
ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಋಷಿಕವಿ ಷಡಕ್ಷರ ದೇವರ ಹೆಸರು ಅಜಾರಾಮರ. ಸಂಸ್ಕೃತ ಹಾಗೂ ಕನ್ನಡದಲ್ಲಿ ಪಾಂಡಿತ್ಯ ಪಡೆದು ರಾಜಗೌರವಕ್ಕೆ ಪಾತ್ರರಾಗಿದ್ದ ಷಡಕ್ಷರ, ಕಾವ್ಯ ರಚನೆ ಮತ್ತು ತಪಸ್ಸು ಮಾಡುತ್ತಿದ್ದ ಮಠ (ಮನೆ) ಅನಾದರಕ್ಕೆ ಒಳಗಾಗಿ ಶಿಥಿಲಾವಸ್ಥೆ ತಲುಪಿದೆ.
ಕವಿ ಷಡಕ್ಷರದೇವರ ಕಾಲ ಸುಮಾರು ಕ್ರಿ.ಶ.1636- 1685. ಈತನ ಜನ್ಮಸ್ಥಳ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಧನಗೂರು. ಹಲಗೂರಿನಿಂದ 8 ಕಿ.ಮೀ. ದೂರದಲ್ಲಿರುವ ಹಲಸಹಳ್ಳಿ ಗವಿಮಠ (ಮನೆ) ಷಡಕ್ಷರದೇವ ಏಕಾಂತವಾಗಿ ಕೃತಿಗಳನ್ನು ರಚಿಸಿದ ಮತ್ತು ತಪಸ್ಸು ಮಾಡಿದ ಪುಣ್ಯಕ್ಷೇತ್ರ.
ರಾಜಶೇಖರ ವಿಲಾಸ, ವೃಷಭೇಂದ್ರ ವಿಜಯ (ಬಸವರಾಜ ವಿಜಯಂ) ಮತ್ತು ಶಬರ ಶಂಕರ ವಿಲಾಸ ಮಹಾಕಾವ್ಯಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಈತನ ಕೊಡುಗೆ. ಸಂಸ್ಕೃತದಲ್ಲಿ ಕವಿಕರ್ಣರಸಾಯನ ಕಾವ್ಯವನ್ನು ಷಡಕ್ಷರದೇವ ರಚಿಸಿದ್ದಾರೆ. ಅಲ್ಲದೆ ಅನೇಕ ಸಂಸ್ಕೃತ ಲಘು ಕಾವ್ಯಗಳನ್ನು ಬರೆದಿದ್ದು, ತನ್ನ ಕಾವ್ಯಗಳಲ್ಲಿ ವರ್ಣನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ.
ಕನ್ನಡ ಸಾಹಿತ್ಯ ಲೋಕಕ್ಕೆ ಮಹೋನ್ನತ ಕೃತಿಗಳನ್ನು ನೀಡಿದ ಕವಿಯ ಹೆಸರು ನೆನಪಿನಲ್ಲಿ ಉಳಿಸುವಂತಹ ಯಾವುದೇ ಕೆಲಸಗಳು ಹಲಸಹಳ್ಳಿಯಲ್ಲಿ ನಡೆದಿಲ್ಲ. ಹಳೇ ಹೆಂಚು ಮತ್ತು ಮಣ್ಣಿನ ಗೋಡೆಗಳಿಂದ ಮಠ ಕೂಡಿದೆ. ಈವರೆಗೂ ಬೆಳಕಿಗೆ ಬಾರದೆ ಮರೆಯಾಗಿರುವ ಮಠ, ನೆಲದಲ್ಲಿ ಹುದುಗಿ ಹೋಗಲು ಹವಣಿಸುತ್ತಿರುವಂತಿದೆ.
ಷಡಕ್ಷರದೇವರು ಧನಗೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ಧನಗೂರು ಹಾಗೂ ಹಲಸಹಳ್ಳಿ ಗವಿಮಠದ ಬಳಿ ತಮ್ಮ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂಬುದಕ್ಕೆ ಕುರುಹುಗಳಿವೆ. ಕವಿಗೆ ಅತ್ಯಂತ ಪ್ರಿಯವಾದ ಶಿವಲಿಂಗೇಶ್ವರ ದೇವಾಲಯವಿದ್ದು, ಅದು ಸಹ ಶಿಥಿಲಾವಸ್ಥೆಯಲ್ಲಿದೆ.
ಧನಗೂರು ವೀರಸಿಂಹಾಸನ ಮಠದಲ್ಲಿ ಏಳನೂರು ವರ್ಷ ಹಿಂದೆ ಉದ್ದಾನಶಿವಯೋಗಿಗಳು, ಚಿಕ್ಕವೀರದೇಶಿಕೇಂದ್ರ ಸ್ವಾಮೀಜಿ ತಮ್ಮ ಗುರು ಪರಂಪರೆ ನಡೆಸಿದ್ದರು. ಆ ನಂತರ ಕವಿ ಷಡಕ್ಷರದೇವ ಮಠದ ಅಧ್ಯಕ್ಷರಾಗಿ, ಶಾಖಾ ಮಠವಾದ ಚಾಮರಾಜನಗರ ಜಿಲ್ಲೆ ಯಳಂದೂರಿಗೆ ಹೋಗಿ ಅಲ್ಲಿ ಸಾಹಿತ್ಯ ಚಟುವಟಿಕೆ ನಡೆಸಿ, ಅಲ್ಲೆ ತಮ್ಮ ಜೀವನದ ಯಾತ್ರೆಗೆ ಅಂತಿಮ ಹಾಕಿದ್ದು, ಸಮಾಧಿ ಇದೆ.
ಜಿಲ್ಲೆಯವರೇ ಆದ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಷಡಕ್ಷರದೇವ ಕಲಾ ಮಂಟಪ ನಿರ್ಮಾಣಕ್ಕೆ ಒಂದು ಲಕ್ಷ ರುಪಾಯಿ ಮಂಜೂರಾಯಿತು. ಈಗ ಅದು ಪೂರ್ಣಗೊಂಡಿದೆ. ಮಠದ ನವೀಕರಣ ಮತ್ತು ಕಲ್ಲು ಮಂಟಪದ ಜೀರ್ಣೋದ್ಧಾರಕ್ಕೆ 20 ಲಕ್ಷ ರುಪಾಯಿಗಳ ಅಗತ್ಯವಿದೆ.
ಈಗ ಮಠದಲ್ಲಿರುವ ಶ್ರೀ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಮಠದ ಉನ್ನತಿಗಾಗಿ ಜೀರ್ಣೋದ್ಧಾರ ಸಮಿತಿ ರಚಿಸಿದ್ದಾರೆ. ಕವಿ ಹೆಸರಿನಲ್ಲಿ ಪುಟ್ಟ ಕಲಾಮಂಟಪ ನಿರ್ಮಿಸಿ ವಾರ್ಷಿಕಾರಾಧನೆ ಮತ್ತು ವಿಚಾರ ಸಂಕಿರಣಗಳು ನಿರಂತರವಾಗಿವೆ. ಅಲ್ಲದೆ ಕವಿ ಹೆಸರಿನಲ್ಲಿ ಪ್ರಾಥಮಿಕ ಶಾಲೆಯನ್ನೂ ಪ್ರಾರಂಭಿಸಿದ್ದಾರೆ.
ಷಡಕ್ಷರದೇವರ ಎಲ್ಲಾ ಪುಸ್ತಕಗಳನ್ನು ಸಂಗ್ರಹಿಸಿ, ಮರು ಪ್ರಕಟಣೆ ಮಾಡಿ, ಹಾಳಾಗಿರುವ ಮಠವನ್ನು ಸ್ಮಾರಕ ಮಾಡುವುದು, ಕವಿಯ ಪುತ್ಥಳಿ ಸ್ಥಾಪನೆ, ಸಂಶೋಧನಾ ಕೇಂದ್ರ ತೆರೆಯುವುದು ಕವಿ ಹೆಸರು ಚಿರಾಯುವಾಗುವಂತಾಗಲು ಮಾಡಬೇಕಾದ ಕೆಲಸಗಳು.ಟಿ
- ಎಂ.ಅಫ್ರೋಜ್ ಖಾನ್
ಚಿತ್ರಗಳು: ಜಯಣ್ಣ
Advertisement