
ಜೀವನದಲ್ಲಿ ನಮ್ಮ ವ್ಯವಹಾರ ಬೇಕಾಬಿಟ್ಟಿಯಾಗಿದ್ದರೆ ಆತ್ಮವೂ ಅದೇ ದಿಸೆಯಲ್ಲಿ ಸಾಗುತ್ತದೆ. ಆಗಲೇ ಜೀವನ ಅಸಾರ, ವ್ಯರ್ಥ, ಇದರಲ್ಲೇನಿದೆ ಎನಿಸತೊಡಗುತ್ತದೆ. ಹಾಗಾಗದಂತೆ ಇರಬೇಕಿದ್ದರೆ ನಮ್ಮ ಸುತ್ತಲೂ ಒಂದು ಪ್ರೀತಿಪೂರ್ವಕ ವಾತಾವರಣ ನಿರ್ಮಿಸಿಕೊಳ್ಳಬೇಕು. ಪ್ರೀತಿಪೂರ್ವಕ ವಾತಾವರಣವೆಂದರೆ ನಾವು ವಾಸಿಸುವ ಜಾಗದ ಸುತ್ತಲೂ ಒಂದಷ್ಟು ಅತ್ತರ್ ಸುರಿದುಕೊಂಡು, ಗುಲಾಬಿ ಪಕಳೆಗಳನ್ನು ಚೆಲ್ಲಿಕೊಂಡಿರುವುದಲ್ಲ. ವ್ಯಕ್ತಿತ್ವವನ್ನು ನಿರ್ಧರಿಸುವ ಅಂಶಗಳಲ್ಲಿ ಪ್ರೀತಿ ಮತ್ತು ಶಿಸ್ತು ಮುಖ್ಯ. ನಾವು ಎಲ್ಲೇ ಇರಲಿ, ಎಲ್ಲೇ ಕೆಲಸ ಮಾಡುತ್ತಿರಲಿ ಆ ತಾಣ ಸದಾ ಅಚ್ಚುಕಟ್ಟಾಗಿ ಇರಬೇಕು. ಸ್ವಚ್ಛವಾಗಿರಬೇಕು. ಒಪ್ಪ ಓರಣವಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಾವಿರುವ ತಾಣ ನಮ್ಮದು ಎಂಬ ಪ್ರೇಮಪೂರ್ವಕ ಸಂಬಂಧ ಬೆಳೆಸಿಕೊಂಡಿರಬೇಕು. ಆಗ ಮಾತ್ರ ಅಲ್ಲಿ ಶಿಸ್ತು ಇರುತ್ತದೆ. ಎಲ್ಲವೂ ಕ್ರಮಬದ್ಧವಾಗಿರುತ್ತದೆ. ಬೇಕಿದ್ದರೆ ನೋಡಿ. ಯಾರೂ ಸಹ ಬಸ್ ನಿಲ್ದಾಣವನ್ನು, ಅಲ್ಲಿರುವ ಗಲೀಜನ್ನು ಸ್ವಚ್ಛಗೊಳಿಸಲು ಹೋಗುವುದೇ ಇಲ್ಲ. ಹೆಚ್ಚೆಂದರೆ ಅರ್ಧ ಗಂಟೆ ಇಲ್ಲಿದ್ದು ಹೋಗುವ ನಮಗೆ ಇಲ್ಲದ ಉಸಾಬರಿ ಏತಕ್ಕೆ ಎಂದುಕೊಂಡು ನಡೆದಿರುತ್ತೇವೆ. ಹಾಗೆಯೇ ಜೀವನದಲ್ಲಿ ವರ್ತಿಸಲಾಗದು. ಈ ಭೂಮಿಯ ಮೇಲೆ ನಾಲ್ಕು ದಿನ ಇದ್ದು ಹೋಗುವುದು, ಹೇಗಿದ್ದರೇನು ಎಂಬ ಮನೋಭಾವ ಮೂಡಿಸಿಕೊಂಡರೆ, ಜೀವನದುದ್ದಕ್ಕೂ ಉತ್ತಮ ವ್ಯಕ್ತಿಯಾಗಿ ಬಾಳಲು ಸಾಧ್ಯವೇ ಇಲ್ಲ. ಬದುಕಿದ್ದಾಗ, ಬದುಕಿನಾಚೆಯ ಏನಾದರೂ ಇದ್ದರೆ ಅದು- ಎಲ್ಲವೂ ನಿರ್ಧಾರವಾಗುವುದು ನಾವು ಹೇಗೆ ಬದುಕುತ್ತೇವೆ ಎಂಬುದನ್ನವಲಂಬಿಸಿಯೇ.
Advertisement