
ಹೋಟೆಲ್ ಇರಲಿ, ಬೇಕರಿ ಇರಲಿ, ಯಾವುದೇ ಸಿದ್ಧಾಹಾರ ಆಗಿರಲಿ. ಅವುಗಳಲ್ಲಿ ಕೃತಕ ಸಿಹಿ, ಕೃತಕ ಬಣ್ಣಗಳ ಬಳಕೆ ಇದ್ದೇ ಇರುತ್ತದೆ. ಅವು ಬಿಡಿ, ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಅಡುಗೆಯವರೂ ಇವುಗಳನ್ನು ಬಳಸುತ್ತಾರೆ. ನಿಮಗೆ ಹೊರಗಡೆ ತಿಂಡಿ ತಿಂದಾಗ ಅಥವಾ ಸಮಾರಂಭಗಳಲ್ಲಿ ಊಟ ಮಾಡಿದ ಕೆಲ ಹೊತ್ತಿನ ಬಳಿಕ ತಲೆನೋವು, ಕಿರಿಕಿರಿ ಕಾಣಿಸಿಕೊಂಡರೆ ಕೃತಕ ಸಿಹಿ, ಕೃತಕ ಬಣ್ಣಗಳ ಬಗ್ಗೆ ಅಲರ್ಜಿ ಇದೆ ಎಂದೇ ಅರ್ಥ. ಆದರೆ ಇವುಗಳಿಂದ ತಲೆನೋವು ಹೇಗೆ ಬರುತ್ತದೆ ಎನ್ನುವುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ವಿಶೇಷವಾಗಿ ಮೈಗ್ರೇನ್ ಅನ್ನು ಇವು ಹೆಚ್ಚಿಸಬಲ್ಲವು ಎನ್ನುವುದು ನರರೋಗ ತಜ್ಞರ ಅಭಿಪ್ರಾಯ ಮಾತ್ರವಲ್ಲ, ಮೈಗ್ರೇನ್ ಇದ್ದಾಗ ಕೃತಕ ಸಿಹಿ ಸೇವಿಸಿದರೆ ನೋವಿನ ತೀವ್ರತೆ ಇನ್ನಷ್ಟು ಹೆಚ್ಚುತ್ತದೆ ಎನ್ನುವುದು ಪ್ರಯೋಗಗಳಿಂದಲೂ ನಿರೂಪಿತವಾಗಿರುವ ಸಂಗತಿ.
ಸಂಸ್ಕರಿತ ಆಹಾರಗಳಲ್ಲಿ ಎಂಎಸ್ಜಿ (ಮೊನೊ ಸೋಡಿಯಂ ಗ್ಲುಟಾಮೇಟ್) ಎನ್ನುವ ಪದಾರ್ಥವಿರುತ್ತದೆ. ಇದು ಸಹ ತಲೆನೋವು ಉಲ್ಬಣಗೊಳಿಸುತ್ತದೆ. ಎಂಎಸ್ಜಿ ತಲೆನೋವಿನ ಜತೆಗೆ ಇನ್ನೂ ಕೆಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅದಕ್ಕೆ 'ಜೈನೀಸ್ ರೆಸ್ಟೊರೆಂಟ್ ಸಿಂಡ್ರೋಮ್' ಎಂದು ಹೇಳಲಾಗುತ್ತದೆ. ಕಾರಣ ಏನೆಂದರೆ ತಲೆನೋವಿನ ಜತೆಗೆ ಮುಖದಲ್ಲಿ ಉರಿ, ಎದೆಭಾಗದಲ್ಲಿ ನೋವು, ಹೊಟ್ಟೆಯಲ್ಲಿ ತಳಮಳ.. ಇತ್ಯಾದಿಗಳನ್ನೂ ತರುತ್ತದೆ. ರಕ್ತನಾಳ ತಲೆನೋವನ್ನು ಎಂಎಸ್ಜಿ ಹೆಚ್ಚಿಸುತ್ತದೆ. 'ಕೆಲವರಲ್ಲಿ ಮೊನೊ ಸೋಡಿಯಂ ಗ್ಲುಟಾಮೇಟ್ ಸುಲಭವಾಗಿ ಜೀರ್ಣವಾಗುವುದಿಲ್ಲ. ಹೀಗಾಗಿ ಅದು ರಕ್ತನಾಳಗಳಲ್ಲಿ ಸಂಗ್ರಹಗೊಳ್ಳುತ್ತದೆ. ಅಲ್ಲಿ ರಾಸಾಯನಿಕ ಪ್ರತಿಕ್ರಿಯೆಗಳು ಉಂಟಾಗಿ, ಅದರ ಪರಿಣಾಮವಾಗಿ ತೀವ್ರ ಸ್ವರೂಪದ ತಲೆನೋವು ಕಾಣಿಸಿಕೊಳ್ಳುತ್ತದೆ' ಎನ್ನುತ್ತಾರೆ ಪಾಶ್ಚಾತ್ಯ ತಜ್ಞ ಡಾ. ಸಪೀರ್. ಬಹುತೇಕ ಎಲ್ಲ ರೀತಿಯ ಸಂಸ್ಕರಿತ ಆಹಾರಗಳಲ್ಲಿಯೂ ಎಂಎಸ್ಜಿ ಇರುತ್ತದೆ. ಆದರೆ ಯಾವ ಆಹಾರದ ಇನ್ಗ್ರೇಡಿಯಂಟ್ ಪಟ್ಟಿಯಲ್ಲೂ ಇವುಗಳ ಉಲ್ಲೇಖ ಇರುವುದಿಲ್ಲ. ನೀವು ಎಂಎಸ್ಜಿ ಸೆನ್ಸಿಟಿವ್ ಆಗಿದ್ದರೆ ಯಾವ ಸಂಸ್ಕರಿತ ಆಹಾರ ತಿಂದಾಗ ತಲೆನೋವು ಬರುತ್ತದೆ ಎನ್ನುವುದನ್ನು ಗಮನಿಸಿಕೊಂಡು, ಅಂತಹ ಆಹಾರಗಳ ಸೇವನೆ ಕಡಿಮೆ ಮಾಡಬೇಕು. ಹೈಡ್ರೋಲೈಸ್ಡ್ ವೆಜಿಟೆಬಲ್ ಪ್ರೊಟೀನ್ (ಎಚ್ವಿಪಿ), ಹೈಡ್ರೊಲೈಸ್ಡ್ ಪ್ಲಾಂಟ್ ಪ್ರೊಟೀನ್ (ಎಚ್ಪಿಪಿ) ಇರುವ ಆಹಾರಗಳಲ್ಲಿ ಎಂಎಸ್ಜಿ ಜಾಸ್ತಿ ಇರುತ್ತದೆ.
ರೆಡ್ವೈನ್ನಂತಹ ಕೆಲವು ಪೇಯಗಳು, ಸಸ್ಯಜನ್ಯವಲ್ಲದ ಆಹಾರಗಳ ಸೇವನೆಯಿಂದಲೂ ಕೆಲವರಿಗೆ ತಲೆನೋವು ಕಾಣಿಸಿಕೊಳ್ಳಬಹುದು. ಪದೇಪದೆ ತಲೆನೋವು ಕಾಣಿಸಿಕೊಳ್ಳುತ್ತದೆ ಅಂತಾದರೆ ಆಹಾರದ ವಿಚಾರದಲ್ಲಿ ಎಚ್ಚರವಹಿಸುವುದನ್ನು ಮರೆಯಬೇಡಿ.
(ಮುಂದುವರಿಯುವುದು)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್ಎಂಎಸ್ಗೆ ಮಾತ್ರ)
Advertisement