ನನ್ನ ಸರ್ಕಾರ

ನಮ್ಮೆಲ್ಲರ ಆಲೋಚನೆಯ ಸರ್ಕಾರ! ಇಂತಹದೊಂದು ಚಿಂತನಾ ಲಹರಿ ಇರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ mygov.nic.in ವೆಬ್‌ಗೆ ಚಾಲನೆ ನೀಡಿದ್ದಾರೆ...
ನನ್ನ ಸರ್ಕಾರ
Updated on

ನಮ್ಮೆಲ್ಲರ ಆಲೋಚನೆಯ ಸರ್ಕಾರ!
ಇಂತಹದೊಂದು ಚಿಂತನಾ ಲಹರಿ ಇರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಮೈಗವ್.ನಿಕ್.ಇನ್ ವೆಬ್‌ಗೆ ಚಾಲನೆ ನೀಡಿದ್ದಾರೆ. ಇದರ ಕುರಿತು ಈಗಾಗಲೇ ಸಾಕಷ್ಟು ಪತ್ರಿಕೆಗಳಲ್ಲಿ ಹತ್ತಾರು ಸುದ್ದಿ ಓದಿರುತ್ತೀರಿ. ಆದರೆ ಸುದ್ದಿ ಓದಿ ಸುಮ್ಮನೆ ಕುಳಿತರೆ ಮುಗಿಯದು, ಇದನ್ನು ಅರ್ಥಪೂರ್ಣಗೊಳಿಸುವಲ್ಲಿ ನಿಮ್ಮದೂ ಪಾಲಿದೆ.
ಮೊದಲ ಬಾರಿಗೆ ಪ್ರಜೆಗಳನ್ನು ಕೇಳಿ ಪ್ರಭುತ್ವ ಕಟ್ಟುವ ಕಲ್ಪನೆಯೊಂದಕ್ಕೆ ವೇದಿಕೆ ಸೃಷ್ಟಿಯಾಗಿದೆ. ನಿಮ್ಮ ಲೋಕಸಭಾ ಕ್ಷೇತ್ರ, ರಾಜ್ಯ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬನೂ ತನ್ನ ಸಲಹೆ ಕೊಡಬಹುದಾಗಿದೆ. ಈ ಮೂಲಕ ಇದು ನಮ್ಮೆಲ್ಲರ ಸರ್ಕಾರ ಎಂದು ಎದೆತಟ್ಟಿ ಹೇಳಿಕೊಳ್ಳಬಹುದು. ಇದರ ಜತೆಗೆ ಒಂದೊಮ್ಮೆ ನೀವು ನೀಡಿರುವ ಐಡಿಯಾ ಮೋದಿ ಗಮನಕ್ಕೆ ಬಂದರೆ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ನಿಮ್ಮ ಕನಸುಗಳನ್ನು ಕಾಣಬಹುದು. ದೇಶ ಕಟ್ಟಲು ನಾನು ಕೊಟ್ಟಿರುವ ಐಡಿಯಾ ಕಾರ್ಯಗತವಾಗಿದೆ ಎಂದು ಕೊಚ್ಚಿಕೊಳ್ಳಬಹುದು.
ನಾನು ಪ್ರಧಾನಿಯಾದರೆ ದೇಶವನ್ನು ಹೀಗೆ ಮಾಡುತ್ತೇನೆ, ಹಾಗೆ ಮಾಡುತ್ತೇನೆ ಎಂದು ಹರಟೆ ಕಟ್ಟೆಯಲ್ಲಿ ಮಾತಾಡುವವರಿರುತ್ತಾರೆ. ಇನ್ನು ಕೆಲವರು ಒಳ್ಳೆಯ ಆಲೋಚನೆ ಹೊಂದಿರುತ್ತಾರೆ, ಆದರೆ ಅದನ್ನು ಆಡಳಿತ ವ್ಯವಸ್ಥೆಗೆ ತಿಳಿಸುವ ಮಾರ್ಗ ಗೊತ್ತಿರುವುದಿಲ್ಲ. ಇಂಥವರ ನೆರವಿಗೂ ವೆಬ್‌ಜೀವಿಗಳು ಬರಬಹುದು. ಈ ಮೂಲಕ ಹಳ್ಳಿಯ ಮೂಲೆಯಲ್ಲಿನ ಯೆಂಕ ತಿಮ್ಮನ ಐಡಿಯಾಗಳನ್ನು ಈ ವೆಬ್‌ತಾಣದ ಮೂಲಕ ದೆಹಲಿಯಲ್ಲಿ ಕುಳಿತವರಿಗೆ ತಲುಪಿಸಬಹುದು. ಇದು ಯಶಸ್ವಿಯಾದರೆ ಪ್ರಜೆಗಳ ಪ್ರಭುತ್ವ ಎನ್ನುವುದಕ್ಕೆ ನೈಜಾರ್ಥ ಸಿಗುತ್ತದೆ.
ಇದಕ್ಕಾಗಿ ಮೈಗವ್.ನಿಕ್.ಇನ್‌ಗೆ (http://mygov.nic.in) ಹೋಗಿ ಸೈನ್ ಅಪ್ ಆಗಬೇಕು. ಅಲ್ಲಿ ನಿಮ್ಮ ಹೆಸರು, ಮಿಂಚಂಚೆ, ಮೊಬೈಲ್ ಸಂಖ್ಯೆ ನಮೂದಿಸಬೇಕು. ಸೈನ್ ಅಪ್ ಆದ ಬಳಿಕ ಅದೇ ಪುಟ ಬಳಸಿ ಸೈನ್ ಇನ್ ಆಗಬಹುದು. ಈ ಸಂದರ್ಭ ನಿಮಗೆ ಮೂರು ಆಯ್ಕೆಗಳಿರುವ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಇಷ್ಟಪಡುವ ಅಥವಾ ಪ್ರಾವೀಣ್ಯ ಸಾಧಿಸಿರುವ ಕ್ಷೇತ್ರವನ್ನು ನಮೂದಿಸಬೇಕು. ಇದಾದ ಬಳಿಕ ಮೋದಿ ಕನಸಿನ ಯೋಜನೆಗಳಲ್ಲಿ ಯಾವುದು ಅತಿ ಮುಖ್ಯ ಎಂದು ನಿಮಗೆ ಎನಿಸುತ್ತದೆ ಎಂಬುದನ್ನು ಕ್ಲಿಕ್ಕಿಸಬೇಕು.
ಇದಾದ ಬಳಿಕ ಅತಿ ಪ್ರಮುಖ ಹಾಗೂ ವೆಬ್‌ತಾಣದ ಉದ್ದೇಶವಿರುವ ಆಯ್ಕೆ ಸಿಗುತ್ತದೆ. ಅಲ್ಲಿ 'ಮೈ ಗ್ರೂಪ್‌' ಎಂಬ ಆಪ್ಶನ್ ಇರುತ್ತದೆ. ಸುಮಾರು 8 ಗ್ರೂಪ್‌ಗಳು ನಿಮಗೆ ಅಲ್ಲಿ ದೊರೆಯುತ್ತದೆ. ಇದರಲ್ಲಿ ನಿಮ್ಮ ಲೋಕಸಭಾ ಕ್ಷೇತ್ರದ ಗ್ರೂಪ್ ಒಂದು ಕಡ್ಡಾಯ. ಉಳಿದಿರುವ ಗ್ರೂಪ್‌ಗಳು ಡಿಜಿಟಲ್ ಇಂಡಿಯಾ, ಗರ್ಲ್ ಚೈಲ್ಡ್ ಎಜುಕೇಶನ್, ಜಾಬ್ ಕ್ರಿಯೇಶನ್, ಸ್ವಚ್ಛ ಭಾರತ್, ಕ್ಲೀನ್ ಗಂಗಾ, ಗ್ರೀನ್ ಇಂಡಿಯಾ, ಸ್ಕಿಲ್ ಡೆವಲಪ್ಮೆಂಟ್‌ಗಳಾಗಿವೆ.
ಪ್ರತಿ ಗ್ರೂಪ್‌ನಲ್ಲಿಯೂ ಡಿಸ್ಕಷನ್, ಟಾಸ್ಕ್ ಹಾಗೂ ಮೆಂಬರ್‌ಗಳ 3 ಪೋರ್ಟಲ್ ಇರುತ್ತದೆ. ಆ ಗ್ರೂಪ್‌ನಲ್ಲಿ ಆಗುತ್ತಿರುವ ಡಿಸ್ಕಷನ್ ನೋಡಬೇಕಿದ್ದರೆ ವ್ಯೂ ಡಿಸ್ಕಷನ್‌ಗೆ ಹೋಗಬೇಕು. ಆದರೆ ಪ್ರಜ್ಞಾವಂತ ನಾಗರಿಕರಿಗೆ ಅಲ್ಲಿ ಅಗತ್ಯವಾಗಿರುವುದು ಟಾಸ್ಕ್‌ಗಳು. ಪ್ರತಿ ಗ್ರೂಪ್‌ನಲ್ಲಿಯೂ 4ರಿಂದ 7 ಟಾಸ್ಕ್‌ಗಳಿವೆ.
ಉದಾಹರಣೆಗೆ ಡಿಜಿಟಲ್ ಇಂಡಿಯಾ ಗ್ರೂಪ್‌ನಲ್ಲಿ ಪರಿಣಾಮಕಾರಿಯಾಗಿ ಡಿಜಿಟಲ್ ತರಬೇತಿ ನೀಡುವ ಉಪಕರಣದ ಬಗ್ಗೆ ಮಾಹಿತಿ, ರೈತರನ್ನು ಟೆಕ್ನೋಸೇವಿಗಳಾಗಿ ಪರಿವರ್ತಿಸಲು ಇರುವ ಮಾರ್ಗ, ಅಕ್ಕಪಕ್ಕದ ಮನೆಯವರಿಗೆ ಡಿಜಿಟಲ್ ಸೇವೆಗಳ ಕುರಿತಂತೆ ತರಬೇತಿ ನೀಡುವ ಬಗೆ, ಈಗಿರುವ ಆಪ್ಟಿಕಲ್ ಫೈಬರ್ ಜಾಲದ ಮೂಲಕ ಅಂತರ್ಜಾಲ ಸೇವೆಯ ವೇಗವರ್ಧನೆ, ಜನೋಪಯೋಗಕ್ಕಾಗಿ ಜಗತ್ತಿನಾದ್ಯಂತ ಬಳಕೆಯಾಗುತ್ತಿರುವ ಉತ್ತಮ ವ್ಯವಸ್ಥೆ ಕುರಿತ ಮಾಹಿತಿ ಹಾಗೂ ಡಿಜಿಟಲ್ ಇಂಡಿಯಾ ಕಟ್ಟಲು 10 ಹೊಸ ಮಾರ್ಗಗಳು ಈ ಕುರಿತು ಜನರು ತಮ್ಮ ಅಭಿಪ್ರಾಯ ಹೇಳಿಕೊಳ್ಳಬಹುದು.
ಇವೆಲ್ಲ ಟಾಸ್ಕ್‌ಗಳ ಮೇಲೆ ಕ್ಲಿಕ್ ಮಾಡಿ 'ಡೂ' ಎಂಬ ಬಟನ್ ಮೇಲೆ ಕ್ಲಿಕ್ಕಿಸಿ ಸವಾಲು ಸ್ವೀಕರಿಸಬೇಕು. ಆಗ ನಿಮ್ಮಲ್ಲಿರುವ ಐಡಿಯಾಗಳನ್ನು ಹಂಚಿಕೊಳ್ಳಲು ಆಪ್ಶನ್ ತೆರೆದುಕೊಳ್ಳುತ್ತದೆ. ಫೋಟೋ, ವಿಡಿಯೋ ಅಥವಾ ಪಿಡಿಎಫ್ ಫೈಲ್‌ಗಳನ್ನು ಇಲ್ಲಿ ಹಂಚಿಕೊಳ್ಳಲು ಅವಕಾಶವಿದೆ. ಜತೆಗೆ ಅಕ್ಷರಗಳಲ್ಲಿಯೂ ನಿಮ್ಮ ಚಿಂತನೆ ಕಟ್ಟಿಕೊಡಬಹುದು.
ಇವೆಲ್ಲ ವಿಚಾರಗಳನ್ನು ನೀವು ಆ.25ರೊಳಗೆ ನೀಡಬೇಕು. ಇದರರ್ಥ ನಮೋ ಸರ್ಕಾರದ 100 ದಿನದ ಘೋಷಣೆಯಲ್ಲಿ ನಿಮ್ಮ ಚಿಂತನಾ ಲಹರಿ ಕೂಡ ಇರಬಹುದು. ಇದಾದ ಬಳಿಕ ಇದನ್ನು ಈ ಯೋಜನೆಗಳ ಅನುಷ್ಠಾನ ನಿಗಾ ಹಾಗೂ ಸಲಹೆಗಾಗಿ ಉಪಯೋಗಿಸಿಕೊಳ್ಳುತ್ತಾರೆ.

ಆಸ್ಟ್ರೇಲಿಯಾದಲ್ಲೂ ಇದೆ
ಆಸ್ಟ್ರೇಲಿಯಾ ಸರ್ಕಾರ ಕೂಡ ಇಂತಹುದೇ ವೆಬ್‌ತಾಣ ಹೊಂದಿದೆ. ಮೈ.ಗವ್.ಆ(my.gov,au)ನ್ನು ಆಸ್ಟ್ರೇಲಿಯಾ ಸರ್ಕಾರದ ಸೇವೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ತೆರಿಗೆ ಪಾವತಿ ಸೇರಿದಂತೆ ಸರ್ಕಾರದ ಎಲ್ಲ ಸೇವೆಗಳಿಗೆ ಈ ವೆಬ್ ಮೂಲಕವೇ ಅಪ್ಲೈ ಮಾಡಬಹುದು. ಸರ್ಕಾರಕ್ಕೆ ದೂರು ಕೂಡ ಸಲ್ಲಿಸಬಹುದು. ಭಾರತದಲ್ಲಿಯೂ ಇಂತಹುದೇ ಒಂದು ಜಾಲತಾಣವಾಗಿ ಇದು ರೂಪುಗೊಂಡರೆ ನಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಯಾವುದೋ ಪುಡಿ ರಾಜಕಾರಣಿಯ ಮನೆ ಕಾಯುವ ಅಗತ್ಯವಿರುವುದಿಲ್ಲ.

ಸಂಸದರ ನಿಗಾ ಘಟಕ
ನಮ್ಮ ಸಂಸದರು ಏನೂ ಕೆಲಸ ಮಾಡುತ್ತಿಲ್ಲ, ಆದರೂ ಅವರಿಗೆ ಪ್ರತಿ ವರ್ಷ ಟಿಕೆಟ್ ಕೊಡಲಾಗುತ್ತಿದೆ ಎಂಬ ಮಾತುಗಳು ಸಹಜವಾಗಿ ಕೇಳಿಬರುತ್ತವೆ. ಮೈಗವ್.ನಿಕ್.ಇನ್ ವಿನ್ಯಾಸ ಹಾಗೂ ವಿಸ್ತಾರ ಗಮನಿಸಿದರೆ ಭವಿಷ್ಯದಲ್ಲಿ ಇದು ಸರ್ಕಾರದ ಸಾಮಾಜಿಕ ತಾಣವಾಗುವ ಎಲ್ಲ ಸಾಧ್ಯತೆಯಿದೆ. ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ತಾಣಗಳಲ್ಲಿದ್ದಷ್ಟು ಸ್ವಾತಂತ್ರ್ಯ ಅಥವಾ ವೈಯಕ್ತಿಕ ವಿಚಾರಗಳಿಗೆ ಅವಕಾಶ ಸಿಗದಿರಬಹುದು. ಆದರೆ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಜಾಲತಾಣವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. ಸಂಸದರು ಮಾಡಬೇಕಾದ ಕೆಲಸ, ಸಂಸದರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅಂಶಗಳನ್ನು ಆಯಾ ಲೋಕಸಭಾ ಕ್ಷೇತ್ರದ ಗ್ರುಪ್‌ನಲ್ಲಿ ಸೇರಬಹುದು ಎಂಬ ಅಂದಾಜಿದೆ. ಆದರೆ ಜನರ ಪ್ರತಿಕ್ರಿಯೆ ನೋಡಿಕೊಂಡು ಸರ್ವರ್ ಸಾಮರ್ಥ್ಯ ಹೆಚ್ಚಿಸಬೇಕಿದೆ. ಭಾರತದ ಜನಸಂಖ್ಯೆಗೆ ಅನುಗುಣವಾಗಿ ಸರ್ವರ್ ಅಷ್ಟು ಉತ್ತಮವಾಗಿದ್ದಂತಿಲ್ಲ. ಇದರ ಪರಿಣಾಮವಾಗಿ ಸೈನ್ ಇನ್ ಹಾಗೂ ಇತರ ಚಟುವಟಿಕೆ ಮಂದವಾಗಿದೆ.

- ರಾಧೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com