
ಕೆಲವು ಕಾಲಧರ್ಮಗಳಿರುತ್ತವೆ. ಅವುಗಳ ಕುರಿತು ಸರಿ ತಪ್ಪುಗಳ ನಿರ್ಧಾರಕ್ಕೆ ಬರಲಾಗುವುದಿಲ್ಲ. ವಾಸ್ತವವಾಗಿ ಸನ್ನಿವೇಶದ ಒತ್ತಡಕ್ಕೆ ಸಿಲುಕಿ ನಾವು ಏನೋ ಒಂದು ಮಾಡಿ ಬಿಟ್ಟಿರುತ್ತೇವೆ. ಹಾಗೇ ನೋಡಿದರೆ ಮೇಲ್ನೋಟಕ್ಕೆ ಅದು ತಪ್ಪೇ ಆಗಿರುತ್ತದೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದರೆ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಸರಿಯೇ ಆಗಿರುತ್ತದೆ. ಅದನ್ನೇ ಕಾಲ ಧರ್ಮವೆನ್ನುತ್ತೇವೆ. ಒಂದು ದೊಡ್ಡ ಅವಘಡ, ಅಘಟಿತ, ಅಪಾಯವನ್ನು ತಪ್ಪಿಸಲು ಒಂದು ಸಣ್ಣ ತಪ್ಪು ಮಾಡಿದರೆ, ಅಥವಾ ಸಣ್ಣದ್ದೊಂದು ಸುಳ್ಳನ್ನು ಹೇಳಿದರೆ ಅದು ಖಂಡಿತಾ ಅಪರಾಧವಾಗುವುದಿಲ್ಲ. ಹೌದು, ಕಠೋರ ಸತ್ಯವನ್ನು ಬಿಚ್ಚಿಡುವುದರಿಂದ ಒಂದು ಜೀವನವೇ ನಾಶವಾಗುವುದಾದರೆ, ಏನೇ ಆದರೂ ರಾಜಿಯಾಗುವುದೇ ಇಲ್ಲವೆಂಬ ಹಠಕ್ಕೆ ಬಿದ್ದು ಒಂದಿಡೀ ಬದುಕನ್ನೇ ಚಿತ್ರಹಿಂಸೆಗೊಡ್ಡಿಕೊಳ್ಳುವುದಾದರೆ ಅದು ಸರ್ವಥಾ ಧರ್ಮಸಮ್ಮತವೆನಿಸಿಕೊಳ್ಳುವುದಿಲ್ಲ. ವ್ಯಾವಹಾರಿಕ ದೃಷ್ಟಿಯಿಂದ, ಸ್ವಸ್ಥ ಸಮಾಜದ ಹಿತ ದೃಷ್ಟಿಯಿಂದಲೂ ಅದು ಶ್ಲಾಘನೀಯವೆನಿಸಿಕೊಳ್ಳುವುದಿಲ್ಲ. ಅದರ ಬದಲು ಒಳಿತಾಗುವುದಿದ್ದರೆ, ಒಂದು ಬದುಕು ಹಸನಾಗಿ ನಡೆದುಕೊಂಡು ಹೋಗುವುದಿದ್ದರೆ, ಒಂದು ದೊಡ್ಡ ಧರ್ಮ ಉಳಿಯುವುದಿದ್ದರೆ ಪುಟ್ಟ ಸುಳ್ಳನ್ನು ಹೇಳುವುದರಲ್ಲಿ ಯಾವ ತಪ್ಪೂ ಇಲ್ಲ. ಪುಟ್ಟ ತಪ್ಪನ್ನು ಮಾಡುವುದರಲ್ಲಿ ಯಾವ ಅಧರ್ಮವೂ ಇಲ್ಲ. ಆದರೆ ಇಲ್ಲಿ ಗಮನಾರ್ಹ ಸಂಗತಿಯೆಂದರೆ ನಮ್ಮ ಅಸತ್ಯದ ಹಿಂದಿನ ಉದ್ದೇಶ. ಸ್ವಾರ್ಥಕ್ಕೋಸ್ಕರ ಮಾಡುವ ಕೆಟ್ಟಕೆಲಸ, ಸುಳ್ಳು ಸಮರ್ಥನೀಯವಲ್ಲ.
Advertisement