ವ್ಯತಿರಿಕ್ತ
ಖಾಲಿ ಕುರ್ಚಿ ತನ್ನದಲ್ಲದ ಭಾರ ಕಳಚಿಕೊಂಡ ಸುಖ ಮತ್ತು ಏಕಾಂಗಿಯಾಗಿ ಉಳಿದ ದುಃಖ ಅನುಭವಿಸುತ್ತಿದೆ.
ನಿರೀಕ್ಷೆ
ಎಲ್ಲಿಗೋ ಕರೆದೊಯ್ಯಬೇಕಿದ್ದ ದಾರಿ ಇಲ್ಲಿಯೇ ನಿಂತಿದೆ; ಎಲ್ಲೋ ಇರುವ ಗುರಿ ತನ್ನೆಡೆಗೆ ತೂರಿ ಬರಬಹುದೆಂದು.
ಆರೋಪ
ಮನಸು ಧರಿಸಿದ ನಿಲುವಿಗಿಂತ ಮೈ ಹೊದ್ದುಕೊಂಡ ದಿರಿಸಿಗೆ ಮನ್ನಣೆ ನೀಡಿದವನು ಅವಳ ವ್ಯಕ್ತಿತ್ವಕ್ಕೆ ಹಾದರಗಿತ್ತಿಯ ಪಟ್ಟ ಹೊರಿಸುತ್ತಿದ್ದಾನೆ.
ಪ್ರತಿಕ್ರಿಯೆ
ತೆರೆದ ಕಿಟಕಿ ತಂಗಾಳಿಯ ಮಾತು ಹೊತ್ತು ತರುತ್ತಿದೆ. ಮರುಗಿದ ಮನಸು ಮೌನದ ತಾಪ ಅನುಭವಿಸುತ್ತಿದೆ.
ಸಾಂತ್ವನ
ಕೇಳಲು ಬಯಸದ ಮಾತುಗಳೇ ಕಿವಿಗಪ್ಪಳಿಸುವಾಗ ಹೇಳದೆ ಉಳಿಸಿಕೊಂಡ ಮಾತುಗಳು ಸಂತೈಸಲು ಬಂದವು
ಧೋರಣೆ
ತಿರುಗದೇ ನಿಂತ ಫ್ಯಾನ್ ದಣಿವಾರಿಸಿಕೊಳ್ಳುತ್ತಿದೆ. ತಿರುಗುವ ಜಗ ನೋಡಿ ನಗುತ್ತಿದೆ.
ರೂಪಾಂತರ
ಒಡಲೊಳಗಿನ ಮಂಜುಗಡ್ಡೆ ಹೊರಗಿನ ಬಿಸಿಗೆ ಕರಗಿ ನದಿಯಾಗುವ ಹಂಬಲ ಹೊತ್ತ ವೇಳೆಯಲ್ಲಿ ಆವಿಯಾಗತೊಡಗಿತು.
ಬಿರುಗಾಳಿ
ಬಾನಿಗೆ ನೆಲದ ನೋವು ಹೊತ್ತೊಯ್ಯುವ ಉಮೇದಿನಿಂದ ಎದ್ದ ಬಿರುಗಾಳಿ, ಮಣ್ಣಿನ ಅಳಲು ಆಲಿಸದೆ ಅರ್ಭಟಿಸಿತು.
ಸಮಾಧಿ
ಬಣ್ಣದ ಮಾತುಗಳೇ ತುಂಬಿದ್ದ ಕೋಣೆಯಲ್ಲಿ ತನ್ನನ್ನು ತಾನು ಬಣ್ಣಿಸಿಕೊಳ್ಳಲಾಗದ ಸಾಲೊಂದು ಸಮಾಧಿಯಾಯಿತು.
= ಎಚ್.ಕೆ.ಶರತ್,ಇ/ಮ ಜೆ.ಆರ್. ಕೆಂಚೇಗೌಡ, ಹಾಸನ
Advertisement