
ಸತ್ತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ ಸಮಾಧಿ, ಅಗ್ನಿಸ್ಪರ್ಶ ಮಾಡಿದ್ದ ಸ್ಥಳದಿಂದ ಮೂಳೆಗಳನ್ನು ಹೊರತೆಗೆದು, ಮಡಿಕೆಯೊಂದರಲ್ಲಿ ಪುರಾತನ ಕಾಲದ ಪುಟ್ಟ ಗುಮ್ಮಟವೊಂದರಲ್ಲಿ ಸಂರಕ್ಷಿಸಿಡುವ ಸಾವಿರಾರು ವರ್ಷಗಳ ಹಿಂದಿನ ಬೃಹತ್ ಶಿಲಾಯುಗಕ್ಕೆ ಸೇರಿದ ಶವಸಂಸ್ಕಾರ ಪದ್ಥತಿಯೊಂದು ಇಂದಿಗೂ ರಾಜ್ಯದಲ್ಲಿ ಜೀವಂತವಾಗಿದೆ.
3500 ವರ್ಷದ ಹಿಂದೆ ಬೃಹತ್ ಶಿಲಾಯುಗದ ಈ ಪದ್ಧತಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕದರ ಮಂಡಲಗಿ ಗ್ರಾಮದಲ್ಲಿದೆ. ಜಾತಿಬೇಧವಿಲ್ಲದೆ ಅನೇಕ ವರ್ಗದವರು ಆಚರಿಸುತ್ತಿರುವುದು ಇನ್ನೊಂದು ವೈಶಿಷ್ಟ್ಯ.
ಶ್ರೀ ಕಾಂತೇಶ ಎಂಬುದಾಗಿ ಕರೆಸಿಕೊಳ್ಳುವ ಐತಿಹಾಸಿಕ ಆಂಜನೇಯ ದೇವಸ್ಥಾನದಿಂದ ಪ್ರಸಿದ್ಧಿ ಪಡೆದ ಸ್ಥಳವಿದು. ಈ ಪದ್ಧತಿ ಜೀವಂತವಾಗಿಟ್ಟುಕೊಂಡು ಬಂದ ಶ್ರೇಯ ಗ್ರಾಮಸ್ಥರಿಗೆ ಸಲ್ಲುತ್ತದೆ.
ಶಿಲಾಯುಗದ ಕಾಲದಲ್ಲಿ ಸತ್ತ ವ್ಯಕ್ತಿಯ ಶವವನ್ನು ಹೂತಿಟ್ಟು, ಕೆಲ ಸಮಯದ ನಂತರ ಸಮಾಧಿ ಅಗೆದು, ಶವದ ಮೂಳೆ, ತಲೆಬುರುಡೆ ಹೊರತೆಗೆಯಲಾಗುತ್ತಿತ್ತು. ಅದನ್ನು ಮಣ್ಣಿನ ಮಡಿಕೆಯಲ್ಲಿ ತುಂಬಿಡುತ್ತಿದ್ದರು. ಹೀಗೆ ತೆಗೆದಿಟ್ಟ ಮೂಳೆಗಳನ್ನು ಮತ್ತೆ ಮಣ್ಣಿನಲ್ಲಿ ಹೂತು, ಚಿಕ್ಕ ಕಲ್ಲಿನ ಗುಡಿ ಕಟ್ಟಿ ವಿಶೇಷ ಆಚರಣೆ, ಹಬ್ಬ ಹರಿದಿನದಲ್ಲಿ ಎಡೆ ನೀಡುತ್ತಿದ್ದರು. ಸತ್ತ ಮೇಲೂ ಇರುವ ಆತ್ಮಗಳಿಗೆ ಆಹಾರ ಪದಾರ್ಥ ಪೂರೈಸಬೇಕು ಎಂಬುದು ಆಗಿನ ನಂಬಿಕೆಯಾಗಿತ್ತು.
ಗ್ರಾಮದ ಪೂರ್ವದ ಅಗ್ನಿ ಮೂಲೆಯಲ್ಲಿ ಚಿಕ್ಕ ಜಗುಲಿಯ ಮೇಲೆ ಚಿಕ್ಕ ಗುಮ್ಮಟ ಮಾದರಿಯ ಗುಡಿ ನಿರ್ಮಿಸಲಾಗಿದೆ. ಅದರಲ್ಲಿ ಬೃಹತ್ ವೀರಗಲ್ಲು, ಅದರ ಮೇಲೆ ಉಬ್ಬು ಶಿಲ್ಪಗಳಿವೆ. ವೀರನೊಬ್ಬ ಕುದುರೆ ಮೇಲೆ ಕುಳಿತು ಖಡ್ಗ ಹಿಡಿದ, ಮತ್ತೊಂದು ಕಡೆ ಸ್ತ್ರೀಯೊಬ್ಬಳು ನಿಂತಿದ್ದಾಳೆ. ಸ್ತ್ರೀಯು ನಿಂತ ಭಂಗಿ ಸತಿ ಹೋದಂತಿದೆ. ಗುಡಿ ಹಲವಾರು ಶತಮಾನಗಳಷ್ಟು ಹಳೆಯದು. ಊರಿನಲ್ಲಿ ಸತ್ತ ವ್ಯಕ್ತಿಗಳ ಶವ ಸಂಸ್ಕಾರದ ನಂತರ ಅಸ್ಥಿಗಳನ್ನು ಸಂಗ್ರಹಿಸಿ, ಮಡಕೆಯಲ್ಲಿ ಹಾಕಿ, ಇದೇ ಗುಡಿಯಲ್ಲಿ ಇಡಲಾಗುತ್ತದೆ. ಗ್ರಾಮಸ್ಥರು ಈ ಗುಡಿಯನ್ನು ಸ್ಮಶಾನದಮ್ಮ ಎಂದು ಕರೆಯುತ್ತಾರೆ. ಹಿಂದೆ ಗುಡಿ ಊರ ಹೊರಗಿತ್ತು. ಇಂದು ಗುಡಿ ಪಕ್ಕದಲ್ಲೇ ಹಲವಾರು ಮನೆಗಳಿವೆ.
ಕಲ್ಯಾಣಿ ಚಾಲುಕ್ಯರ ಕಾಲದ ಕಲ್ಮೇಶ್ವರ, ನೀಲಕಂಠೇಶ್ವರ, ಮುಕ್ಕಣ್ಣೇಶ್ವರ, ಸಿದ್ದೇಶ್ವರ, ರಾಮಲಿಂಗೇಶ್ವರ, ಕದರ ಮಂಡಲಗಿ ಕಾಂತೇಶ ಸ್ವಾಮಿ, ಕಲ್ಲೇಶ್ವರ ದೇವಾಲಯಗಳು ತನ್ನದೇ ಆದ ಇತಿಹಾಸ ಹೊಂದಿರುವ ಭವ್ಯ ದೇಗುಲಗಳು. ಇಂದು ಅವೆಲ್ಲ ಚಿಕ್ಕ ಗುಡಿಗಳಾಗಿವೆ. ಮಹಾಸತಿ ಶಿಲ್ಪ, ವೀರಗಲ್ಲು, ಶಿಲಾ ಶಾಸನಗಳು, ಲಿಂಗದ ಮೇಲಿನ ಭಾಗಗಳು ಅಲ್ಲಲ್ಲಿ ಕಂಡು ಬರುತ್ತವೆ. ಕಾಂತೇಶನ ದೇವಸ್ಥಾನದ ಮುಂಭಾಗದ ದೀಪಸ್ತಂಭಗಳಲ್ಲಿ ಗರುಡ, ಮಿಥುನ ಶಿಲ್ಪಗಳು, ಶಾಸನಗಳಿವೆ.
ಗ್ರಾಮದ ಮತ್ತಷ್ಟು ಇತಿಹಾಸದ ಸತ್ಯಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಸಂಶೋಧನೆ ನಡೆಯುತ್ತಿದೆ ಎಂದು ದಾವಣಗೆರೆ ಹಿರಿಯ ಇತಿಹಾಸ ಸಂಶೋಧಕ ಬುರುಡೇಕಟ್ಟೆ ಮಂಜಪ್ಪ, ಇತಿಹಾಸ ಸಂಶೋಧಕ ಕೆ.ಎಂ. ರಾಘವೇಂದ್ರಾಚಾರ್ ಹೇಳುತ್ತಾರೆ. ಆಸಕ್ತರಿಗೆ: 9480712307 (ಮಂಜಪ್ಪ).
-ನಾಗರಾಜ ಎಸ್. ಬಡದಾಳ್
Advertisement