ಒಂದು ಮುಟ್ಟಿನ ಕಥೆಯು...

ಒಂದು ಮುಟ್ಟಿನ ಕಥೆಯು...

ಕಳೆದೆರಡು ದಿನಗಳಿಂದ ಸಿಕ್ಕಾಪಟ್ಟೆ ಸುಸ್ತು, ಹೊಟ್ಟೆ ನೋವು.. ಸಣ್ಣ ಪುಟ್ಟ ವಿಷ್ಯಕ್ಕೂ ಸಿಟ್ಟು ಮಾಡಿಕೊಳ್ತಿದ್ದೀನಿ. ನಿನ್ನೆ ಸಂಜೆ ಫೋನ್ ಮಾಡಿದಾಗ ರಿಸೀವ್ ಮಾಡಿಲ್ಲ ಎಂಬ ಕಾರಣಕ್ಕಾಗಿ ರಾತ್ರಿಯಿಡೀ ಅವನ ಜತೆ ಜಗಳವಾಡಿದ್ದೆ. ನಾ ಕಳಿಸಿದ ವಾಟ್ಸಪ್ ಮೆಸೇಜ್‌ಗೆ ಅವನ ರಿಪ್ಲೈ ಬರಲಿಲ್ಲ, ಹಾಳಾದ್ದು ಈಗೀಗ Last seen ಕೂಡಾ ಹೈಡ್ ಮಾಡ್ತಿದ್ದಾನೆ. ಫೇಸ್ ಬುಕ್‌ನಲ್ಲಿ ಆನ್ ಲೈನ್ ಇದ್ದು ನನ್ನ ಮೆಸೇಜ್ ನೋಡಿದರೂ ಅವನು ಉತ್ತರಿಸಿಲ್ಲ. ಸಿಟ್ಟು ಬರದೇ ಇರುತ್ತಾ? ಕಾಲ್ ಮಾಡಿದೆ. ಚಂಪ್ಸ್ ಆಯ್ತಾ? ಅದಕ್ಕೇ ಇಷ್ಟು ಇರಿಟೇಷನ್ ಆಗ್ತಿದೆ ನಿನಗೆ. ರಿಲ್ಯಾಕ್ಸ್ ಮಾಡು ಎಂದು ಅವನು ಕರೆ ಕಟ್ ಮಾಡಿದ. ಆ ದಿನಗಳೇ ಹಾಗೆ. ನಾವು ಹುಡ್ಗೀರ ಕಷ್ಟ ನಮಗಷ್ಟೇ ಗೊತ್ತು. ಚಂಪ್ಸ್ ಆಗುವ ಮುನ್ನಾ ದಿನ ಒಂದಷ್ಟು ಇರಿಟೇಷನ್ ಇದ್ದೇ ಇರುತ್ತೆ. ಇದು ಸಾಲದ್ದು ಎಂಬಂತೆ ಕೆನ್ನೆಯಲ್ಲಿ ಮೊಡವೆ ಬೇರೆ. ಕೆಲವೊಮ್ಮೆ ಸ್ವೀಟ್ಸ್ ತಿನ್ಬೇಕು ಎಂದು ಆಸೆಯಾದರೆ, ಮತ್ತೊಮ್ಮೆ ಏನೂ ಬೇಡ ಸುಮ್ಮನೆ ಜ್ಯೂಸ್ ಕುಡಿದು ರೆಸ್ಟ್ ತೆಗೊಂಡ್ರೆ ಸಾಕಾಪ್ಪಾ ಅಂತ ಅನಿಸಿ ಬಿಡುತ್ತೆ. ಹಾಗಂತ ಸುಮ್ಮನೆ ಕೂರೋಕೆ ಆಗುತ್ತಾ?
ಹೈಸ್ಕೂಲ್‌ನ ದಿನಗಳವು. ಶಾಲೆಯಲ್ಲಿ ಯಾರಾದರೂ ಹೆಣ್ಮಕ್ಕಳು ಹೊಟ್ಟೆ ನೋವು ಎಂದರೆ ಸಾಕು, ಪಕ್ಕದ
ಬೆಂಚಲ್ಲಿ ಕುಳಿತ ಹುಡುಗರು ಕಿಸಿಯೋಕೆ ಶುರು ಮಾಡ್ತಿದ್ರು. ಮೂರು ದಿನ ರಜಾ ಹಾಕಿದರೆ ಮುಗೀತು ಅವರ ಊಹೆ ನಿಜವಾದಂತೆ. ನಾವು ಏನೂ ಹೇಳದೇ ಇದ್ರೂ ಅವರಿಗೆಲ್ಲವೂ ಗೊತ್ತಾಗುತ್ತಿತ್ತು. ಈ ಹುಡ್ಗರಿಗೆ ಅದೆಲ್ಲಾ ಹೇಗೆ ಗೊತ್ತಾಗುತ್ತೆ ಎಂದು ನಾವು ತಲೆಕೆಡಿಸಿಕೊಳ್ತಿದ್ವಿ. ಕಾಲೇಜಿನಲ್ಲಿರುವಾಗ ಒಂದ್ಸಾರಿ ಹೀಗೇ ಹೊಟ್ಟೆ ನೋವು ಆರಂಭವಾಗಿತ್ತು. ಆವಾಗ ನನ್ನ ಗೆಳೆಯ ಲೈಮ್ ಸೋಡಾ ಕುಡಿಸಿ ಹಾಸ್ಟೆಲ್‌ಗೆ ಡ್ರಾಪ್ ಕೊಟ್ಟಿದ್ದ. ಮೂರು ದಿನ ಕಳೆದ ನಂತರ ನಿನ್ನ ಹೊಟ್ಟೆ ನೋವು ಹೋಗಿರಬೇಕು ಅಲ್ವಾ? ಎಂದು ಕೇಳಿದಾಗ ನಾನು ನಾಚಿ ನೀರಾಗಿದ್ದೆ. ಈ ಹುಡ್ಗರಿಗೆ ಈ ವಿಷ್ಯ ಎಲ್ಲ ಹೇಗೆ ಗೊತ್ತಾಗುತ್ತೆ? ಅಂಥಾ ನಾವು ಹಾಸ್ಟೆಲ್‌ನಲ್ಲಿ ಡಿಸ್ಕಸ್ ಮಾಡುವಾಗ ಗೆಳತಿಯೊಬ್ಬಳು 'ನಮಗಿಂತ ಹೆಚ್ಚು ವಿಷ್ಯಗಳು ಅವರಿಗೆ ಗೊತ್ತಿರುತ್ತವೆ. ಅವರೆಲ್ಲಾ ಇಂಥಾ ವಿಷ್ಯಗಳಲ್ಲಿ ಪಿಹೆಚ್‌ಡಿ ಹೋಲ್ಡರ್‌ಗಳು. ನಮಗಿಂತ ಜಾಸ್ತಿ ಅವರು ತಿಳಿದುಕೊಂಡಿರ್ತಾರೆ' ಎಂದು ಹೇಳಿದಾಗ ನಾವೆಲ್ಲಾ ಕರೆಕ್ಟ್ ಎಂದು ಸಹಮತ ಸೂಚಿಸಿದ್ದೆವು.
ಪ್ರತೀ ತಿಂಗಳು ರಜಸ್ವಲೆಯಾಗಿ ಇರಿಸು ಮುರಿಸು ಅನುಭವಿಸುವಾಗ ಹೆಣ್ಣಾಗಿ ಹುಟ್ಬಾರ್ದಪ್ಪಾ...ನಮಗೇ ನೋಡು ಈ ಕಷ್ಟ. ಹುಡ್ಗರು ಎಷ್ಟು ಬಿಂದಾಸ್ ಆಗಿ ಇರ್ತಾರೆ ಎಂದು ಅಮ್ಮನಲ್ಲಿ ಹಲುಬುವಾಗ, ಹೆಣ್ಣು ಜನ್ಮ ಅಮೂಲ್ಯವಾದದ್ದು ಕಣೇ. ಆಕೆ ಜನ್ಮದಾತೆ. ಗಂಡು ಮಕ್ಳಿಗೆ ಮಗು ಹೆತ್ತು ಕೊಡೋಕೆ ಆಗುತ್ತಾ ಇಲ್ಲ ತಾನೆ ಅದಕ್ಕಾಗಿಯೇ ನಮ್ಮ ದೇಹದಲ್ಲಿ ಈ ರೀತಿಯ ಬದಲಾವಣೆಯಾಗುತ್ತಾ ಇರುತ್ತದೆ ಎಂದು ಅಮ್ಮ ಹೇಳುತ್ತಿದ್ದರು. ಆದರೆ ಹೈಸ್ಕೂಲ್‌ನಲ್ಲಿ ಬಯೋಲಜಿ ಟೀಚರ್ ಪಾಠ ಮಾಡುವಾಗಲೇ ಇದೆಲ್ಲಾ ಅರ್ಥವಾಗತೊಡಗಿದ್ದು. ಆ ಸೃಷ್ಟಿಕರ್ತ ಹೆಣ್ಣನ್ನು ಯಾವ ರೀತಿ ಸೃಷ್ಟಿ ಮಾಡಿದ್ದಾನಲ್ಲಾ ಎಂದು ಆಶ್ಚರ್ಯ ಚಕಿತಳಾಗಿದ್ದು ಕೂಡಾ ಆಗಲೇ.
ನಾನು ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಅಕ್ಕನ ಮದುವೆಯಾಯಿತು. ಒಂದು ವರ್ಷ ಕಳೆದ ಕೂಡಲೇ ಆಕೆ ಶುಭಸುದ್ದಿ ನೀಡಿದ್ದಳು. 'ನಾನು ಅಮ್ಮನಾಗುತ್ತಿದ್ದೇನೆ' ಎಂದು ಫೋನ್ ಮಾಡಿ ಹೇಳಿದಾಗ ಅವಳ ಸಂಭ್ರಮ ನೋಡಬೇಕಿತ್ತು! ತನ್ನ ಗರ್ಭದಲ್ಲಿರುವ ಮಗುವಿನ ಹೃದಯ ಬಡಿತ ಅನುಭವಿಸಿದಾಗ ಉಂಟಾಗುವ ಪುಳಕ, ಪುಟ್ಟ ಕಾಲುಗಳ ಒದೆತ, ಪ್ರಸವ ವೇದನೆಯ ಆ ಕಷ್ಟ... ಎಲ್ಲವನ್ನೂ ಅನುಭವಿಸಿದ ನಂತರ ಕೆಂಪು ಕೆಂಪಾಗಿರುವ ತನ್ನ ಪಾಪುವಿನ ಮುಖ ಕಂಡ ಕೂಡಲೇ ಮನಸ್ಸಿಗುಂಟಾಗುವ ಸಂತೋಷ... ಇವೆಲ್ಲವನ್ನೂ ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲ.
ಪಾಪು ತನ್ನ ಪುಟ್ಟ ಕೈಗಳಿಂದ ಸ್ಪರ್ಶಿಸುವಾಗ, ಮೊಲೆ ಹಾಲುಂಡು ನಿದ್ರಿಸುವಾಗ, ಬೊಚ್ಚು ಬಾಯಗಲಿಸಿ ನಕ್ಕಾಗ ಅನುಭವಿಸುವ ಸುಖ ಅರಿಯಬೇಕಾದರೆ ಹೆಣ್ಣು ಅಮ್ಮನಾಗಬೇಕು. ತನ್ನ ಕರುಳ ಕುಡಿ... ಅದರ ಪುಟ್ಟ ಹೆಜ್ಜೆ, ನಗುವನ್ನು ಕಂಡು ಸಂಭ್ರಮಿಸುವಾಗ ಜಗತ್ತಿನ ಎಲ್ಲ ದುಃಖಗಳು ಮರೆಯಾಗುತ್ತವೆ ಎಂದು ಅಕ್ಕ ಹೇಳುವಾಗ ಆಕೆ ನನ್ನ ಪಾಲಿಗೆ ಅಕ್ಕ ಮಾತ್ರವಲ್ಲ, ಅಮ್ಮನೂ ಆಗಿ ಬಿಡುತ್ತಿದ್ದಳು. ಒಡ ಹುಟ್ಟಿದವಳೇ ಆಗಿದ್ದರೂ ಅಮ್ಮನಾದ ಮೇಲೆ ಎಂಥಾ ಬದಲಾವಣೆ ಇದು.
ಮತ್ತೆ ಫೋನ್ ರಿಂಗಾಯಿತು. ಮನೆಯಿಂದ ಅಮ್ಮ ಕರೆ ಮಾಡಿದ್ದರು. ಹಲೋ ಎಂದೆ, ನನ್ನ ದನಿ ಕೇಳಿ 'ಏನಾಯ್ತು ಪುಟ್ಟಾ ಹುಷಾರಿಲ್ವಾ?' ಎಂದು ಗಾಬರಿಯಿಂದಲೇ ಕೇಳಿದರು. 'ಏನಿಲ್ಲಮ್ಮಾ, ಇವತ್ತು ನಂದು...' ಎಂದಾಗ 'ಹೂಂ ಆಯ್ತಾ... ಸರಿ ರೆಸ್ಟ್ ತಗೋ, ಚೆನ್ನಾಗಿ ನೀರು ಕುಡಿ, ಹಣ್ಣು ತಿನ್ನು, ಚಿಪ್ಸ್ ಏನೂ ತಿನ್ಬೇಡ...' ಎಂದು ಜಾಗ್ರತೆ ಹೇಳಿ ಅದು ಇದು ಮಾತನಾಡಿ ಫೋನಿಟ್ಟರು. ಕಳೆದ ತಿಂಗಳು ಊರಿಗೆ ಹೋದಾಗ ಅಮ್ಮ ಹೇಳಿದ್ರು, ಮುಟ್ಟು ನಿಂತಿದೆ ಅಂತಾ. ಹೆಣ್ಣೊಬ್ಬಳ ಜೀವನದಲ್ಲಿ ಇದೂ ಮಹತ್ತರವಾದ ಘಟ್ಟ. ಈ ಹೊತ್ತಲ್ಲಿ ಅನುಭವಿಸಿದ ಕಿರಿಕಿರಿ, ಮೈ ಕೈ ನೋವು, ಟೆನ್ಶನ್ ಎಲ್ಲವನ್ನೂ ವಿವರಿಸುತ್ತಿದ್ದರೆ ನಾನು ಗಾಬರಿಯಿಂದಲೇ ಕೇಳುತ್ತಿದ್ದೆ, 'ಎಷ್ಟು ಕಷ್ಟ ಅಲ್ವಾ ಅಮ್ಮ ಇದೆಲ್ಲಾ?' ಎಂದು. 'ಹೆಣ್ಣು ಜನ್ಮ ಅಂದ್ರೆ ಸುಮ್ನೇನಾ? ಎಷ್ಟೇ ಕಷ್ಟಗಳು ಬಂದರೂ ಅದನ್ನು ಸಹಿಸುವ ಶಕ್ತಿ ದೇವರು ನಮಗೆ ಕೊಟ್ಟಿದ್ದಾನೆ. ನಮ್ಮಂತಹ ಹೆಣ್ಣು ಮಕ್ಕಳಿಗಿರುವಷ್ಟು ಧೈರ್ಯ, ತಾಳ್ಮೆ, ಸಹನೆ ಇನ್ಯಾರಿಗೂ ಇರಲ್ಲ' ಎಂದು ಅಮ್ಮ ಕಾನ್ಫಿಡೆಂಟ್ ಆಗಿ ಹೇಳುವಾಗ ಹೆಣ್ಮಕ್ಕಳೇ ಸ್ಟ್ರಾಂಗ್ ಗುರೂ ಅಂತಾ ನಾನು ಮನಸಲ್ಲೇ ಹಾಡಿಕೊಂಡೆ.
ನಾನು ದೊಡ್ಡವಳಾದಾಗ ಅಮ್ಮ ಸಂಭ್ರಮದಿಂದ ಓಡಾಡಿ ಸ್ನಾನ ಮಾಡಿಸಿದ ದಿನ, ಅಕ್ಕ ಮದುವೆಯಾಗಿ ಮನೆಗೆ ಬಂದವಳು ಕಳೆದ ತಿಂಗಳು ಮುಟ್ಟಾಗಿಲ್ಲಮ್ಮ ಎಂದು ಗುಟ್ಟಾಗಿ ಹೇಳಿದಾಗ ಆಕೆಯನ್ನು ತಬ್ಬಿಕೊಂಡು
ಆನಂದಭಾಷ್ಪ ಸುರಿಸಿದ ಕ್ಷಣ, ಅಮ್ಮನ ಮೆನೋಪಾಸ್ ದಿನದ ಅನುಭವಗಳು... ಹೀಗೆ ಹೆಣ್ಣೊಬ್ಬಳ ಜೀವನದ ಮಹತ್ವದ ಕ್ಷಣಗಳೆಲ್ಲವೂ ಸಿನಿಮಾದ ದೃಶ್ಯದಂತೆ ಕಣ್ಣ ಮುಂದೆ ಹಾದು ಹೋದವು.
ಇನ್ನು ಜಗಳ ಮಾಡಿದ್ದು ಸಾಕು ಎಂದು ಮೊಬೈಲ್ ಕೈಗೆತ್ತಿಕೊಂಡು ನಂಬರ್ ಡಯಲ್ ಮಾಡಿದೆ.
'ಐ ಆ್ಯಮ್ ಸ್ಸಾರಿ...' ಎಂದೆ.
'ಇಟ್ಸ್ ಓಕೆ. ಐ ಕ್ಯಾನ್ ಅಂಡರ್ ಸ್ಟ್ಯಾಂಡ್‌' ಅಂದ.
ನನ್ನ ಸಿಡುಕು ಬುದ್ಧಿಯನ್ನು ಮನಸ್ಸಲ್ಲೇ ಬಯ್ಯುತ್ತಾ ಮೊಬೈಲ್‌ನಲ್ಲಿ ಪಿರಿಯಡ್ ಟ್ರ್ಯಾಕರ್ ಆ್ಯಪ್ ಓಪನ್ ಮಾಡಿ ಫಸ್ಟ್ ಡೇ- ನಾರ್ಮಲ್, ಮೂಡ್- ಡಿಪ್ರೆಸ್ಡ್ ಎಂದು ನೋಟ್ ಮಾಡಿ ನನ್ನ ಕೆಲಸದಲ್ಲಿ ಮಗ್ನಳಾದೆ. ಪಿರಿಯಡ್ ಟ್ರ್ಯಾಕರ್ ಮುಂದಿನ ಪಿರಿಯಡ್ ಡೇಟ್‌ಅನ್ನು ಕಲರಿಂಗ್ ಮಾಡಿ ತೋರಿಸುತ್ತಿತ್ತು.

-ಇಬ್ಬನಿ
loveibbani@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com