
ಹುಡುಗ್ರು ಅಂದ್ರೆ ಊರೂರು ಸುತ್ಕೊಂಡು ಗೆಳೆಯರ ಜೊತೆ ಜಾಲಿ ಮಾಡ್ತಾ ಹುಡುಗೀರನ್ನ ರೇಗಿಸ್ತಾ ಟೈಮ್ಪಾಸ್ ಮಾಡೋರು ಅಂತಾನೆ ಎಲ್ರೂ ಹೇಳೋದು ಕೇಳಿದೀನಿ. ಹುಡುಗರು ಅಂದ್ರೇನೆ ಏನೋ ಅಸಡ್ಡೆ. ಅವ್ರು ಮಾಡೋದೆಲ್ಲಾ ಕೆಟ್ಟದ್ದೇ ಅನ್ನೋ ಭಾವ. ಇನ್ನು ಹುಡುಗ್ರು ಏನಾದ್ರೂ ಹುಡುಗೀರಿಗೆ ಸಹಾಯ ಮಾಡಿದ್ರು ಅನ್ನಿ, ಆಮೇಲೆ ಅವ್ನು ಹುಡುಗಿಯರ ಗುಂಪಿನ ಆಹಾರ. ಅವ್ನು ನಿನ್ನ ಲವ್ ಮಾಡ್ತಿರ್ಬೇಕು ಕಣೇ. ಅದಿಕ್ಕೇ ನಿಂಗೆ ಸಹಾಯ ಮಾಡಿರ್ಬೇಕು ಅಂತ ಒಬ್ಳು ಹೇಳಿದ್ರೆ, ಅವ್ನು ಸರಿ ಇಲ್ಲ ಕಣೇ, ಹೀಗೆ ಸಹಾಯ ಮಾಡಿ ಎಲ್ರನ್ನೂ ಮೋಡಿ ಮಾಡ್ತಾನೆ ಅಂತ ಇನ್ನೊಬ್ಳು. ಹೀಗೆ ಅವ್ನ ಮೇಲೆ ಇಲ್ಲ ಸಲ್ಲದ ಆರೋಪ.
ಆದ್ರೆ ಇದೆಲ್ಲದರ ಮಧ್ಯೆ ಹುಡುಗರಿಗೂ ಒಂದು ಮನಸ್ಸಿದೆ ಅಂತ ನಾವು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅವ್ರು ಮಾಡಿದ ಕೆಲ್ಸಗಳಲ್ಲಿ ತಪ್ಪು ಹುಡುಕ್ತೀವಿಯೇ ವಿನಃ ಅದರಲ್ಲಿರೋ ಅವರ ಮನಸ್ಸನ್ನ ನಾವು ಅರಿತುಕೊಳ್ಳೋದೇ ಇಲ್ಲ. ಅವ್ರು ಮಾಡಿದ ಸಹಾಯಕ್ಕೆ ಕೃತಜ್ಞತೆ ತೋರಿಸೋ ಬದಲು ಸಂದೇಹ ಪಡ್ತೀವಿ. ಎಲ್ಲಾ ಹುಡುಗರೂ ಒಂದೇ ರೀತಿ ಇರಲ್ಲ. ಯಾರೋ ಒಂದಿಬ್ಬರು ಕೆಟ್ಟವರನ್ನು ನೋಡಿ ಎಲ್ಲ ಹುಡುಗರೂ ಹೀಗೆ ಅನ್ನೋ ಆಲೋಚನೆ ಸರಿ ಅಲ್ಲ. ಎಲ್ಲರಿಗೂ ಅವರದೇ ಆದ ಭಾವನೆಗಳಿದೆ. ಅವರಲ್ಲೂ ಒಬ್ಬ ಒಳ್ಳೆಯ ಅಣ್ಣ, ಸ್ನೇಹಿತ ಅಥವಾ ಸಂಗಾತಿಯನ್ನು ಹುಡುಕಲು ಪ್ರಯತ್ನಪಡಬೇಕು...
ನಿಜ ಅರ್ಥದಲ್ಲಿ ನೋಡಿದರೆ ಹುಡುಗರೇ ಹುಡುಗಿಯರಿಗಿಂತ ತುಂಬಾ ಮೃದು ಸ್ವಭಾವದವರು. ನಾವು ಹುಡುಗಿಯರು ಏನಾದರೂ ಮನಸ್ಸಿಗೆ ನೋವಾದರೆ ಅತ್ತು ಸಮಾಧಾನ ಮಾಡ್ಕೋತೀವಿ. ಆದ್ರೆ ಅವರು ಮನಸ್ಸೊಳಗೇ ಇಟ್ಟುಕೊಂಡು ಕೊರಗುತ್ತಿರುತ್ತಾರೆ. ತಾವು ಬಯಸಿದ್ದು ಕೈಗೆಟುಕದಾಗ ಅವರಷ್ಟು ದುಃಖ ಪಡೋರು ಬೇರಿಲ್ಲ. ಹುಡುಗನೊಬ್ಬ ಒಬ್ಬ ಅಣ್ಣನಾಗಿ ತನ್ನ ತಂಗಿಗೆ ಏನೂ ಆಗಬಾರದು ಅಂತ ತನ್ನ ಅಂಗೈಲಿ ಇಟ್ಟು ಕಾಪಾಡುತ್ತಾನೆ. ತನ್ನ ಸ್ನೇಹಿತೇನ ಕಣ್ಣ ರೆಪ್ಪೆಯಂತೆ ನೋಡಿಕೊಳ್ಳುತ್ತಾನೆ. ಅವರಿಗೆ ಏನಾದರೂ ಆದರೆ ಅವನ ವೇದನೆ ಹೇಳತೀರದು.
ಒಬ್ಬ ತಾಯಿಗೆ ಒಳ್ಳೆಯ ಮಗನಾಗಿ, ತಂಗಿಯ ಮುದ್ದಿನ ಅಣ್ಣನಾಗಿ, ಸ್ನೇಹಿತೆಯ ಪ್ರೀತಿಯ ಗೆಳೆಯನಾಗಿ ತನ್ನ ಸರ್ವಸ್ವವನ್ನೂ ಅವರಿಗೆ ಸಮರ್ಪಿಸುತ್ತಾನೆ. ಅವರ ದುಃಖದಲ್ಲಿ ತನ್ನ ಕಷ್ಟ, ಅವರ ನಗುವಿನಲ್ಲಿ ತನ್ನ ಖುಷಿಯನ್ನು ಕಾಣೋ ಇವನು ಮಾತ್ರ ಎಲ್ಲರ ಕಣ್ಣ ಮುಂದೆ ಅಸಡ್ಡೆಗೊಳಗಾದ ವ್ಯಕ್ತಿ. ಇನ್ನಾದರೂ ಹುಡುಗರ ಮೇಲಿನ ಈ ತಪ್ಪು ಕಲ್ಪನೆ ದೂರ ಮಾಡೋಣ. ಅವರ ಭಾವನೆಗಳನ್ನು ಗೌರವಿಸೋದು ಕಲಿಯೋಣ...
- ದೀಪ್ತಿ ಉಜಿರೆ, ಪತ್ರಿಕೋದ್ಯಮ ವಿಭಾಗ, ಎಸ್.ಡಿ.ಎಂ.ಕಾಲೇಜು ಉಜಿರೆ.
Advertisement