ಭಾಗ 26
ಕೋಪ ಜ್ವರಕ್ಕೆ ಮಾತ್ರೆಯ ಔಷಧಿ
ಅವನು ಬಹಳ ಬುದ್ಧಿವಂತ ಯಂಗ್
ಎಕ್ಸಿಕ್ಯೂಟಿವ್. ವಯಸ್ಸು 25. ಸಂಬಳ 75 ಸಾವಿರ. ಯಾವ ದುರಭ್ಯಾಸವೂ ಇಲ್ಲ. ಸುಂದರವಾಗಿ, ಅದಕ್ಕಿಂತ ಹೆಚ್ಚಾಗಿ ಗಂಭೀರವಾಗಿದ್ದಾನೆ. ಅವನ ಮದುವೆಗೆ ಪ್ರಪೋಸ್ ಮಾಡಿದರೆ ನೋ ಎಂದು ಹೇಳುವ ಅಭ್ಯಂತರಗಳು ಸಾಮಾನ್ಯವಾಗಿ ಯಾವ ಹುಡುಗಿಗೂ ಇರುವುದಿಲ್ಲ..!
ಅವನು ತನ್ನ ವಿಧವೆ ತಾಯಿಯೊಂದಿಗೆ ಬಾಳುತ್ತಿದ್ದ. ಅವರಿಬ್ಬರೂ ಸ್ನೇಹಿತರಂತೆ ಇದ್ದರು. ಅಂತಹವನು ಕ್ರಮೇಣ ಬದಲಾಗಿಬಿಟ್ಟ. ಊಟ ಮಾಡುವುದು ಕಡಿಮೆಯಾಯಿತು. ಕಿರಿಕಿರಿ ಹೆಚ್ಚಾಯಿತು. ತಟ್ಟೆ ನೂಕಿಬಿಡುತ್ತಿದ್ದ. ತಾಯಿಯ ಮೇಲೆ ಬೇಸರಗೊಳ್ಳುತ್ತಿದ್ದ.
ಅವನನ್ನು ಅಷ್ಟೊಂದು ಕಳವಳಗೊಳಿಸಿರುವ ಸಂಗತಿ ಏನಿರಬಹುದು ಎಂದು ತಾಯಿ ಅವನ ಗೆಳೆಯರ ಹತ್ತಿರ ವಿಚಾರಿಸಿದಳು. ಆಗ ಒಂದು ವಿಷಯ ಬೆಳಕಿಗೆ ಬಂದಿತ್ತು. ಅವರ ಆಫೀಸಿನಲ್ಲಿ ಸದ್ಯದಲ್ಲಿಯೇ ನಡೆಯಲಿರುವ ರಿಟ್ರೆಂಚ್ಮೆಂಟ್ ಬಗ್ಗೆ ಹೇಳಿದರು. ನಷ್ಟವನ್ನು ಕಡಿಮೆ ಮಾಡಲು ಆಫೀಸಿನಲ್ಲಿ ಸ್ಟಾಫ್ ಕಡಿಮೆ ಮಾಡುತ್ತಿದ್ದರು. ಅದರಲ್ಲಿ ರಾಕೇಶ್ ಕೂಡ ಇರಬಹುದು.
ಇನ್ನು ವಿಷಯವನ್ನು ಮುಚ್ಚಿಟ್ಟರೆ ಲಾಭವಿಲ್ಲವೆಂದು ಅವಳು ಒಂದು ದಿನ ಅವನನ್ನು ದಬಾಯಿಸಿದಳು. ಅವರ ವಾಗ್ವಾದ ತಾರಕಸ್ಥಾಯಿಯನ್ನು ತಲುಪಿತ್ತು. ..ಇರುವುದೋ ಹೋಗುವುದೋ ತಿಳಿಯದ ಕೆಲಸ ಕ್ಕೋಸ್ಕರ ನಿದ್ರೆ, ಊಟ ಬಿಡುವುದು ಒಳ್ಳೆಯದಲ್ಲ. ಉದ್ಯೋಗ ಹೋದರೂ ಪರವಾಗಿಲ್ಲ.. ಎಂದು ಸಾಂತ್ವಾನಗೊಳಿಸಲು ಪ್ರಯತ್ನಿಸಿದಳು. ಮಗ ಆಘಾತಗೊಂಡ. ಅಷ್ಟು ಕೋಪದ ನಡುವೆಯೂ ಅವ ನಿಗೆ ನಗು ಬಂದಿತ್ತು. ಏಕೆಂದರೆ ಇಂತಹ ಮತ್ತೊಂದು ಕೆಲಸ ತನಗೆ ಎಲ್ಲಿಯಾದರೂ ಖಚಿತವಾಗಿ ಸಿಗುವುದೆಂದು ಅವನಿಗೆ ತಿಳಿದಿತ್ತು.
ನನ್ನ ದಿಗಿಲಿಗೆ ಕಾರಣ ನನ್ನ ಉದ್ಯೋಗವೆಂದು ನಿನಗೆ ಯಾರು ಹೇಳಿದರು? ಎಂದ. ವಿಸ್ಮಯ ಹೊಂದುವ ಸ ರದಿ ತಾಯಿಯದಾಗಿತ್ತು. ನಿಜವಾದ ಕಾರಣವನ್ನು ಅವನು ಹೇಳಲಾರಂಭಿಸಿದ.
ಅವನು ಕೆಲಸ ಮಾಡುವ ಆಫೀಸಿನ ಎದುರಿನ ಬಿಲ್ಡಿಂಗ್ನಲ್ಲಿ ಸ್ವಪ್ನ ಎನ್ನುವ ಮಂದಗಮನೆ ಸ್ಟೇನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಳು. ಚಾಲೆಂಜ್ ಎನ್ನುವ ನಮ್ಮ ಸಿನಿಮಾದಲ್ಲಿ ಸರಸ್ವತೀಪುತ್ರ ವೇಟೂರಿಯವರು ಒಂದು ಹಾಡು ಬರೆದಿದ್ದಾರೆ. ಮಂದಗಮನ, ಮಧುರ ವಚನ, ಗಗನ ಜಘನ, ಸೊಗ ಸು ಲಲನವೇ.. ಎಂದು! ಗಗನ ಎಂದರೆ ಶೂನ್ಯವೆಂದೂ, ಗಗನಜಘನ ಎಂದರೆ ನಡು ಇಲ್ಲದವಳು ಎಂದು ಅರ್ಥ. ಪ್ರೌಢರು ಮಂದಗಮನರು. ಆದರೆ ಕವಿ ಕಲ್ಪನೆಯಲ್ಲಿ, ಗಗನಜಘನಗಳು ಕೂಡ ಮಂದಗಮನರಾಗುವುದು ಒಂದು ಅಪೂರ್ವ ಪ್ರಯೋಗ. ನಮ್ಮ ಭಾಷೆ ಮರೆಯುತ್ತಿರುವ ಯುವಜನರಿಗೆ ನಮ್ಮ ಭಾಷೆಯಲ್ಲಿ ಇರುವ ಸೊಗಸನ್ನು ಹೇಳುವುದಕ್ಕೆ ಮಾತ್ರವೇ ಈ ಅಪ್ರಸ್ತುತ ಪ್ರಸಂಗ.. ಮತ್ತೆ ವಿಷಯಕ್ಕೆ ಬಂದರೆ...
ಅವಳು ತನಗೆ ಎಲ್ಲ ರೀತಿಯಲ್ಲಿಯೂ ಸರಿಹೋಗುವಳೆಂದುಕೊಂಡಿದ್ದ. ಮದುವೆಗೆ ಮೊದಲು ಸಿನಿಮಾಗಳು, ಪಾರ್ಕ್ಗಳುಇಂತಹ ವಿಧಾನವನ್ನು ಅವನು ನಂಬುವವನಲ್ಲ. ಆ ವಿಷಯವನ್ನು ಅವಳೊಂದಿಗೆ ಮಾತಾಡಬೇಕೆಂದುಕೊಂಡು ಗೌರವಪೂರ್ವಕವಾಗಿ ಲಂಚ್ಗೆ ಆಹ್ವಾನಿಸಿ ಅಲ್ಲಿ ತನ್ನ ಇಷ್ಟದ ಬಗ್ಗೆ ಹೇಳಬೇಕೆಂದುಕೊಂಡಿದ್ದ.
ಅವಳಿಗೆ ಫೋನ್ ಮಾಡಿ, ನೀವು ನನ್ನ ಜತೆ ಲಂಚ್ಗೆ ಬರುತ್ತೀರಾ? ಎಂದು ಕೇಳುತ್ತಿರುವಂತೆಯೇ, ಅವಳು ಕಠಿಣವಾದ ಸ್ವರದಲ್ಲಿ ಆಮೇಲೆ ಮಾತಾಡುತ್ತೇನೆ ಎಂದು ಫೋನನ್ನು ಇಟ್ಟುಬಿಟ್ಟಿದ್ದಳು. ಆ ನಂತರ ಫೋನ್ ಮಾಡಲಿಲ್ಲ.
ಅದು ವಿಷಯ. ಎಲ್ಲವನ್ನೂ ಕೇಳಿಸಿಕೊಂಡ ತಾಯಿ ನಂಬಲಾರದವಳಂತೆ, ಇಷ್ಟು ಬಲಹೀನವಾದ ಮನಸ್ಸೇನು ನಿನ್ನದು? ಎನ್ನುವಂತೆ ಅವನತ್ತ ನೋಡಿ, ಪ್ರೇಮಿಸಿದ ಹುಡುಗಿ ಇಲ್ಲವೆಂದರೆ ಊಟ ಬಿಟ್ಟು ಅಳುತ್ತೀಯಾ? ಎಂದು ಕೇಳಿದಳು.
ನಾನು ಅವಳನ್ನು ಪ್ರೀತಿಸಲಿಲ್ಲ. ಮದುವೆ ನಡೆಯುವುದೋ ಇಲ್ಲವೋ ತಿಳಿಯದೇ ಪ್ರೀತಿಸುವಂತಹ ಬ ಲಹೀನತೆ ನನ್ನಲ್ಲಿಲ್ಲ. ಅವಳು ಕೂಡ ಇಷ್ಟಪಟ್ಟರೆ, ನನ್ನ ಇಷ್ಟವನ್ನು ಪ್ರೇಮವಾಗಿ ಬದಲಾಯಿಸಿಕೊಳ್ಳೋಣವೆಂದುಕೊಂಡಿದ್ದೇನೆ ಎಂದ.
ಮತ್ತೆ ನಿನಗೆ ನೋವೇತಕ್ಕೆ?
ನನ್ನ ಅಹಂಗೆ ಬಲವಾದ ಏಟು ಬಿದ್ದಿತಮ್ಮಾ! ಅವಳನ್ನು ಗೌರವದಿಂದ ಮಧ್ಯಾಹ್ನದ ಲಂಚ್ಗೆ ಕರೆದೆನೇ ಹೊರತು ರಾತ್ರಿ ಪಬ್ಗೆ ಅಲ್ಲ! ಕನಿಷ್ಠಪಕ್ಷ ಡಿನ್ನರ್ಗೂ ಅಲ್ಲ. ಇಷ್ಟವಿಲ್ಲದಿದ್ದರೆ ಅದನ್ನು ಹೇಳಬ ಹುದಲ್ಲವೇ? ಅಷ್ಟು ಬಿರುಸಾಗಿ ಮುಖದ ಮೇಲೆ ಹೊಡೆದಂತೆ ಫೋನಿಟ್ಟುಬಿಟ್ಟಿದ್ದು ಏಕೆ? ಸೂಕ್ಷ್ಮವಾದ ಸ್ಥಳದಲ್ಲಿ ಏಟು ಬಿದ್ದ ಹಾಗೆ ಹೇಳಿದ. ಅದು ಕಥೆ.
ಮನಸ್ಸಿಗೆ ಏಟು ಬಿದ್ದಿದೆ. ನಿಜವೇ. ಆದರೆ ಅದನ್ನು ತಾಯಿಯ ಮೇಲೆ ತೋರಿಸುವುದೇಕೆ? ಇದನ್ನೇ ಫೀವರ್ ಎನ್ನುತ್ತಾರೆ. ಫೀವರ್ ಎಂದರೆ ಜ್ವರ. ಎಲ್ಲರೂ ಅಂದುಕೊಳ್ಳುವ ಜ್ವರವಲ್ಲ. ಈ ಎಂದರೆ ಫ್ಯಾಕ್ಟ್ (ನಿಜ), ಇ ಎಂದರೆ ಎಫೆಕ್ಟ್ (ಪ್ರಭಾವ), ಗಿ ಎಂದರೆ ವೆಂಟಿಲೇಷನ್ (ಬಹಿರ್ಗತ), ಇ-ಎಮೋಷನ್ (ಭಾವೋದ್ರೇಕ), ಖ-ರಿಸಲ್ಟ್ (ಫಲಿತಾಂಶ).
ಪಂಚ ಜ್ಞಾನೇಂದ್ರಿಯಗಳ ಮೂಲಕ ಮನುಷ್ಯನ ಮೆದುಳಿಗೆ ಸೇರಿಕೊಳ್ಳುವುದು ರಿಯಾಲಿಟಿ (ನಿಜ). ಮೆದುಳು ಅದನ್ನು ಹೇಗೆ ಸ್ವೀಕರಿಸುತ್ತದೆಂಬುದು ಎಫೆಕ್ಟ್ (ಪ್ರಭಾವ). ರಸ್ತೆಯ ಪಕ್ಕದಲ್ಲಿ ಕಲ್ಲು ಇರುವುದು ವಾಸ್ತವ. ಅದನ್ನು ಒಬ್ಬರು ಕಾಲಿನಿಂದ ಒದೆಯಬಹುದು. ಮತ್ತೊಬ್ಬರು ದೇವರೆಂದು ಪೂಜಿಸ ಬಹುದು. ಚೀನಾ ದೇಶದ ಷಾಂಘಾಯ್ ನಗರದಲ್ಲಿ ಕ್ಯಾಡ್ಬರೀಸ್ ಚಾಕೊಲೇಟ್ ನಡುವೆ ಗೋಡಂಬಿ ಹುದುಗಿಟ್ಟ ಹಾಗೆ ಚೇಳನ್ನಿಟ್ಟು ಮಾರುತ್ತಾರೆ. ಅಲ್ಲಿ ಅದಕ್ಕೆ ಬಹಳ ಡಿಮ್ಯಾಂಡ್ ಇದೆ. ನಮಗೆ?
ಚಾಕೊಲೇಟಿನಲ್ಲಿ ಚೇಳು. ಒಬ್ಬರಿಗೆ ಸಿಹಿ. ಮತ್ತೊಬ್ಬರಿಗೆ ವಿಕಾರ. ಆ ವಿಧವಾಗಿ ವಾಸ್ತವ (ಈ) ಒಂದೇ. ಎಮೋಷನ್ (ಇ) ಬೇರೆ. ವಾಸ್ತವದ ಪ್ರಭಾವವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬಹಿರಂಗಗೊಳಿಸುತ್ತಾರೆ. ಕೆಲವರು ಕೋಪದಿಂದ ಅರಚಾಡುತ್ತಾರೆ. ಕೆಲವರು ಅಳುತ್ತಾರೆ. ಮತ್ತೆ ಕೆಲವರು ತಮ್ಮ ಕತ್ತಲಗುಹೆಯೊಳಕ್ಕೆ ನಿಶ್ಶಬ್ದವಾಗಿ ಹೊರಟುಹೋಗುತ್ತಾರೆ. ಅದನ್ನೇ ವೆಂಟಿಲೇಷನ್ (ಗಿ) ಎನ್ನುತ್ತಾರೆ. ರಾಕೇಶ್ಗೆ ಆ ರೀತಿಯೇ ನಡೆದಿದೆ. ಮೂಲ ಆ ಹುಡುಗಿಯ ತಿರಸ್ಕಾರ. ಅದರ ಪ್ರಭಾವ ತಾಯಿಯ ಮೇಲೆ ಮಗ ತೋರಿಸುತ್ತಿರುವ ಅಸಹನೆ. ಕೆಲವು ವ್ಯಕ್ತಿಗಳಲ್ಲಿ ಇದರ ತೀವ್ರತೆ ಹೆಚ್ಚಾಗಿರುತ್ತದೆ. ಎಮೋಷನ್ ಕಂಟ್ರೋಲ್ನಲ್ಲಿ ಇಟ್ಟುಕೊಳ್ಳದಿದ್ದರೆ ಸಂಬಂಧಗಳು ಹಳಸುತ್ತವೆ. ಏಟು ತಿನ್ನುತ್ತವೆ. ಅದೇ ರಿಸಲ್ಟ್ (ಖ). ಮತ್ತೆ ಇದಕ್ಕೆ ಪರಿಹಾರ?
ಟ್ಯಾಬ್ಲೆಟ್. ಈ ಜ್ವರಕ್ಕೆ ನಿವಾರಣೆಯೇ TABLET. ಫೀವರನ್ನು ಕಡಿಮೆ ಮಾಡುವ ಟ್ಯಾಬ್ಲೆಟ್ ಅಲ್ಲ. ಇದರ ಅರ್ಥವೇ ಬೇರೆ. ಖಿ ಎಂದರೆ ಟೇಬ್ಲಿಂಗ್ (ಆಚರಣೆ), A-ಆಕ್ಸೆಸ್ (ವಿಶ್ಲೇಷಣೆ), B-ಬ್ರೌಜ್ -(ಹುಡುಕುವಿಕೆ), ಐ-ಲೊಕೆಟ್ (ಪತ್ತೆ ಹಚ್ಚುವಿಕೆ), ಇ-ಎನ್ಕೌಂಟರ್ (ಎದುರಿಸುವಿಕೆ), ಖಿ- ಟರ್ಮಿನೇಟ್ (ಶಾಶ್ವತವಾಗಿ ನಾಶ ಮಾಡುವಿಕೆ)
ಬುದ್ಧ ಹೇಳುವ ಯೋಗ ಕೂಡ ಇದೇ..! ರೋಗ-ಕಾರಣ-ಔಷಧ-ನಾಶ..! ನಮ್ಮ ಭಾವೋದ್ರೇಕಗಳಿ ಗೆ, ಮೂಡ್ ಚೆನ್ನಾಗಿರದಿರುವುದಕ್ಕೆ, ದು:ಖಕ್ಕೆ, ಕೋಪಕ್ಕೆ, ಅಸಹನೆಗೆ ಕಾರಣ ಬೇರೆಲ್ಲೋ ಇರಬಹುದು. ಮೊದಲು ಅದರ ಮೂಲವನ್ನು ಹುಡುಕಿ ತೆಗೆಯಬೇಕು. ಅದಕ್ಕಾಗಿ ತಮ್ಮ ಸಮಸ್ಯೆಗಳನ್ನೆಲ್ಲಾ ಟೇಬ ಲ್ ಮೇಲೆ ಹರಡಿ ನೋಡಬೇಕು. ರಾಕೇಶ್ ಬಾಧೆಗೆ ಕಾರಣ ಅವನ ತಾಯಿ ಅಂದುಕೊಂಡಂತೆ ಉದ್ಯೋಗದ ಬ ಯ ಆಗಿರಲಿಲ್ಲ. ಪ್ರೇಮದ ವೈಫಲ್ಯ. Fact ಎಂದರೆ ಅದು. ಕಾರಣ ಆ ಯುವತಿಯೇ! ಸಂದೇಹವಿಲ್ಲ. ಆದರೆ ಅವಳು ಮಾಡಿದ ತಪ್ಪು ಅವನ ಪ್ರೀತಿಯನ್ನು ತಿರಸ್ಕರಿಸಿದ್ದಲ್ಲ. ಅಗೌರವದಿಂದ ಫೋನಿಟ್ಟುಬಿಟ್ಟಿದ್ದು! ಅವನ ಅಹಂ ಅಲ್ಲಿ ಏಟು ತಿಂದಿತ್ತು. ಆದರೆ ವಿಷಯ ತಿಳಿಯದೇ ನಿದ್ರೆಯಿಲ್ಲದ ರಾತ್ರಿಗಳು ಎಷ್ಟು ಕಳೆದರೂ ಲಾಭವಾದರೂ ಏನು? ಸಮಸ್ಯೆ ಹಾಗೇ ಉಳಿದುಹೋಗಿತ್ತು. ನೋವು ಉಳಿದುಹೋಗಿತ್ತು. ಅದಕ್ಕಿಂತ ಹಾಗೋ ಹೀಗೋ ತಿಳಿದುಕೊಳ್ಳುವುದೇ ಒಳ್ಳೆಯದಲ್ಲವಾ? ಅವನಿಗೆ ಅಷ್ಟು ಕೋಪ ಬರುವಂತಹ ಪರಿಸ್ಥಿತಿಗಳನ್ನೆಲ್ಲಾ ಸಮೀಕರಿಸಿ ನೋಡಬೇಕು (Table).
ಬಹಳ ಜನ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಿಲ್ಲ. ಪರಿಹಾರ ಎಂದರೆ ಭಯ! ಸಮಸ್ಯೆಗೆ ದೂರವಾಗಿ ನಿಂತು ನೊಂದುಕೊಳ್ಳುತ್ತಲೇ ಇರುತ್ತಾರೆ. ಇದನ್ನೇ ಫಿಯರ್ ಆಫ್ ಫೆಲ್ಯೂರ್ ಎನ್ನುತ್ತಾರೆ. ಅಷ್ಟೊಂದು ದೊಡ್ಡ ಮಾತುಗಳು ತಾಯಿಗೆ ತಿಳಿಯದೇ ಇರಬಹುದು. ಆದರೆ ವಿಷಯ ಏನೆಂದು ತಿಳಿ ದುಕೊಳ್ಳೆಂದು ಮಗನನ್ನು ಒತ್ತಾಯಿಸಿದಳು(Access).
ಅವನು ಆ ಯುವತಿಯ ಆಫೀಸಿಗೆ ಹೋದ. ನನ್ನೊಂದಿಗೆ ಲಂಚ್ಗೆ ಬರಲು ಇಷ್ಟವಿಲ್ಲದಿದ್ದರೂ, ಮದುವೆ ನಿಶ್ಚಯವಾಗಿದ್ದರೂ, ಆ ವಿಷಯವನ್ನು ಮಾಮೂಲಾಗಿಯೇ ಹೇಳಬಹುದಿತ್ತಲ್ಲವಾ? ನಾನೊಬ್ಬ ವಿಲನ್ ಎಂಬಂತೆ ಮುಖದ ಮೇಲೆ ಹೊಡೆದಂತೆ ಫೋನ್ ಕುಕ್ಕಿದ್ದು ಏಕೆ? ಎಂದು ಕೇಳುವುದು ಅವನ ಉದ್ದೇಶ ವಾಗಿತ್ತು. ಆದರೆ ಆ ಯುವತಿ ಆಫೀಸಿನಲ್ಲಿರಲಿಲ್ಲ. ಹತ್ತು ದಿನಗಳ ರಜೆ ಹಾಕಿದ್ದಳು. ಮನೆಯ ಬಳಿ ಹೋಗಿ ವಿವರ ತಿಳಿದುಕೊಂಡಾಗ ಅವಳು ಆಸ್ಪತ್ರೆಯಲ್ಲಿರುವಳೆಂದು ತಿಳಿಯಿತು (Browse).
ಅವನ ತಾಯಿ, ತಡವಾದಷ್ಟೂ ದಿಗಿಲೇ ಉಳಿಯುವುದೆಂದೂ, ನಿರಂತರ ದು:ಖಕ್ಕಿಂತ, ಆ ದು:ಖ ನಿರ್ಮೂಲನೆ ಮಾಡುವುದು ಒಳ್ಳೆಯದೆಂದೂ, ತಕ್ಷಣವೇ ಹೋಗಿ ಆ ಹುಡುಗಿಯೊಂದಿಗೆ ಮಾತಾಡೋಣ ಎಂದಳು (Locate). ಅವರು ಆಸ್ಪತ್ರೆಗೆ ಹೋದರು (Encounter).
ಅವನನ್ನು ನೋಡಿದೊಡನೆ ಅವಳ ಮುಖ ಅರಳಿತ್ತು. ಅವನು ಫೋನ್ ಮಾಡಿದಾಗಲೇ, ಅವನ ಮನದಲ್ಲಿನ ಆಲೋಚನೆ ಅವಳಿಗೆ ತಿಳಿದು ಅವಳ ಆನಂದಕ್ಕೆ ಪಾರವೇ ಇರಲಿಲ್ಲ. ಅಷ್ಟರಲ್ಲಿ ಬಾಸ್ ಇಂಟರ್ಕಾಂನಲ್ಲಿ ಕರೆದಿದ್ದರಿಂದ ಆಮೇಲೆ ಮಾತಾಡುತ್ತೇನೆ ಎಂದು ಫೋನ್ ಇಟ್ಟುಬಿಟ್ಟಿದ್ದಳು. ಅವಳ ಧ್ವನಿಯಲ್ಲಿ ಆ ದಿನ ಕಂಡುಬಂದ ಅವಸರವನ್ನು ಅವನು ಅಪಾರ್ಥ ಮಾಡಿಕೊಂಡಿದ್ದ. ಫೋನ್ ಇಟ್ಟ ನಂತರ ಆ ಯುವತಿ ಪಕ್ಷಿಯಂತೆ ಆಗಸದಲ್ಲಿ ಹಾರಾಡುತ್ತಾ ಕೆಳಗಿನ ಮೆಟ್ಟಿಲನ್ನು ನೋಡಲಿಲ್ಲ. ಜಾರಿ ಬಿದ್ದಿದ್ದರಿಂದ ಕಾಲು ಮುರಿದು ಆಸ್ಪತ್ರೆ ಸೇರಿದ್ದಳು. ತಾಯಿ, ಮಗ ಹುಡುಕಿಕೊಂಡು ಬಂದಿದ್ದರಿಂದ ಸಿನಿಮಾ ಲೆವೆಲ್ನಲ್ಲಿ ಕಥೆ ಸುಖಾಂತವಾಗಿತ್ತು (Terminate).
ಕೋಪಕ್ಕೆ ಸ್ಟಾಪ್ ಬಟನ್, ತಪ್ಪಿಗೆ ರೀವೈಂಡ್ ಬಟನ್, ಕಷ್ಟಕ್ಕೆ ಫಾರ್ವಡರ್್ ಬಟನ್, ಒಳ್ಳೆಯತನಕ್ಕೆ ಪಾಜ್ ಬಟನ್ ಇದ್ದರೆ ಜೀವನ ಎನ್ನುವ ಟೇಪ್ರೆಕಾರ್ಡರ್ ಅದ್ಭುತವಾಗಿ ಕೆಲಸ ಮಾಡುತ್ತದೆ. ?
(ಮುಂದುವರಿಯುವುದು)
ಯಂಡಮೂರಿ ವೀರೇಂದ್ರನಾಥ್
ಕನ್ನಡಕ್ಕೆ:
ಯತಿರಾಜ್ ವೀರಾಂಬುಧಿ
Advertisement