
ಸಂಸಾರವೆಂಬ ಸಾಗರವ ಈಜಿ ದಡ ಸೇರಲಾಗದಿದ್ದರೂ ಗೆಳೆಯನೆಂಬೊಂದು ನದಿಯ ದಾಟಬಹುದಲ್ಲ...
ನಿನ್ನ ಅಗಲುವಿಕೆಯನ್ನು ಅರಗಿಸಿಕೊಳ್ಳಲು ನನ್ನಿಂದಾಗುತ್ತಿಲ್ಲ. ಗಂಟಲುಬ್ಬಿ ಮನಸ್ಸು ಘಾಸಿಯಾಗಿದೆ. ನಿನ್ನ ಪ್ರೀತಿಯ ಆತ್ಮ ಅಘೋರಿಯಾಗಿ ನನ್ನ ಸುತ್ತಲೆಲ್ಲೋ ಇರಬಹುದೆಂಬ ಮೋಹ ಆವರಿಸಿದೆ. ಕಿವಿ ರಂಧ್ರದ ಕಣಕಣಕು ತರಂಗದಲೆಯಾಗಿ ಮತ್ತೆ ಮರುಕಳಿಸುವ ನಿನ್ನ ಧ್ವನಿ. ಆ ಅಮೃತ ಗಳಿಗೆಯ ಅದಮ್ಯ ಪ್ರೀತಿ ಮತ್ತೆ ನನ್ನೊಡಲಲ್ಲಿ ಸುಳಿದಾಡಬಹುದೇ ಎಂಬ ಆಶಾಭಾವ. ಅಗಲಿದ ನೀನು ಮತ್ತೆ ಪ್ರತ್ಯಕ್ಷವಾಗುವೆ ಎಂಬ ಭ್ರಮೆ.
ಹಾ... ನೀನು ನನ್ನನ್ನಗಲಿ ಇಂದಿಗೆ ಮೂರನೇ ದಿನ. ಉಮ್ಮಳಿಸಿದ ದುಃಖದ ಹನಿ ನೀ ತೊರೆದ ಪ್ರೀತಿಗೆ ಸಾಕ್ಷಿ. ನಿನಗೆ ಒಂದೊಂದು ಪುಕ್ಕ ಮೂಡಿದಾಗಲೂ ನನಗೇ ರೆಕ್ಕೆ ಮೂಡಿದಷ್ಟು ಸುಖ ಅನುಭವಿಸಿದ್ದಿದೆ. ಆ ಮಿಡಿತ ಸ್ತಬ್ಧವಾದಾಗ ನನ್ನ ಕಣ್ಣಾಲಿ ತುಂಬಿ, ನೀ ರೆಕ್ಕೆ ಬಲಿತು ಹಾರಿದ್ದಿದ್ದರೆ ನಾನೇ ಆಕಾಶಕ್ಕೆ ಸೇತುವೆ ಕಟ್ಟುತ್ತಿದ್ದೆ ಎಂಬ ಮೌನದ ಮಿಡಿತ. ಪುಕ್ಕ ಕಳಚಿದ ಯಾತನೆಗೆ ವೇದನೆ ತುಂಬಿತು.
ಅಂಗಳದ ತುಂಬೆಲ್ಲ ನೀ ಅತ್ತಿತ್ತ ಓಡಾಡಿದ ಹೆಜ್ಜೆ ಗುರುತು ಇನ್ನೂ ಇದೆ. ಬರುವ ಮಳೆಗಾಲಕ್ಕೆ ಅದು ಅಳಿಸಬಹುದು. ಆದರೆ, ಮನದೊಳಗೆ ಅಚ್ಚಳಿಯದ ನವಿರಾದ ನೆನಪು ಯಾವ ಋತುಮಾನಕ್ಕೂ ಮಾಸದು.
ನಿನ್ನ ಭಾಷೆ ಅರ್ಥವಾಗುತ್ತಿಲ್ಲವಾದರೂ ಆ ಪ್ರೀತಿಯ ಸ್ಪರ್ಶ ಪದವಿರದಂತೆ ಪ್ರಹರಿಸಿತ್ತು. ನಿನಗಾದ ಗಾಯ ಮಾಸುವ ಮುನ್ನ ನನ್ನೊಳಗೆ ಮಾಸದ ಗಾಯ ನೀನಾಗಿಬಿಟ್ಟೆ. ಇಷ್ಟೇ ದಿನ ಇರಬಹುದು ನನ್ನ ನಿನ್ನ ಋಣ. ಆದರೆ ನಾವಿಬ್ಬರೂ ಬಾಳಿದ ಆ ಕ್ಷಣ ಇನ್ನು ನೆನಪು ಮಾತ್ರ. ನಿನ್ನೊಳಗೊಂದು ಕೊರಗಿತ್ತು ಅನ್ನುವುದು ನನಗೆ ತಿಳಿಯಲೇ ಇಲ್ಲ. ನನಗೆ ಅದು ಅರ್ಥವೂ ಆಗಲಿಲ್ಲ, ನಿನ್ನ ಪ್ರೀತಿಯ ಹೊರತಾಗಿ.
ನಿಜಕ್ಕೂ ವೇದನೆಯಾಗುತ್ತಿದೆ ನಿನ್ನ ಸಾವಿನ ಕ್ಷಣ ನೆನೆದು. ಈ ಮೂರು ದಿನದಲ್ಲಿ ಅದೆಷ್ಟೋ ಬಾರಿ ಅತ್ತಿದ್ದೇನೆ ತೆರೆಯ ಮರೆಯಲ್ಲಿ. ನಿನ್ನ ಮೇಲಿನ ಪ್ರೀತಿ ಯಾರೊಂದಿಗೂ ಹಂಚಿಕೊಳ್ಳಲಾಗುತ್ತಿಲ್ಲ. ಹೇಳಿಕೊಳ್ಳಲೂ ವೇದನೆ. ಯಾಕೆಂದರೆ ನನ್ನ ನೋವಿಗೆ ಕನಿಕರಿಸಿ, ನಿನ್ನ ಬಗ್ಗೆ ಇಲ್ಲಸಲ್ಲದ್ದ ಹೇಳುವವರ ಅಗತ್ಯ ನನಗಿಲ್ಲ.
ನೀ ನಮ್ಮಮನೆಗೆ ಬರಬಾರದಿತ್ತೆನಿಸುತ್ತಿದೆ. ಆದರೆ ನೀನು ಅನಾಥವಾಗಿ ಬಿದ್ದಿದ್ದು ನನ್ನಿಂದ ನೋಡಲಾಗಲೇ ಇಲ್ಲ. ತಾಯಿ ಹೃದಯ ನನ್ನದು. ನಿನ್ನ ಅಪ್ಪಿ, ಒಪ್ಪಿ ಮನೆಗೆ ತಂದೇ ಬಿಟ್ಟೆ. ಅಪ್ಪ, ಅಮ್ಮನಿಲ್ಲದ ನಿನ್ನ ಅನಾಥ ವೇದನೆ ನನಗೆ ಅರ್ಥವಾಗಲೇ ಇಲ್ಲ.
ನಿನಗಿತ್ತ ತುತ್ತಿನ ನೆನಪು ನನಗಿಲ್ಲದಿದ್ದರೂ, ನಿನ್ನ ಹಸಿವನ್ನು ಅರ್ಥೈಸಿಕೊಂಡಿದ್ದೆ. ಈಗ ಕಣ್‌ಮುಚ್ಚಿ ಕುಳಿತರೂ ನೀ ಮೈಮೇಲೆ ಹರಿದಾಡಿದಂತೆ ಭಾಸ. ಕಾಡಿ, ಬೇಡಿ ಕಾಲು ಸುತ್ತುತ್ತಿದ್ದ ಅನುಭವವನ್ನು ಹೇಗೆ ಮರೆಯಲಿ? ಕಾಡುವ ನಿನ್ನ ನೆನಪು ನಿನ್ನೊಂದಿಗೆ ಏಕೆ ಹೋಗಲಿಲ್ಲ ಎಂದೆನಿಸುತ್ತಿದೆ. ನಿನ್ನ ಕಾಲಿಗೆ ಕಟ್ಟಿದ ಗೆಜ್ಜೆ ನಿನ್ನೊಂದಿಗೆ ಮಣ್ಣಾದರೂ, ಅದರ ಸಪ್ಪಳ ಇನ್ನೂ ಕೇಳಿಸುತ್ತಿದೆ.
ನೀ ಮನೆಗೆ ಬಂದ ದಿನ ಎಲ್ಲರೂ ಪಟ್ಟ ಸಂತಸ ಅಷ್ಟಿಷ್ಟಲ್ಲ. ಆದರಿಂದು ಬರಿಯ ಮೌನ ಸಾಗರದ ನೋವಿನಲೆಗಳು ಹೃದಯ ತಟ್ಟುತ್ತಿವೆ. ಕೆಲವೇ ಕೆಲವು ದಿನ ಇದ್ದು, ನನ್ನಗಲಿದ, ಪ್ರೀತಿಯ ನೆನಪು ಬಿಟ್ಟು ಹೋದ ಪುಟ್ಟ ಪಾರಿವಾಳವೇ... ಮತ್ತೆ ಮೂಡಿ ಬಾ ನೀ ಎನ್ನ ಚಿತ್ತಪ್ರಥ್ವಿಯಲ್ಲಿ...
ನಿನ್ನ ಆತ್ಮಕ್ಕೊಂದು ನೆಮ್ಮದಿ ಇರಲಿ. ನಿನಗಿದೊ ಭಾವಪೂರ್ಣ ಅಶ್ರುತರ್ಪಣ.
-ವಿನುತಾ ಹೆಗಡೆ
vntvnk@gmail.com
Advertisement