
ಕರಾವಳಿಯಲ್ಲಿ ಈಗಾಗಲೇ ಹಸಿರು ಮತ್ತು ಕೇಸರಿ ಗ್ಯಾಂಗ್‌ಗಳು ಇವೆ. ಹಿಂದೂ ಯುವತಿಯರ ಜತೆ ಮುಸ್ಲಿಂ ಯುವಕರು ಸಲ್ಲಾಪವಾಡುತ್ತಿದ್ದರೆ ಕೇಸರಿ ಗ್ಯಾಂಗ್, ಮುಸ್ಲಿಂ ಯುವತಿಯರ ಜತೆ ಹಿಂದೂ ಯುವಕರು ಚಕ್ಕಂದವಾಡುತ್ತಿದ್ದರೆ ಹಸಿರು ಗ್ಯಾಂಗ್ ಆಕ್ರಮಣ ಮಾಡುತ್ತವೆ. ಹಿಂದು ಇರಲಿ, ಮುಸ್ಲಿಂ ಇರಲಿ ಮಹಿಳೆಯರಿಗೆ ದೌರ್ಜನ್ಯವಾದರೆ ದೊಣ್ಣೆ ಹಿಡಿದು ದಾಳಿ ಇಡುವ ಗುಲಾಬಿ ಗ್ಯಾಂಗ್ ಇಲ್ಲಿಗೀಗ ಹೊಸ ಸೇರ್ಪಡೆ!
ಹೌದು, ಉತ್ತರ ಪ್ರದೇಶದ ಗುಲಾಬ್ ಗ್ಯಾಂಗ್ ನಾಯಕಿ ಸಂಪತ್‌ಪಾಲ್ ದೇವಿ ಕರಾವಳಿಗೆ ಬರುತ್ತಿದ್ದಾರೆ. ಮಂಗಳೂರಲ್ಲಿ ವಿವೇಕ್ ಟ್ರೇಡರ್ಸ್ ಆಯೋಜಿಸಿರುವ ಮಹಿಳೆಯರ ಆತ್ಮವಿಶ್ವಾಸ ತುಂಬುವ ಕಾರ್ಯಾಗಾರದಲ್ಲಿ ಆ.5ರಂದು ಭಾಗವಹಿಸಲಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚೆಗೆ ಹಲವಾರು ಸಾಮೂಹಿಕ ಅತ್ಯಾಚಾರಗಳು ನಡೆದು ದೇಶಾದ್ಯಂತ ಸುದ್ದಿ ಮಾಡಿದ್ದವು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿದ್ದವು. ಈ ನಡುವೆ ಯುವತಿಯರ ಸ್ವಾತಂತ್ರ್ಯ ಹತ್ತಿಕ್ಕುವ ನೈತಿಕ ಪೊಲೀಸ್‌ಗಿರಿಯೂ ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ, ಉತ್ತರಪ್ರದೇಶದಲ್ಲಿ ಮಹಿಳೆಯರ ಸ್ವಾತಂತ್ರ್ಯ ಪರವಾಗಿ ನೈತಿಕ ಪೊಲೀಸ್‌ಗಿರಿ ನಡೆಸಿರುವ ಸಂಪತ್ ದೇವಿ ಕರಾವಳಿಗೆ ಆಗಮಿಸಿ ಮಹಿಳೆಯರಿಗೆ ಪಾಠ ಮಾಡಲಿರುವುದು ಕುತೂಹಲಕರ.
ಉತ್ತರ ಪ್ರದೇಶದ ತೀರಾ ಹಿಂದುಳಿದ ಬುಂದೇಲ್ ಖಂಡದ ಕುರಿಕಾಯುವ ಕುಟುಂಬದಲ್ಲಿ ಹುಟ್ಟಿದವರು ಸಂಪತ್‌ಲಾಲ್ ದೇವಿ. ಗಂಡು ಮಕ್ಕಳು ಶಾಲೆಗೆ ಹೋದರೆ, ಸಂಪತ್ ದೇವಿ ಕುರಿ ಕಾಯುತ್ತಿದ್ದಳು. 12ರ ಹರೆಯದಲ್ಲಿ ಐಸ್‌ಕ್ರೀಮ್ ಮಾರುವ ಯುವಕನ ಜತೆ ಮದುವೆ. 15ರಲ್ಲಿ ಮಕ್ಕಳಾಯಿತು. ಅತ್ತೆ ಕಾಟ ತಪ್ಪಿಸಿಕೊಳ್ಳಲು ಗಂಡನ ಜತೆ ಹೊರಬಂದು ಪ್ರತ್ಯೇಕ ಸಂಸಾರ ಹೂಡಿದ ದೇವಿ, ಆಸ್ಪತ್ರೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ದೌರ್ಜನ್ಯಕ್ಕೊಳಗಾಗಿ ಬರುವ ಮಹಿಳೆಯರ ಕತೆಗಳನ್ನು ಕೇಳಿ ಮರುಗಿ ಸಹಾಯ ಮಾಡುತ್ತಿದ್ದರು. ಆಗ ಹೊಗೆಯಾಡುತ್ತಿದ್ದ ಆಕ್ರೋಶ ಒಂದು ದಿನ ಹೊರ ಬಂತು.
ಪಕ್ಕದ ಮನೆಯವನು ಪ್ರತಿ ದಿನ ಕುಡಿದು ಬಂದು ಮನೆಯಲ್ಲಿ ಪತ್ನಿಗೆ ಹೊಡೆಯುತ್ತಿದ್ದ. ಮಹಿಳೆಯ ಆರ್ತನಾದ ಕೇಳಲಾಗದೆ ಒಂದು ದಿನ ಸಂಪತ್ ದೇವಿ ತಡೆದಾಗ, 'ಕೇಳಲು ನೀನ್ಯಾರು' ಎಂದು ದಬಾಯಿಸಿ, ದೊಣ್ಣೆಯಿಂದ ಹೊಡೆಯಲು ಬಂದ. ಮರುದಿನ ನಾಲ್ಕು ಮಹಿಳೆಯರ ಜತೆ ಬಂದು ಕುಡುಕನಿಗೆ ದೊಣ್ಣೆ ಪೂಜೆ ಮಾಡಿದರು. ಇದೇ ಗುಲಾಬಿ ಗ್ಯಾಂಗ್‌ಗೆ ಮುನ್ನುಡಿಯಾಯಿತು.
ಬಾಂಡಾ ಎಂಬ ಊರಲ್ಲಿ ಎರಡು ವಾರಗಳಿಂದ ಕರೆಂಟ್ ನೀಡಿರಲಿಲ್ಲ. ಆದರೆ ವಿದ್ಯುತ್ ಬಿಲ್ ಪಾವತಿಸಿ ಎಂಬ ನೋಟಿಸ್ ಬಂದಿತ್ತು. ಗುಲಾಬಿ ಗ್ಯಾಂಗ್‌ನ ನೂರಾರು ಮಹಿಳೆಯರು ವಿದ್ಯುತ್ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿದರು. ಊರಿಗೆ ಕರೆಂಟ್ ಬಂದ ಬಳಿಕವೇ ಬೀಗ ತೆರೆದರು. ಇದು ರಾಜ್ಯಾದ್ಯಂತ ಸುದ್ದಿಯಾಯಿತು. ಆ ಬಳಿಕ ಗುಲಾಬಿ ಗ್ಯಾಂಗ್ ಖದರ್ ಮತ್ತಷ್ಟು ಹೆಚ್ಚಿತು.
ಈಗ ಚುಡಾಯಿಸಿದ್ರೆ ಬಾಸುಂಡೆ ಬರುವಂತೆ ದೊಣ್ಣೆಯಿಂದ ಬಾರಿಸುತ್ತಾರೆ. ಅತ್ಯಾಚಾರ ಮಾಡಿದ ಪುರುಷನ ಮರ್ಮಾಂಗಕ್ಕೆ ಕತ್ತರಿ ಇಡುತ್ತಾರೆ. ಸರ್ಕಾರಿ ಕಚೇರಿಗಳಲ್ಲಿ ಲಂಚ ಪಡೆಯುವವರ ವಿರುದ್ಧ ದೊಣ್ಣೆ ಎತ್ತುತ್ತಾರೆ. ಆಸ್ತಿ ತ್ಯಾಜ್ಯ ವಿವಾಹ ತಕರಾರು ಮಾತ್ರವಲ್ಲದೆ ಡಕಾಯಿತರ ಗುಂಪುಗಳಿಗೆ ಬಿಸಿ ಮುಟ್ಟಿಸಿದ ಖ್ಯಾತಿ ಸಂಪತ್ ದೇವಿಗಿದೆ. ಈಗ ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕೆ ಉತ್ತೇಜನ, ಉದ್ಯೋಗಕ್ಕೆ ನೆರವು, ವರದಕ್ಷಿಣೆ, ಬಾಲ್ಯ ವಿವಾಹ ವಿರುದ್ಧ ಆಂದೋಲನ, ಮರ್ಯಾದೆ ಹತ್ಯೆ ವಿರುದ್ಧ ಅಭಿಯಾನ ನಡೆಸುತ್ತಾ ಗಮನ ಸೆಳೆಯುತ್ತಿದ್ದಾರೆ.
2006ರಲ್ಲಿ ಆರಂಭವಾದ ಗುಲಾಬಿ ಗ್ಯಾಂಗ್‌ನಲ್ಲಿ ಈಗ 33 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಗುಲಾಬಿ ಬಣ್ಣದ ಸೀರೆ, ಕೈಯಲ್ಲೊಂದು ದೊಣ್ಣೆ ಗ್ಯಾಂಗ್ ಟ್ರೇಡ್ ಮಾರ್ಕ್.
ಮಹಿಳಾ ಕಾರ್ಯಾಗಾರ
ಮಹಿಳೆಯರಲ್ಲಿ ಆತ್ಮ ವಿಶ್ವಾಸ ತುಂಬಲು ವಿವೇಕ್ ಟ್ರೇಡರ್ಸ್ ವತಿಯಿಂದ ಮಂಗಳೂರಲ್ಲಿ ಡಿಸ್ಟ್ರೆಸ್ ಮ್ಯಾನೇಜ್‌ಮೆಂಟ್ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಯಾಗಾರ ಉದ್ಘಾಟನೆ ಹಾಗೂ ಮಹಿಳೆಯರಿಗೆ ಮಾರ್ಗದರ್ಶನಕ್ಕಾಗಿ ಸಂಪತ್‌ಲಾಲ್ ದೇವಿಯನ್ನು ಆಹ್ವಾನಿಸುತ್ತಿದ್ದೇವೆ. ಗುಲಾಬಿ ಗ್ಯಾಂಗ್ ಮಂಗಳೂರಲ್ಲಿ ಆರಂಭಿಸುವುದು ಬಿಡುವುದು ಅವರಿಗೆ ಬಿಟ್ಟದ್ದು ಎಂದು ನಮೋ ಬ್ರಿಗೇಡ್ ಸಂಸ್ಥಾಪಕರೂ ಆಗಿರುವ ಆಯೋಜಕ ನರೇಶ್ ಶೆಣೈ ಹೇಳುತ್ತಾರೆ.
ದೇಶ, ವಿದೇಶದಲ್ಲೂ ಖ್ಯಾತಿ
ವಿದೇಶಗಳಲ್ಲೂ ಗುಲಾಬಿ ಗ್ಯಾಂಗ್ ಚರ್ಚೆಯಾಗುತ್ತಿದೆ. 2012ರಲ್ಲಿ ನಿಶಿತಾ ಜೈನ್ ಗುಲಾಬಿ ಗ್ಯಾಂಗ್ ಕಿರುಚಿತ್ರ ದುಬೈಯಲ್ಲಿ ನಡೆದ ಬೆಸ್ಟ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಫಿಲಂ ಅವಾರ್ಡ್ ಪಡೆಯಿತು. ಮಾಧುರಿ ದೀಕ್ಷಿತ್ ಅಭಿನಯಿಸಿದ ಗುಲಾಬಿ ಗ್ಯಾಂಗ್ ಸಿನಿಮಾ ಕೂಡಾ ಈ ವರ್ಷ ಬಿಡುಗಡೆಯಾಯಿತು.
= ಜಿತೇಂದ್ರ ಕುಂದೇಶ್ವರ
Advertisement