
ರಜನಿಕಾಂತ್ ಸಿಗರೇಟು ಸೇದುವ ಸ್ಟೈಲ್ ನೋಡಿ ಫಿದಾ ಆಗಿ ಧಮ್ಮಿನ ಗೀಳು ಹಚ್ಚಿಕೊಂಡವರು ಎಷ್ಟಿಲ್ಲ? ಯಾರೋ ರಸ್ತೆ ಬದಿ ನಿಂತು ಹೊಗೆ ಬಿಡುತ್ತಿದ್ದರೆ ಅವರಂತೆ ನಾವು ಒಮ್ಮೆ ಟ್ರೈ ಮಾಡಬಾರದೇಕೆ ಎಂಬ ಹುಂಬತನಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಎಂದೂ ಇಳಿಮುಖವಾದಂತಿಲ್ಲ. ಹಿಂದಿನ ಕಾಲದಲ್ಲಿ ಅನೇಕ ಕವಿಗಳು, ಲೇಖಕರು ಸಿಗರೇಟ್ ಹೊತ್ತಿಸಿದವರೇ... ಬೀಚಿ, ಟಿಪಿಕೆ, ಜೆ.ಪಿ. ರಾಜರತ್ನಂ ಹೆಸರುಗಳು ಸುಳಿದಂತೆ ಹೊಗೆ ಬತ್ತಿ ಹಿಡಿದ ಚಿತ್ರಣ ಗೋಚರಿಸುತ್ತದೆ. ನಾನೂ ಅವರಂತೆ ಆಗಬೇಕು ಎಂಬ ಬದಲಿಗೆ ನಾನೂ ಅವರಂತೆ ಕಾಣಬೇಕು ಎಂದು ಸಿಗರೇಟು ದಾಸರಾಗುವುದು ಇಂದಿನ ಸ್ಥಿತಿ.
ಆದರೆ ಒಮ್ಮೆ ತುಟಿಗೆ ಸಿಗರೇಟು ಸಿಕ್ಕಿಸಿದಿರೋ ಬಯಸಿದರೂ ಹಿಂದಿರುಗದ ಕೂಪದೊಳಗೆ ಪ್ರವೇಶಿಸುತ್ತಿದ್ದೀರಿ ಎಂದೇ ಅರ್ಥ. ಆ ಕೂಪ ಪ್ರವೇಶಿಸಿದ ಹೆಚ್ಚಿನವರು ಇನ್ನೂ ಹೊರಬಂದಿಲ್ಲ! ಏಕೆ ಕೆಲವರಿಗೆ ಧೂಮಪಾನ ಬಿಡಲು ಸಾಧ್ಯವೇ ಆಗುವುದಿಲ್ಲ? ಅಮೆರಿಕದ ಸಂಶೋಧಕರು ಹೇಳುವಂತೆ ಧೂಮಪಾನಿಗಳು ಎಷ್ಟರಮಟ್ಟಿಗೆ ವ್ಯಸನಿಗಳಾಗಿರುತ್ತಾರೆ ಎಂದರೆ ಅವರಿಗೆ ದುಡ್ಡು ಕೊಡುತ್ತೀವಿ ಎಂದರೂ ಬಿಟ್ಟು ಬಿಡಲು ಸಿದ್ಧರಿಲ್ಲ!
ಸಂಶೋಧನೆಗೆ ಒಳಪಡಿಸಿದ ಧೂಮಪಾನಿಗಳ ಮೆದುಳಿನ ಚಟುವಟಿಕೆಯನ್ನು ಎಮ್‌ಆರ್‌ಐ ಸ್ಕಾನ್ ಮೂಲಕ ಪರೀಕ್ಷಿಸಿದ್ದಾರೆ. ಸುಮಾರು 44 ಧೂಮಪಾನಿಗಳ ಮೇಲೆ ಅಧ್ಯಯನ ನಡೆಸಿದ್ದರು. ಇವರಲ್ಲಿ ಧೂಮಪಾನಿಗಳಲ್ಲದವರೂ ಸೇರಿದ್ದರು. 18ರಿಂದ 45 ವಯಸ್ಸಿನ ಅವರು ಕಳೆದ 12 ತಿಂಗಳಿಂದ ದಿನಕ್ಕೆ 10 ಸಿಗರೇಟು ಸುಟ್ಟಿದ್ದಾರೆ. ಅಷ್ಟೂ ಜನರಿಗೆ ನಿಕೋಟಿನ್ ಅಂಶವುಳ್ಳ ಯಾವ ವಸ್ತುವನ್ನೂ 12 ಗಂಟೆ ಕಾಲ ಸೇವಿಸಕೂಡದು ಎಂದು ಸೂಚಿಸಿದ್ದರು. ಆ ಸಂದರ್ಭ ಕಾರ್ಡ್ ಗೆಸ್ಸಿಂಗ್ ಆಟ ಆಡಿಸಲಾಯಿತು. ಕಾಲಾವಕಾಶ ಮುಗಿದರೂ ಇನ್ನೂ ಎರಡು ಗಂಟೆ ಬೇಕಿತ್ತು ಎಂದವರೇ ಹೆಚ್ಚು. ಅವರಲ್ಲಿ ಅರ್ಧ ಜನರು ತಾವು ಮಿಸ್ಟೇಕ್ ಮಾಡುತ್ತಿರುವುದಾಗಿ ಹೇಳಿದರು. ಈ ಸಂದರ್ಭ ಸಿಗರೇಟು ಸಿಗುತ್ತಿದ್ದರೆ ಗೇಮ್ ಚೆನ್ನಾಗಿ ಆಡುತ್ತಿದ್ದೆವು ಎಂದರು. ಆಟದ ನಂತರ ಸಿಗರೇಟ್ ಸೇವನೆಗೆ ಅವಕಾಶ ನೀಡಲಾಯಿತು. ಈ ಸಂದರ್ಭ ಗೆಸ್ಸಿಂಗ್ ಗೇಮ್ ಆಡಿಸಿದ್ದರೆ ಹೆಚ್ಚು ಸಂಪಾದಿಸುತ್ತಿದ್ದೆವು ಎಂದರು. ಅಂದರೆ ಸಿಗರೇಟು ಸೇವನೆ ಆಕಾಂಕ್ಷೆ ಹೆಚ್ಚಿಸಿತ್ತು. ಮತ್ತೊಂದು ಅವಕಾಶಕ್ಕಾಗಿ ಸಿಗರೇಟನ್ನು ಕೈಗೆತ್ತಿಕೊಳ್ಳುತ್ತಾರೆ. ಧೂಮಪಾನ ಮನುಷ್ಯ ಬಯಸುವ ಅವಕಾಶಗಳೊಂದಿಗೆ ಪ್ಯಾರಲಲ್ ಆಗಿ ಸಂಚರಿಸುತ್ತದೆ.
ಅಮಿತ ಅತ್ರೇಶ್ ಹೆಜ್ಜಾಜಿ
Advertisement