
ತೃಪ್ತಿಯಿರಲಿ
ಮೊದಲು ನಿಮಗೆ ಸಿಕ್ಕ ಸ್ಪೆಶಲ್ ಆಶೀರ್ವಾದಗಳ ಪಟ್ಟಿ ಮಾಡಿ. ಈ ಪ್ರಪಂಚದಲ್ಲಿ ಅದೆಷ್ಟೋ ಮಿಲಿಯನ್ ಜನರಿಗೆ ಊಟವಿಲ್ಲ, ನೀವು ಪ್ರತಿನಿತ್ಯ ಮೂರೂ ಹೊತ್ತೂ ಉಣ್ಣುತ್ತೀರಿ. ನಿಮಗೆ ಕಾರಿಲ್ಲ, ಅದೆಷ್ಟೋ ಮಂದಿಗೆ ಕಾಲಿಲ್ಲ. ಇದಲ್ಲದೆ ಹೆತ್ತವರು, ತಲೆ ಮೇಲೊಂದು ಸೂರು, ನಿಮ್ಮ ಪ್ರತಿಭೆ ಎಲ್ಲವನ್ನೂ ಪರಿಗಣಿಸಿ. ಅವನ್ನೆಲ್ಲ ನೀಡಿದ ಕಾಣದ ಶಕ್ತಿಗೆ ಥ್ಯಾಂಕ್ಸ್ ಹೇಳಲು ಮರೆಯದಿರಿ. ನಿಮಗೆ ಹಲವು ಸಮಸ್ಯೆಗಳಿರಬಹುದು. ಅವಕ್ಕೂ ಥ್ಯಾಂಕ್ಸ್ ಹೇಳಿಯೇ ಪ್ರತಿದಿನದ ಕೆಲಸ ಆರಂಭಿಸಿ. ಏಕೆಂದರೆ ಇವೇ ನಿಮ್ಮನ್ನು ಗಟ್ಟಿಗೊಳಿಸುವಂಥವು. ನಿಮ್ಮನ್ನು ಜಗತ್ತಿನಲ್ಲಿ ಜೀವಿಸುವುದಕ್ಕೆ ಬಲಿಷ್ಠಗೊಳಿಸುವಂಥವು. ಪ್ರತೀ ಸಮಸ್ಯೆ ಎದುರಾದಾಗಲೂ ಉಳಿ ಪೆಟ್ಟು ಬೀಳುವ ಕಲ್ಲೇ ಶಿಲೆಯಾಗುವುದು ಎಂದು ಹೇಳಿಕೊಳ್ಳಿ.
ನಿಮ್ಮ ಕತೆಯನ್ನು ಹಂಚಿಕೊಳ್ಳಿ
ನಮ್ಮ ಕತೆಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದರಿಂದಲೂ ಸಕಾರಾತ್ಮಕ ಚಿಂತನೆಗಳು ಮೂಡುತ್ತವೆ. ಸಂತೋಷ, ಸಮಸ್ಯೆ, ಸಾಹಸಗಳೇನೇ ಇರಲಿ, ಹಂಚಿಕೊಂಡಾಗಲೇ ಸಂತೋಷ ದುಪ್ಪಟ್ಟಾಗುವುದು, ದುಃಖ ಕಡಿಮೆಯಾಗುವುದು. ಮತ್ತೊಬ್ಬರೂ ಅದಕ್ಕಿಂತಾ ಹೆಚ್ಚಿನ ಸಮಸ್ಯೆಯನ್ನೇನೋ ಎದುರಿಸಿದ್ದಾರೆ ಎಂಬುದೇ ನಮಗೆ ಒಂದು ರೀತಿಯ ಕಂಫರ್ಟ್ ನೀಡುವುದು.
ಕ್ಷಮಿಸಿಬಿಡಿ
ನಮ್ಮ ಸಂತೋಷಕ್ಕೆ ಭಂಗ ತಂದವರನ್ನು ಕ್ಷಮಿಸುವುದು ಕಷ್ಟವೇ. ಆದರೆ ಅಸಾಧ್ಯವೇನಲ್ಲ. ಏಕೆಂದರೆ ಮನಸ್ಸು ವಿಶಾಲವಾದುದು. ಅದನ್ನು ಮತ್ತಷ್ಟು ಹಿಗ್ಗಿಸಬೇಕೇ ಹೊರತು ಕುಗ್ಗಿಸಬಾರದು. ಅವರು ನಮಗೇನೇ ಹಾನಿ ಮಾಡಿರಲಿ ಪ್ರತಿದ್ವೇಷದಿಂದ ನಾವು ಕಳೆದುಕೊಂಡದ್ದು ಮರಳಿಬಾರದು. ಏನಿದ್ದರೂ ಅವರನ್ನೂ ದುಃಖದಲ್ಲಿ ಮುಳುಗಿಸಬಹುದಷ್ಟೇ. ಇದು ನಮ್ಮ ಭೂತಕಾಲದ ಅಂದವನ್ನೂ ಹಾಳು ಮಾಡುವುದಲ್ಲದೆ ವರ್ತಮಾನ, ಭವಿಷ್ಯದ ನೆಮ್ಮದಿಯನ್ನೂ ಕಸಿಯುವುದು. ಒಮ್ಮೆ ಕ್ಷಮಿಸಿ ಆ ವ್ಯಕ್ತಿಯನ್ನು ನಿರ್ಲಕ್ಷಿಸಿಯೋ, ಸ್ನೇಹಹಸ್ತ ಚಾಚಿಯೋ ಮಾಡುವುದರಿಂದ ಅವರ ಮುಂದೆ ನಮ್ಮ ವ್ಯಕ್ತಿತ್ವ ಹಿರಿದಾಗುತ್ತದೆ. ಅದಕ್ಕಿಂತಾ ಸಂತೋಷ ಏನಿದೆ?
ಉತ್ತಮ ಕೇಳುಗರಾಗಿ
ಉತ್ತಮ ಕೇಳುಗರಾಗಿದ್ದಲ್ಲಿ ಜ್ಞಾನವೂ ಹೆಚ್ಚುತ್ತದೆ. ಜೊತೆಗೆ ಸಂಬಂಧಗಳೂ ಗಾಢವಾಗುತ್ತವೆ. ಅಲ್ಲದೆ ಉತ್ತಮ ಕೇಳುಗ ಮಾತ್ರ ಉತ್ತಮ ಸಲಹೆ ನೀಡಬಲ್ಲ. ಹೀಗಾಗಿ ತೆರೆದ ಕಿವಿಗಳು ನಿಮ್ಮಲ್ಲಿ ಆತ್ಮವಿಶ್ವಾಸ ಹಾಗೂ ಸಂತೋಷವನ್ನು ತುಂಬುತ್ತವೆ.
ಹೊಟ್ಟೆಕಿಚ್ಚನ್ನು ಶಕ್ತಿಯಾಗಿ ಪರಿವರ್ತಿಸಿ
ಇನ್ನೊಬ್ಬರ ಬಗ್ಗೆ ಹೊಟ್ಟೆಕಿಟ್ಟು ಪಡುವುದರಿಂದ ನಮ್ಮನ್ನು ನಾವೇ ಘಾಸಿಗೊಳಿಸಿಕೊಳ್ಳುತ್ತೇವೆ ಹೊರತು, ಇದರಿಂದ ಸಿಗುವ ಆತ್ಮವಿಶ್ವಾಸದಿಂದ ಆ ವ್ಯಕ್ತಿ ಇನ್ನೂ ಬಲಿಷ್ಠನೇ ಆಗುತ್ತಾನೆ. ಅದರ ಬದಲು ಇನ್ನೊಬ್ಬರ ಶಕ್ತಿ, ಸಾಮರ್ಥ್ಯ, ಗೆಲುವನ್ನು ಮಾದರಿಯಾಗಿ ಪರಿಗಣಿಸಿ. ನೀವೇ ಉತ್ತಮವಾಗಿ.
ನಗುನಗುತಾ ನಲೀ
ನಮ್ಮ ನಗು ನಮ್ಮ ಸುತ್ತಲೂ ಸಂತೋಷ ಹರಡಿ, ಸುತ್ತಲಿನವರಲ್ಲೂ ಚೈತನ್ಯ ತುಂಬುತ್ತದೆ. ಅದೇ ನಮ್ಮ ದ್ವೇಷ, ಕೋಪತಾಪಗಳೂ ನಮ್ಮ ಸುತ್ತಲಿನ ಪರಿಸರವನ್ನೂ ಹಾಳುಗೆಡವಿ ಕರ್ಫ್ಯೂ ಜಾರಿಯಲ್ಲಿದೆಯೇನೋ ಎನಿಸುತ್ತದೆ. ನಗುವುದರಿಂದ ಸೆರಟೋನಿನ್ ಎಂಬ ಹಾರ್ಮೋನ್ ಬಿಡುಗಡೆಯಾಗಿ ಸಂತೋಷ ಇಮ್ಮಡಿಯಾಗುತ್ತದೆ. ಇದು ಕಷ್ಟದ ದಿನಗಳನ್ನೂ ಸಹ್ಯವೆನಿಸುತ್ತದೆ.
ವ್ಯಾಯಾಮ ಮತ್ತು ಉತ್ತಮ ಆಹಾರ
ನಮಗೆಲ್ಲ ಪ್ರತಿದಿನ ಒಂದಿಷ್ಟಾದರೂ ವ್ಯಾಯಾಮ ಹಾಗೂ ಸೂರ್ಯನ ಬೆಳಕಿನ ಅವಶ್ಯಕತೆ ಇದೆ. ದಿನಕ್ಕೆ ಕನಿಷ್ಠ ಒಂದು ಬಾರಿಯಾದರೂ ಮನೆಯಿಂದ ಹೊರಗೆ ಸುತ್ತುವುದು ಉಲ್ಲಾಸ ನೀಡುತ್ತದೆ. ಮನೆ ಆಹಾರ, ಹಣ್ಣು ಮತ್ತು ತರಕಾರಿಗಳು ಸಹ ನಮ್ಮ ಸಕಾರಾತ್ಮಕ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ. ಕೆಲವು ಎಣ್ಣೆ ತಿಂಡಿಗಳು, ಚಾಟ್ಸ್ಗಳು ಉದಾಸೀನವನ್ನು ಹೆಚ್ಚಿಸಿ, ಕ್ರೌರ್ಯ ಪ್ರವೃತ್ತಿಗೆ ಕಾರಣವಾಗುತ್ತವೆ. ಹೀಗಾಗಿ ಅವುಗಳಿಂದ ಆದಷ್ಟು ದೂರವಿರುವುದು ಒಳಿತು.
ಸಕಾರಾತ್ಮಕ ಚಿಂತನೆ ಹೇರಿಕೊಳ್ಳಿ
ಮೊದಲಿಗೆ ಪ್ರಯತ್ನಪೂರ್ವಕವಾಗಿ ಸಕಾರಾತ್ಮಕ ಚಿಂತನೆ ಹೇರಿಕೊಂಡರೆ ಬರಬರುತ್ತಾ ಅದು ನಿಮ್ಮ ವ್ಯಕ್ತಿತ್ವದ ಭಾಗವೇ ಆಗುತ್ತದೆ. ಉದಾಹರಣೆಗೆ ಇವತ್ತೇನೋ ನಿಮಗೆ ಆಪರೇಶನ್ ಆಗಬೇಕಿದೆ. ಅಯ್ಯೋ ನನಗೇ ಏಕೆ ಎಂದುಕೊಳ್ಳುವ ಬದಲು, ಆಪರೇಶನ್ ಕೇವಲ ತಾತ್ಕಾಲಿಕ. ಅದು ನಮ್ಮ ಆರೋಗ್ಯವನ್ನು ಉತ್ತಮಪಡಿಸಲೇ ಆಗಿದೆ ಎಂದು ಯೋಚಿಸಿ.
ದೂರುವುದನ್ನು ಬಿಟ್ಟುಬಿಡಿ
ಇನ್ನೊಬ್ಬರನ್ನು ದೂರುವುದು ಸುಲಭ. ನಮ್ಮ ತಪ್ಪನ್ನು ಬೇರೆಯವರ ಮೇಲೆ ಎತ್ತಿ ಹಾಕುವುದು ಮತ್ತೂ ಸುಲಭ. ಆದರೆ ಅದನ್ನು ನಮ್ಮ ಮೇಲೆ ಹಾಕಿಕೊಂಡು ಹೊಣೆ ಹೊತ್ತು, ನಿಭಾಯಿಸಿ ಅದರಿಂದ ಹೊರಬರುವುದರಲ್ಲಿ ನಮ್ಮ ದೊಡ್ಡತನವಿದೆ. ನಿಮ್ಮ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಂಡರೆ, ತೆರೆದ ಮನಸ್ಸಿದ್ದರೆ ಸಂಪೂರ್ಣ ಒಳಿತೇ ಆಗುವುದರಲ್ಲಿ ಅನುಮಾನವಿಲ್ಲ.
-ರೇಶ್ಮಾ
Advertisement