
ಕೆಫಿನ್ ಕಥೆ ಸುಲಭದಲ್ಲಿ ಮುಗಿಯುವಂಥದ್ದಲ್ಲ. ಕೆಫಿನ್ ಜಾಸ್ತಿ ಆದರೂ ಕಷ್ಟ, ಕಡಿಮೆ ಸೇವಿಸಿದರೂ ಕಷ್ಟ ಎಂಬುದನ್ನು ಅರಿತಿದ್ದೀರಿ ಅಲ್ಲವೆ? ಕೆಫಿನ್ ಕೊರತೆಯಿಂದ ಬರುವ ತಲೆನೋವು ಹಲವು ತರಹದ್ದು. ಕೆಲವರಿಗೆ ಬೆಳ್ಳಂಬೆಳಗ್ಗೆ ಹಾಸಿಗೆ ಬಿಟ್ಟು ಏಳುತ್ತಿದ್ದಂತೆ ತಲೆನೋವು ವಕ್ಕರಿಸಿಕೊಳ್ಳುತ್ತದೆ. ಸಹಿಸಲು ಅಸಾಧ್ಯ ನೋವು. ಒಂಥರಾ ಆಲಸ್ಯ. ಅದು ಕೆಫಿನ್ ಕೊರತೆಯಿಂದಲೇ ಆಗಿರಲಿಕ್ಕೆ ಸಾಕು. ಏನಾಗುತ್ತದೆ ಅಂದರೆ ರಾತ್ರಿ ಹೊತ್ತಲ್ಲಿ ಕಾಫಿ/ಚಹಾ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ ಹಿಂದಿನ ರಾತ್ರಿ ಕಾಫಿ, ಚಹಾ ಸೇವಿಸಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಬೆಳಗ್ಗೆ ಏಳುತ್ತಿದ್ದಂತೆ ತಲೆನೋವು ಶುರುವಾಗುತ್ತದೆ. ಪರಿಹಾರ ಎಂದರೆ ಕಾಫಿ, ಚಹಾ ಕುಡಿಯುವುದು. ಇನ್ನು ಕೆಲವರಿಗೆ ವಾರಾಂತ್ಯದಲ್ಲಿ ತಲೆನೋವು ಬಾಧೆ. ಶನಿವಾರ, ಭಾನುವಾರಗಳಂದೇ ದಿಢೀರ್ ತಲೆನೋವು ಆರಂಭವಾಗುತ್ತದೆ. ಗಮನಿಸಿ ನೋಡಿ, ಬೇರೆ ದಿನ ಏನೂ ತೊಂದರೆ ಇರುವುದಿಲ್ಲ. ಆದರೆ ವಾರಾಂತ್ಯದಲ್ಲೇ ನೀವು ಏನೋ ಮಹತ್ವದ ಕಾರ್ಯಕ್ರಮ ಹಾಕಿಕೊಂಡಿರುವಾಗಲೇ ತಲೆನೋವು ಶುರುವಾಗುತ್ತದೆ. ಅದಕ್ಕೆ ಕೆಫಿನ್ ಕೊರತೆ ಕಾರಣ ಆಗಿರಲಿಕ್ಕೆ ಸಾಕು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಕೆಲಸದ ದಿನಗಳಲ್ಲಿ ನಿಯಮಿತವಾಗಿ ಕಾಫಿ, ಚಹಾ ಕುಡಿಯುತ್ತಿರುತ್ತೀರಿ. ಕೊನೆಪಕ್ಷ ಐದು ನಿಮಿಷ ಬಿಡುವು ಪಡೆಯಲಾದರೂ ಎದ್ದುಹೋಗಿ ಕಾಫಿ, ಚಹಾ ಹೀರುತ್ತೀರಿ ತಾನೆ? ಆದರೆ ಮನೆಯಲ್ಲಿ ಇದ್ದಾಗ ಅಷ್ಟೊಂದು ಸಲ ಕುಡಿಯುವುದಿಲ್ಲ. ನಿಜ ತಾನೆ? ಆದರೆ ನಮ್ಮ ಶರೀರ ನಿರ್ದಿಷ್ಟ ವೇಳೆ, ಪ್ರಮಾಣದ ಕೆಫಿನ್‌ಗೆ ಒಗ್ಗಿಕೊಂಡಿರುತ್ತದೆ. ಆ ಸಮಯದಲ್ಲಿ ಅಥವಾ ದಿನದಲ್ಲಿ ಅಷ್ಟು ಪ್ರಮಾಣದ ಕೆಫಿನ್ ಸಿಗದೇಹೋದಾಗ ತಲೆನೋವು ಆರಂಭವಾಗುತ್ತದೆ.
ಏನೇ ಆದರೂ ಕೆಫಿನ್‌ನ ಅತಿಯಾದ ಸೇವನೆ ಒಳ್ಳೆಯದಲ್ಲ ಎನ್ನುವುದು ಒಪ್ಪತಕ್ಕ ವಿಚಾರ. ನೀವು ಅದಕ್ಕೆ ಎಷ್ಟೇ ದಾಸರಾಗಿರಿ, ಈ ಕ್ಷಣವೇ ಅದರಿಂದ ಮುಕ್ತಿಹೊಂದುವ ಸಂಕಲ್ಪ ಮಾಡುವುದು ಒಳ್ಳೆಯದು. ಅದರ ಅರ್ಥ ಕಾಫಿ, ಚಹಾ ಸೇವನೆಯನ್ನು ಪರಿಪೂರ್ಣವಾಗಿ ವರ್ಜಿಸಬೇಕು ಅಂತಲ್ಲ. ದಿನಕ್ಕೆ ಹತ್ತು ಸಲ ಕುಡಿಯುತ್ತಿದ್ದವರು ಐದಕ್ಕೆ ನಿಯಂತ್ರಿಸಿ. ಅದು ಏಕಾಏಕಿ ಒಂದೇ ದಿನ, ವಾರದಲ್ಲಿ ಆಗುವಂತಹದ್ದೂ ಅಲ್ಲ. ನಿಧಾನವಾಗಿ ಪ್ರಮಾಣ ಕಡಿಮೆ ಮಾಡುತ್ತ ಬನ್ನಿ. ಇಡೀ ಕಪ್ ಕುಡಿಯುತ್ತಿದ್ದವರು ಮುಕ್ಕಾಲು, ಅರ್ಧ, ಕಾಲು... ಹೀಗೆ ಕಡಿಮೆ ಮಾಡುತ್ತ ಕೊನೆಗೆ ನಿಮಗೆ ಎಷ್ಟು ಸಾಕು ಅನ್ನಿಸುತ್ತದೆಯೋ ಅಷ್ಟಕ್ಕೆ ನಿಲ್ಲಿಸಿ. ಒಮ್ಮೆಲೇ ಕೆಫಿನ್ ಕಡಿಮೆ ಮಾಡಲು ಯತ್ನಿಸಿದರೆ ಶರೀರ ಅದಕ್ಕೆ ಪ್ರತಿರೋಧ ತೋರಿಸಬಹುದು, ತಲೆನೋವು ಮತ್ತಿತರ ತೊಂದರೆಗಳು ಜಾಸ್ತಿಯೇ ಆಗಬಹುದು. ಆದ್ದರಿಂದ ಹಂತಹಂತವಾಗಿ ಕೆಫಿನ್ ಸೇವನೆ ಕಡಿಮೆ ಮಾಡಲು ಪ್ರಯತ್ನಿಸಿ.ಟಿ
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Advertisement