತ್ತದೆ ಎಂದು ಯಾರಿಗೆ ಗೊತ್ತಿತ್ತು? ನಮ್ಮಿಬ್ಬರ ಮಧ್ಯೆ ಮಧುರ ಬಾಂಧವ್ಯವನ್ನು ಬೆಸೆದ ಮಳೆಗೆ ನಾನು ಚಿರಋಣಿ.
ಅನಂತರ ನನ್ನ ಬದುಕಿನ ಏಳು-ಬೀಳುಗಳಲ್ಲಿ ನೀನು ಭಾಗಿಯಾಗಿದ್ದು, ಬಂದ ಕಷ್ಟಗಳಿಗೆಲ್ಲ ಬೆದರಿ ನಾನು ಹತಾಶನಾಗಿ ಕುಳಿತಿದ್ದರೆ, ನೀನು ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದು, ಒಂದೇ ಒಂದು ದಿನ ನಿನ್ನನ್ನು ಕಾಣದಿದ್ದರೆ ನಾನು ಚಡಪಡಿಸಿದ್ದು ಇವೆಲ್ಲ ಇಂದು ಈ ಸುರಿಯುತ್ತಿರುವ ಮಳೆಯಲ್ಲಿ ನೆನಪಾಗುತ್ತಿವೆ. ನಮ್ಮಿಬ್ಬರ ಮಧ್ಯೆ ಇರುವ ಸ್ನೇಹವನ್ನು ಅರಿಯದೆ ಜಗತ್ತು ಬೇರೆ ರೀತಿಯ ಸಂಬಂಧ ಕಲ್ಪಿಸಿ ಗಹಗಹಿಸಿ ನಕ್ಕಾಗ ನೀನು ಮಾತ್ರ ಅಕ್ಷರಶಃ ಕುಸಿದು ಹೋದವಳಂತೆ ಬಿಕ್ಕಿ ಬಿಕ್ಕಿ ಅತ್ತದ್ದು ನನಗೀಗಲೂ ನೆನಪಿದೆ. ಜಗತ್ತಿನ ಜನರ ಬಾಯಿಗೆ ಬೀಗ ಹಾಕುವುದು ಅಸಾಧ್ಯ ಕಣೇ. ಪ್ರತಿಯೊಂದಕ್ಕೂ ಕೊಂಕು ತೆಗೆಯುತ್ತದೆ ಜಗತ್ತು. ನಮ್ಮಿಬ್ಬರ ನಡುವೆ ಅಂತಹ ಭಾವನೆ ಇಲ್ಲವೆಂದ ಬಳಿಕ ಜಗದ ಗೊಡವೆಗೆ ತಲೆ ಕೊಡುವದಾದರೂ ಏಕೆ? ಎಂಬ ಪರಿ ಪರಿಯಾದ ನನ್ನ ಮಾತಿಗೂ ನೀನು ಒಪ್ಪದೆ ನನ್ನನ್ನು ಬಿಟ್ಟು ನಡೆದದ್ದು ಈಗ ಇತಿಹಾಸ. ನಿನ್ನಂಥ ಚಿನ್ನದಂಥ ಗೆಳತಿಯನ್ನು ಕಳೆದುಕೊಂಡ ನಾನು ಸಂಪೂರ್ಣ ಸೋತುಹೋದೆ. ಅತ್ತ ಬದುಕಲೂ ಆಗದೆ, ಸಾಯಲೂ ಆಗದೆ ಒದ್ದಾಡಿಬಿಟ್ಟೆ.
ಈಗ ಮಳೆಗಾಲ ಶುರುವಾಯಿತೆಂದರೆ ಸಾಕು, ನಿನ್ನ ಜೊತೆ ಕಳೆದ ದಿನಗಳ ನೆನಪು ಅಲೆಅಲೆಯಾಗಿ ನನ್ನೆದೆಗೆ ತಾಕುತ್ತದೆ. ಕೊನೆಗೊಂದು ವಿಷಾದದ ಛಾಯೆ ಕವಿದು ಕಣ್ಣಂಚಿನಿಂದ ಸಣ್ಣಗೆ ಜಿನಗುವ ನೀರ ಹನಿಗಳು ನಮ್ಮಿಬ್ಬರ ಸ್ವಚ್ಛಂದ ಸ್ನೇಹಕ್ಕೆ ಸಾಕ್ಷಿಯಾಗುತ್ತವೆ. ಎಲ್ಲಿ ಹೋಯಿತು ಗೆಳತಿ ಆ ಕಾಲ... ಎಂಬ ಗೀತೆಗೆ ಮನಸ್ಸು ದನಿಗೂಡಿಸುತ್ತದೆ.
- ನಾಗೇಶ್ ಜೆ. ನಾಯಕ, ಬೈಲಹೊಂಗಲ
Advertisement