ಕೋಪ ಮಾಡಿಕೊಂಡರೆ ಕಿಡ್ನಿ ಫೇಲಾಗುತ್ತದಾ?

ಕೋಪ ಮಾಡಿಕೊಂಡರೆ ಕಿಡ್ನಿ ಫೇಲಾಗುತ್ತದಾ?
Updated on

ಭಾಗ 25
ಕೋಪ ಯಾರ ಮೇಲೆ ಬರುತ್ತದೆ? ನಾವು ಯಾರ ಮೇಲೆ ಪ್ರದರ್ಶಿಸಬಲ್ಲೆವೋ ಅವರ ಮೇಲೇ ಬರುತ್ತದೆ. ಬಡವನ ಕೋಪ ದವಡೆಗೆ ಮೂಲ ಎನ್ನುವ ನಾಣ್ಣುಡಿ ಕೋಪಕ್ಕೆ ಅನ್ವಯಿಸುತ್ತದೆ. ಉದಾಹರಣೆಗೆ, ಹತ್ತು ನಿಮಿಷಗಳಲ್ಲಿ ಅತಿಥಿಗಳು ಬರುತ್ತಿದ್ದಾರೆ. ಸೋಫಾದ ಮೇಲೆ ನೀರಿನ ಲೋಟವನ್ನು ಉರುಳಿಸಿ ಒದ್ದೆ ಮಾಡಿಬಿಡುತ್ತಾನೆ ನಾಲ್ಕು ವರ್ಷದ ಮಗ. ..ನಿನಗೆ ಮಕ್ಕಳನ್ನು ಬೆಳೆಸುವುದೇ ಗೊತ್ತಿಲ್ಲ. ದರಿದ್ರ ಮುಖದವಳೇ! ಎಂದು ಹೆಂಡತಿಯನ್ನು ಬೈಯ್ಯುತ್ತಾನೆ ಮನೆಯ ಯಜಮಾನ. ಗೆಸ್ಟ್ಗಳು ಬರುವ ವೇಳೆಗೆ ಮತ್ತೆ ಕಿರುನಗೆಯ ಮುಸುಕು ಹಾಕಿಕೊಳ್ಳುತ್ತಾನೆ. ಐದು ನಿಮಿಷಗಳ ಅತಿಥಿಗಳಿಗಾಗಿ, ಹಲವು ಕಾಲ ಜತೆಗೆ ಬದುಕಬೇಕಿರುವ ಜೀವನದ ಭಾಗಸ್ವಾಮಿಯನ್ನು ನೋಯಿಸುತ್ತಾನೆ. ಫ್ರಾಯ್ಡ್ ಇದನ್ನು ಡಿಸ್ಪ್ಲೇಸ್ಮೆಂಟ್ ಚರ್ಯೆ ಎಂದು ವರ್ಣಿಸುತ್ತಾನೆ.
ಒಬ್ಬ ವ್ಯಕ್ತಿ ಹೊಸದಾಗಿ ಕಾರು ಕೊಳ್ಳುತ್ತಾನೆ. ಮಗನ ಸೈಕಲ್ ಗಾಳಿಗೆ ತೂರಾಡಿ ಕಾರಿನ ಮೇಲೆ ಬೀಳುತ್ತದೆ. ಸೈಕಲನ್ನು ನಿರ್ಲಕ್ಷ್ಯದಿಂದ ಇಟ್ಟಿದ್ದಕ್ಕೆ ಮಗನ ಕೆನ್ನೆಗೆ ಹೊಡೆಯುತ್ತಾನೆ. ತಪ್ಪು ಯಾರದು? ಯಾವಾಗಲೂ ಇಡುವ ಜಾಗದಲ್ಲಿಯೇ ಮಗ ಸೈಕಲ್ ಇಟ್ಟಿದ್ದಾನೆ. ಹೊಸದಾಗಿ ಬಂದಿರುವುದು ನನ್ನ ಕಾರು. ಸೈಕಲ್ ದೂರವಾಗಿಡೆಂದು ಮಗನಿಗೆ ನಾನೇ ಹೇಳಬೇಕಿತ್ತು. ಅದರಲ್ಲಿ ನನ್ನ ಮಗನ ತಪ್ಪೇನೂ ಇಲ್ಲ ಎಂದು ತಿಳಿದುಕೊಳ್ಳುವುದೇ ಇಂಗಿತಜ್ಞಾನ.
ಆದರೆ ಆ ವಿಚಕ್ಷಣಾ ಜ್ಞಾನವನ್ನು, ಹೊಸಕಾರು ಹಾಳಾಯಿತೆಂಬ ದುಗುಡ ಹೋಗಿಸಿಬಿಡುತ್ತದೆ. ಆ ಬಾಧೆಯನ್ನು ವೆಂಟಿಲೇಟ್ ಮಾಡುವುದಕ್ಕಾಗಿ ಉಪಯೋಗಿಸುವ ಭಾವೋದ್ವೇಗವೇ ಕೋಪ. ಅದೇ, ಅವನ ಬಾಸ್ ಆ ಕಾರನ್ನು ತೆಗೆದುಕೊಂಡು ಹೋಗಿ ಎತ್ತಿಗೆ ಢಿಕ್ಕಿ ಹೊಡೆಯುತ್ತಾನೆಂದುಕೊಳ್ಳಿ. ಪರವಾಗಿಲ್ಲ ಸರ್. ಹೋಗಿದ್ದು ಎತ್ತೇ ತಾನೇ. ಕಾರಿಗೆ ಬಿದ್ದಿರುವುದೂ ಚಿಕ್ಕ ಏಟು ತಾನೇ ಎಂದು ಶುಷ್ಕವಾಗಿ ನಗುತ್ತಾನೆ ಆ ವ್ಯಕ್ತಿ. ಕೋಪವನ್ನು ಪ್ರದರ್ಶಿಸಲಾರ.
ಕೋಪ ಪ್ರದರ್ಶಿಸುವುದು ಬೇರೆ, ಅನುಭವಿಸುವುದು ಬೇರೆ. ಕಣ್ಣು ಕೆಂಪಾಗಿ, ದೇಹ ಕಂಪಿಸುತ್ತಿದ್ದು, ಮಾತುಗಳ ಮೇಲೆ, ಕೈಗಳ ಮೇಲೆ ನಿಯಂತ್ರಣ ತಪ್ಪುವಷ್ಟು ಕೋಪ ತರಿಸಿಕೊಳ್ಳುವ ಅಗತ್ಯವಿಲ್ಲ. ಅಂತಹ ಕೋಪ ಬಂದಾಗ ಶರೀರದಲ್ಲಿ ಅಡ್ರಿನಾಲಿನ್ ಬಿಡುಗಡೆಯಾಗುತ್ತದೆ. ಗ್ಯಾಸ್ಟ್ರಿಕ್ ಟ್ರಬಲ್, ಅಸಿಡಿಟಿ, ಬಿ.ಪಿ., ಹೃದಯದ ಬಡಿತದ ಏರುವಿಕೆ, ಬೆವರು ಸುರಿದು ನೀರಸ ಉಂಟಾಗುತ್ತದೆ. ಇದು ಸದಾ ನಡೆಯುತ್ತಿದ್ದರೆ ಕ್ರಮೇಣ ಎದೆನೋವಿಗೆ, ಕಿಡ್ನಿಯ ವೈಫಲ್ಯಕ್ಕೆಡೆ ಮಾಡಿಕೊಡಬಹುದು. ಭಾವೋದ್ವೇಗವನ್ನು ಕಂಟ್ರೋಲ್ ಮಾಡಿಕೊಂಡರೆ ಒಂದು ಕಡೆ ಬಿ.ಪಿ ಬರುತ್ತದೆ. ಅಧಿಕವಾಗಿ ಪ್ರದರ್ಶನ ಮಾಡಿದರೆ ಹಾರ್ಟ್ ಅಟ್ಯಾಕ್ ಬರುತ್ತದೆ. ಮತ್ತೆ ಹೇಗೆ?
ಎಮೋಷನ್ಸ್ ಇರಬೇಕಾದದ್ದೇ! ಆದರೆ ಯಾರ ಮೇಲೆ, ಎಲ್ಲಿಯವರೆಗೆ, ಯಾವ ಸಮಯದಲ್ಲಿ, ಹೇಗೆ ಆ ಎಮೋಷನ್ನನ್ನು ಪ್ರದರ್ಶಿಸಬೇಕೆಂಬುದನ್ನು ತಿಳಿದುಕೊಳ್ಳುವುದೇ ಜ್ಞಾನ. ಗೌತಮಬುದ್ಧನ ನಿರ್ಯಾಣಯೋಗ ಇದಕ್ಕೆ ಸಂಬಂಧಿಸಿದ್ದೇ. ಇದನ್ನೇ ಟ್ಯೂನಿಂಗ್ ಎನ್ನುತ್ತಾರೆ. ಟೇಪ್ರೆಕಾರ್ಡರ್ನಲ್ಲಿ ಪಾಜ್ ಬಟನ್ ಇರುವಂತೆಯೇ, ಪ್ರತಿ ಮನುಷ್ಯನ ತೋರುಬೆರಳಿನ ಕೆಳಗೆ ತನ್ನ ಪ್ರವರ್ತನೆಯನ್ನು ಕಂಟ್ರೋಲ್ ಮಾಡಬಲ್ಲ ಒಂದು ಬಟನ್ ಇಟ್ಟುಕೊಳ್ಳಬೇಕು. ಆವೇಶ ಬಂದಾಗ ಆ ಬಟನ್ನ್ನು ಒತ್ತಿ ಒಂದು ಕ್ಷಣದ ನಂತರ ರಿಲೀಜ್ ಮಾಡಬೇಕು. ಅವೇಶ ನಿವರ್ೀರ್ಯ ಆಗಲು ಆ ಒಂದು ಕ್ಷಣ ಸಾಕು! ಅದೇ ಟ್ಯೂನಿಂಗ್ ಎಂದರೆ...!
ಐದು ಪ್ರಶ್ನೆಗಳನ್ನು ಹಾಕಿಕೊಂಡರೆ ಇಂತಹ ಭಾವೋದ್ವೇಗ ನಿಯಂತ್ರಣ ಸಾಧ್ಯ.
? ನನಗೇಕೆ ಈ ಕೋಪ?
? ನನ್ನದು ಕೋಪವೇ? ನಿಸ್ಸಹಾಯಕತೆಯೇ?
ನನಗೆ ಈ ನಡುವೆ ಸದಾ ಇಂತಹ ಸ್ಥಿತಿ ಉಂಟಾಗುತ್ತಿದೆಯಾ?
?ಹೀಗಲ್ಲದೇ ನಾನು ಇನ್ನೊಂದು ರೀತಿಯಲ್ಲಿ ಪ್ರತಿಸ್ಪಂದಿಸುವ ಅವಕಾಶವಿದೆಯೇ?
? ನಾನೀಗ ಅನುಸರಿಸುತ್ತಿರುವ ವಿಧಾನವನ್ನು ನಾಳೆ ನನ್ನ ಅಂತರಾತ್ಮ ಒಪ್ಪಿಕೊಳ್ಳುತ್ತದೆಯೇ?
ಈ ಐದು ಸೂತ್ರಗಳನ್ನು ಆಚರಣೆಗೆ ತನ್ನಿ. ಕ್ರಮೇಣ ನಿಮ್ಮ ವರ್ತನೆಯಲ್ಲಿ ಆಗುವ ಅದ್ಭುತ ಬದಲಾವಣೆ ನಿಮಗೇ ತಿಳಿಯುತ್ತದೆ.
ಟ್ರಾಫಿಕ್ನಲ್ಲಿ ರೆಡ್ಲೈಟ್ ಬೆಳಗುತ್ತಿರುವಾಗ, ನಿಲ್ಲಿಸಿದ್ದ ನಿಮ್ಮ ವಾಹನವನ್ನು ಹೆಚ್ಚುಕಡಿಮೆ ಉಜ್ಜಿಕೊಂಡೇ ಒಬ್ಬ ಝುಮ್ ಎಂದು ನುಗ್ಗಿ ಹೋಗುತ್ತಾನೆ. ಆವೇಶ ತಂದುಕೊಳ್ಳಬೇಡಿ. ಇಷ್ಟು ಅವಸರವಾಗಿ ಹೋಗಿರುವುದರಿಂದ ನಾಲ್ಕು ನಿಮಿಷಗಳನ್ನು ಸೇವ್ ಮಾಡುತ್ತಾನೆ. ಅಷ್ಟೇ ತಾನೇ ಎಂದುಕೊಳ್ಳಿ. ನಿಮಗೆ ಇರಿಟೇಷನ್ ಉಂಟಾಗುವುದಿಲ್ಲ. ನಂತರದ ಜಂಕ್ಷನ್ನಲ್ಲಿ ಎಲ್ಲರಿಗಿಂತ ಕೊನೆಯಲ್ಲಿ ಉಗುರು ಕಚ್ಚುತ್ತಾ ಇರುವ ಅವನು ನಿಮಗೆ ಕಾಣಿಸುತ್ತಾನೆ.
ನೀವೆಂದಾದರೂ ಆಲೋಚಿಸಿದ್ದೀರಾ? ಕೋಪದಿಂದ ಬದಲಾಯಿ ಸಬೇಕೆಂದುಕೊಂಡ ಪ್ರತಿ ಘಟನೆಯನ್ನೂ ಪ್ರೀತಿಯಿಂದ ಕೂಡ ಮತ್ತಷ್ಟು ಚೆನ್ನಾಗಿ ಬದಲಾಯಿಸಬಹುದು. ಗೌತಮಬುದ್ಧ ಕೋಪ ದಿಂದ ನಿನ್ನ ಬಾಯಿಯಿಂದ ಬರುವ ಪ್ರತಿ ಮಾತೂ ನಿನ್ನ ಕೈಯಲ್ಲಿನ ಕೆಂಡದ ಚೂರಿಯಿದ್ದಂತೆ. ಅದನ್ನು ಇತರರ ಮೇಲೆ ಬಿಸಾಡಬೇಕೆಂದು ಕೊಂಡಿದ್ದೀ. ಅದು ಅವರನ್ನು ಸುಡುವುದಿಲ್ಲ. ನಿನ್ನಿಂದ ಅವರನ್ನು ದೂರವಾಗಿ ಓಡಿಹೋಗುವಂತೆ ಮಾಡುತ್ತದೆ. ಈ ನಡುವೆ ನಿನ್ನ ಕೈ ಮಾತ್ರ ತಪ್ಪದೇ ಸುಟ್ಟುಹೋಗುತ್ತದೆ ಎನ್ನುತ್ತಾನೆ.
ಇತರರನ್ನು ನಾವು ಅಪಾರ್ಥ ಮಾಡಿಕೊಂಡರೆ ಅವರ ಮೇಲೆ ನಮಗೆ ಬರುವುದು ಕೋಪ. ನಮ್ಮನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಉಂಟಾಗುವುದು ದು:ಖ. ಕೋಪವೂ, ದು:ಖವೂ ಮಾನಸಿಕ ರೋಗಗಳು. ಅತಿಯಾದ ಕೋಪ ಬರುವವರು, ಕೋಪದಲ್ಲಿ ಮೈ ಮರೆಯುವಂತಹ ಆವೇಶ ಹೊಂದುತ್ತೇವೆಂದು ದು:ಖಿಸುವವರು, ತಿಂಗಳಿಗೊಮ್ಮೆ ಕ್ಯಾನ್ಸರ್ ರೋಗಿಗಳಿಗೆ ಹಣ್ಣುಗಳನ್ನು ಹಂಚಬೇಕು. ಇದು ಮನಸ್ತತ್ವದ ಮೇಲೆ ಅದ್ಭುತ ಕೆಲಸ ಮಾಡುತ್ತದೆ. ನಮ್ಮ ಫ್ರಸ್ಟ್ರೇಷನ್ಗಳು ಎಷ್ಟು ಚಿಕ್ಕವೋ ತಿಳಿದುಕೊಳ್ಳಬೇಕೆಂದರೆ ನಿಜವಾದ ಕಷ್ಟಗಳನ್ನು ಸ್ವತ: ನೋಡುವುದೇ ಒಳ್ಳೆಯ ಔಷಧ.
ಮೂರ್ಖರ ಮೇಲಿನ ಕೋಪ ಕೊಚ್ಚೆಯಲ್ಲಿ ಹಂದಿಗಳೊಂದಿಗೆ ಮಲ್ಲಯುದ್ಧ ಮಾಡುವಂತಹದ್ದು. ಇತರರ ಮೇಲಿನ ಕೋಪ ಅವರನ್ನು ನಮ್ಮಿಂದ ದೂರ ಮಾಡುತ್ತದೆ. ನಮ್ಮ ಮೇಲಿನ ನಮ್ಮ ಕೋಪ ನಮ್ಮನ್ನು ನಮ್ಮಿಂದ ದೂರ ಮಾಡುತ್ತದೆ. ಕೋಪ ಒಂದು ಬಲಹೀನತೆ. ಅದನ್ನು ಜಯಿಸಿದರೆ ಆನಂದ. ಇಲ್ಲದಿದ್ದರೆ ವಿಷಾದ. ಕೋಪ ತಗ್ಗಿಸಿಕೊಳ್ಳಲು ಒಂದು ಚಿಕ್ಕ ಕಿವಿಮಾತು:
ನಿಮ್ಮ ತಪ್ಪೇನೂ ಇಲ್ಲದಿದ್ದರೂ ಇತರರು ನಿಮ್ಮನ್ನು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾಗ ಮತ್ತೆ ಬೈಯದೇ ಮನಸ್ಸು ಹಾಳು ಮಾಡಿಕೊಳ್ಳದೇ ಅವರ ದೇಹದ ಕಡೆ ಕಣ್ಣು ಮಿಟುಕಿಸದೇ ನೋಡುತ್ತಾ, ಅವರ ಬೆನ್ನನ್ನು ಬೆತ್ತಲೆಯಾಗಿ ಊಹಿಸಿಕೊಳ್ಳುತ್ತಾ, ಏಕೆ ಅಷ್ಟು ಆವೇಶ ಪಡುತ್ತಿದ್ದೀ? ಹೋಗುತ್ತಿಯೋ! ಕಿಡ್ನಿಗಳು ಹೇಗೆ ಹಾಳಾಗುತ್ತವೋ ಹಿಂದಕ್ಕೆ ತಿರುಗಿ ಒಮ್ಮೆ ನೋಡಿಕೋ ಎಂದು ಎಂದುಕೊಳ್ಳುತ್ತಾ ಇರಿ. ಅವರು ಬೈಯುತ್ತಲೇ ಇರುತ್ತಾರೆ. ನಿಮಗೆ ನಗು ಬರುತ್ತಲೇ ಇರುತ್ತದೆ. ಕನಿಷ್ಠಪಕ್ಷ ಬಿ.ಪಿ. ಬರುವುದಿಲ್ಲ.

ಕೋಪ ನಿರ್ಮೂಲನೆಗೆ ಮತ್ತಷ್ಟು ಸೂತ್ರಗಳು
? ಕಾರಣವಿಲ್ಲದೇ ನನಗೆ ಕೋಪ ಬರುವುದಿಲ್ಲ ಎನ್ನುತ್ತಾರೆ ಬಹಳ ಜನ. ಆದರೆ ಆ ಕೋಪದ ಕಾರಣವೇ ಅಕಾರಣ. ಕಾರಣವಿರಲಿ, ಇಲ್ಲದಿರಲಿ ಕೋಪ ಕೋಪವೇ ಅಲ್ಲವಾ?
? ಕೋಪಕ್ಕೆ ಔಷಧ ಮೌನ. ಶತ್ರು ಕಿರುನಗೆ. ಆತ್ಮಬಂಧು ದು:ಖ.
? ಗಂಡಸರ ಕೋಪಕ್ಕೆ ಔಟ್ಲೆಟ್ ಸ್ತ್ರೀಯರು, ಕಿರಿಕಿರಿ ಆದರೆ, ಸ್ತ್ರೀಯರ ಸಿಟ್ಟಿಗೆ ದ್ವಾರಗಳು ಮಕ್ಕಳು, ಕಣ್ಣೀರು.
? ನೀವು ಕೋಪಿಷ್ಟರಾದರೆ ಬೆಳಗ್ಗೆ ಸ್ವಲ್ಪಹೊತ್ತು ಪ್ರಾರ್ಥನೆ ಮಾಡಿ.
? ಬೆಳಗ್ಗೆ ಎದ್ದೊಡನೆ ಐದು ಸೆಕೆಂಡುಗಳ ಕಾಲ ಕಿರುನಗೆಯೊಂದಿಗೆ ಕನ್ನಡಿಯಲ್ಲಿ ನೋಡಿಕೊಂಡರೆ ಕೋಪ ಕಡಿಮೆಯಾಗುತ್ತದೆ. ಕಿರುನಗೆಯಿಂದ ಮೆದುಳಿನಲ್ಲಿ ಬಿಡುಗಡೆಯಾಗುವ ಸೆರಟೋನಿನ್ ದಿನವೆಲ್ಲಾ ಆಹ್ಲಾದವಾಗಿರುವಂತೆ ನೋಡಿಕೊಳ್ಳುತ್ತದೆ.
? ಭಾವಗಳಿಗೆ ನೀವೇ ಹೊಣೆ. ನಿನ್ನಿಂದ ನನ್ನ ಮೂಡೇ ಹಾಳಾಯಿತು ಎನ್ನಬೇಡಿ. ಈ ದಿನ ನನ್ನ ಮೂಡ್ ಚೆನ್ನಾಗಿಲ್ಲ ಎಂದು ಹೇಳಿ.
? ಕುಟುಂಬ ಸದಸ್ಯರೊಂದಿಗೆ ಇಷ್ಟದೊಂದಿಗೆ ಕಳೆಯಿರಿ.
? ನಿಮ್ಮನ್ನು ಸದಾ ಟೀಕಿಸುವವರಿಂದ, ನಿಮಗೆ ಕೋಪ ತರಿಸುವವರಿಂದ ದೂರವಾಗಿರಿ.
? ಕೋಪ ಬಂದೊಡನೆ ಮುಷ್ಟಿ ಬಿಗಿದು, ಶ್ವಾಸಕೋಶದ ತುಂಬಾ ಗಾಳಿ ಎಳೆದುಕೊಂಡು, ಒಂದು ಕ್ಷಣದ ನಂತರ ಅದನ್ನು ಹೊರಗೆ ಬಿಡಿ.
? ಎಡಗೈ ಅಂಗೈಯಿಂದ ಬಲಗೈ ಅಂಗೈಯನ್ನು ಬಲವಾಗಿ, ವೇಗವಾಗಿ ಹೊಡೆದುಕೊಳ್ಳುತ್ತಿದ್ದರೆ ಕ್ರಮೇಣ ಕೋಪ ಕಡಿಮೆಯಾಗುತ್ತದೆ.
ಆರಂಭದಲ್ಲಿ ಇದು ಬಹಳ ಕಷ್ಟದಂತೆ ಕಂಡುಬರುತ್ತದೆ. ಆದರೆ ಸ್ವಲ್ಪ ಸಾಧನೆ ಮಾಡಿದರೆ ಅಭ್ಯಾಸವಾಗುತ್ತದೆ. ಇದು ನಾನು ಅನುಭವದೊಂದಿಗೆ ಹೇಳುತ್ತಿರುವ ಮಾತು. ಕೋಪದಲ್ಲಿ ಜವಾಬು ಕೊಡದೇ ಇರಬಲ್ಲವರಾಗು ವುದು, ಸಂತೋಷದಲ್ಲಿ ವಾಗ್ದಾನ ಮಾಡದೇ ನಿಭಾಯಿಸಿಕೊಳ್ಳಬಲ್ಲವರಾ ಗುವುದು, ಒತ್ತಡದಲ್ಲಿ ನಿರ್ಧಾರ ತೆಗೆದುಕೊಳ್ಳದೇ ಇರಬಲ್ಲವ ರಾಗುವುದು, ಆವೇಶದಲ್ಲಿ ಸುಳ್ಳು ಹೇಳದಿರುವುದು - ಉದ್ವೇಗ ಬದ್ಧತೆ.
ದೇವರುಗಳು ಕೂಡ ಕೋಪಕ್ಕೆ ಅತೀತರಲ್ಲ. ಶಿವ ಆಗ್ರಹಗೊಂಡರೆ ಎದುರಿಗೆ ಇರುವವರು ಎಂತಹವರಾದರೂ ಶಾಪ ತಪ್ಪದು. ಮಹಾವಿಷ್ಣು ಕೂಡ ಭಾವಾವೇಶಕ್ಕೆ ಒಳಗಾಗಿ ಮೊಸಳೆಯಿಂದ ಆನೆಯನ್ನು ಕಾಪಾಡುವ ಅವಸರದಲ್ಲಿ, ಲಕ್ಷ್ಮೀದೇವಿಯ ಸೆರಗಿನ ತುದಿಯನ್ನು ಬಿಡುವುದನ್ನು ಕೂಡ ಮರೆತುಬಿಟ್ಟ.
ಚಿಕ್ಕ ಚಿಕ್ಕ ಕಾರಣಗಳಿಗೆ ನಿಮಗೆ ಸದಾ ಕೋಪ ಬರುವುದೆಂದರೆ ಅದಕ್ಕೆ ಕಾರಣ ಎದುರಿಗಿರುವ ಮನುಷ್ಯನಾಗಲೀ, ಸಂದರ್ಭವಾಗಲೀ ಆಗಿರಲಿಕ್ಕಿಲ್ಲ. ಆರ್ಥಿಕ ಸಂಕಷ್ಟವೋ, ಇಲ್ಲವೇ ಹತ್ತಿರದವರೊಂದಿಗಿನ ಬಾಂಧವ್ಯದ ಹಾಳಾಗುವಿಕೆಯೋ ಆಗಿರಬಹುದು. ಕೋಪ ಒಂದು ಜ್ವರವಾದರೆ ಅದಕ್ಕೆ ಮದ್ದು ಕೂಡ ಇದೆ. ಇದೇ ಫೀವರ್ ಆಂಡ್ ಟ್ಯಾಬ್ಲೆಟ್ ಕಾನ್ಸೆಪ್ಟ್. ಈ ತಂತ್ರವನ್ನು ಅವಲಂಬಿಸಿದರೆ ಕೋಪ ಅರ್ಧಕ್ಕರ್ಧ ಕಡಿಮೆಯಾಗುತ್ತದೆ. ?
(ಮುಂದುವರಿಯುವುದು)



ಯಂಡಮೂರಿ ವೀರೇಂದ್ರನಾಥ್
ಕನ್ನಡಕ್ಕೆ:
ಯತಿರಾಜ್ ವೀರಾಂಬುಧಿ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com