
ವಾರಾಂತ್ಯದಲ್ಲಿ ಯಾವುದೇ ರೆಸ್ಟುರಾಗೆ ಹೋಗಿ ನೋಡಿ. ತುಂಬು ಫ್ಯಾಮಿಲಿಗಳು ಮೇಜಿನ ಮೇಲೆ ಇಡೀ ಇಡೀ ಪಿಜ್ಝಾಗಳನ್ನಿಟ್ಟುಕೊಂಡು ಸಂತೋಷವಾಗಿರುವುದು ಕಾಣುತ್ತದೆ. ಹತ್ತು ವರ್ಷಗಳ ಹಿಂದೆ ಸೀನಲ್ಲೇ ಇಲ್ಲದಿದ್ದ ಪಿಜ್ಝಾ ಇಂದು ಈ ಮಟ್ಟಕ್ಕೆ ಬೆಳೆದದ್ದಾದರೂ ಹೇಗೆ?
ಇಟಾಲಿಯನ್ ಖಾದ್ಯಗಳ ಗುಣವೇ ಅದು. ಭಾರತೀಯರ ಮನಸ್ಸು ಮತ್ತು ನಾಲಿಗೆ ರುಚಿಯನ್ನು ಗೆದ್ದು ನಾಗಾಲೋಟದಲ್ಲಿ ಜನಪ್ರಿಯತೆಯ ಶಿಖರಕ್ಕೆ ದಾಂಗುಡಿಯಿಡುತ್ತಿರುವ ಆಹಾರ ಪದ್ಧತಿಗಳ ಪೈಕಿ ಇಟಾಲಿಯನ್ ಖಾದ್ಯಗಳು ಪ್ರಮುಖ.
ಇಟಾಲಿಯನ್ ಫುಡ್ ವಯಸ್ಸಿನ ಅಂತರವಿಲ್ಲದೆ ಎಲ್ಲರಿಗೂ ಇಷ್ಟ. ಮಕ್ಕಳಿಂದ ಮೊದಲ್ಗೊಂಡು ಹಿರಿಯರವರೆಗೂ ಬಾಯಿ ಚಪ್ಪರಿಸಬಹುದಾದ ಪಾಸ್ತಾ-ಪಿಜ್ಜಾಗಳು. ನೋಡಲು ಆಕರ್ಷಣೀಯ. ರುಚಿ ಕೂಡ ಮೈ ನವಿರೇಳಿಸುವಂಥದ್ದು. ಇಟಾಲಿಯನ್ ಆಹಾರ ಪದ್ಧತಿಯಲ್ಲಿ ಹೆಚ್ಚು ತರಕಾರಿ, ಹಣ್ಣು-ಹಂಪಲು, ಆಲಿವ್ ಎಣ್ಣೆ ಬಳಸುತ್ತಾರೆ. ಆರೋಗ್ಯಕ್ಕೂ ಇದು ಒಳ್ಳೆಯದು. ಇಟಾಲಿಯನ್ ಆಹಾರ ಪದ್ಧತಿ ನಾಲಿಗೆಗೂ ರುಚಿ, ನೋಡಲು ಆಕರ್ಷಣೀಯ ಹಾಗೂ ಜೀರ್ಣಕ್ರಿಯೆಯೂ ಸರಾಗ. ಆರೋಗ್ಯ ರಕ್ಷಣೆಯೂ ಸಲೀಸು.
ಕೆಲವೊಮ್ಮೆ ಇಟಾಲಿಯನ್ ಆಹಾರ ತನ್ನ ಕಲರ್‌ಫುಲ್ ಡೆಕೋರೆಷನ್, ಪ್ರಸೆಂಟೇಶನ್‌ಗಳಿಂದ ಆಕರ್ಷಿಸುತ್ತವೆಯೋ ಅಥವಾ ರುಚಿಯಿಂದ ಸೆಳೆಯುತ್ತದೆಯೋ ಎಂಬ ಅನುಮಾನವೂ ಕಾಡುತ್ತದೆ. ಆದರೆ ಇಟಾಲಿಯನ್ ಖಾದ್ಯಗಳಲ್ಲಿರುವ ಪೌಷ್ಟಿಕಾಂಶಗಳು, ಪ್ರೊಟೀನ್ ಅಂಶಗಳು, ಗೋಧಿ ಬಾರ್ಲಿಯಿಂದ ತಯಾರಿಸಿದ ಪಾಸ್ತಾಗಳು ನಮ್ಮ ಆರೋಗ್ಯ ಸಮತೋಲದಲ್ಲಿ ಇರಿಸಲು ನೆರವಾಗುತ್ತದೆ. ಇಟಾಲಿಯನ್ ಆಹಾರದಲ್ಲಿ ಚೀಸ್, ಸಾಸ್, ಮೀಟ್‌ಬಾಲ್, ಬ್ರಾಕೊಲಿ, ಮೀನು ಮುಂತಾದವುಗಳನ್ನು ಬಳಸುತ್ತಾರೆ.
ನಾವಿಂದು ಆಸೆಪಟ್ಟುಕೊಂಡು ತಿನ್ನುವ ಪಿಜ್ಝಾ ಕೂಡ ಇಟಲಿಯದೇ. ಮೂಲ ಪಿಜ್ಝಾ ಈಜಿಪ್ಟ್ ಅಥವಾ ಗ್ರೀಸ್‌ನದಾದದರೂ, ಅದಕ್ಕೆ ಹೆಚ್ಚಿನ ಗುಣಾಂಶಗಳನ್ನು ಸೇರಿಸಿ ಇಂದಿನ ರುಚಿಕರ ರೂಪಕ್ಕೆ ತಂದವರು ಇಟಾಲಿಯನ್ನರೇ.
ಇಟಾಲಿಯನ್ ಪಾಕ ಪದ್ಧತಿ
ಇಟಾಲಿಯನ್ ಆಹಾರ ಪದ್ಧತಿಗೆ ಶತಮಾನಗಳ ಇತಿಹಾಸವಿದೆ. ಇಲ್ಲಿನ ಆಹಾರ ಪದ್ದತಿಯ ಮೂಲ ಕ್ರಿ.ಪೂ.ನಾಲ್ಕನೆಯ ಶತಮಾನದಷ್ಟು ಹಿಂದಿನದು. ನೆರೆ ವಲಯಗಳು, ಯುದ್ಧ ವಿಜೇತರು, ಅತಿ ಪ್ರಮುಖ ಅಡುಗೆಯವರು, ರಾಜಕೀಯ ವಿಪ್ಲವಗಳು ಹಾಗೂ ನೂತನ ಪ್ರಪಂಚದ ಪರಿಶೋಧನೆಯು, ಇಟಾಲಿಯನ್ ಪಾಕ ಪದ್ಧತಿಯ ಮೇಲೆ ಪ್ರಭಾವ ಬೀರಿದೆ.
ಆರ್ಕೆಸ್ಟ್ರಟಸ್ ಎಂಬ ಸೈರಾಕ್ಯೂಸ್ ಮೂಲದ ಗ್ರೀಕ್ ಸಿಸಿಲಿಯನ್ ವ್ಯಕ್ತಿ ಮೊಟ್ಟಮೊದಲ ಇಟಾಲಿಯನ್ ಪಾಕಶಾಸ್ತ್ರ ಬರಹಗಾರನಾಗಿದ್ದ ಎಂಬುದಕ್ಕೆ ದಾಖಲೆಗಳು ಸಿಗುತ್ತವೆ. ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಲ್ಲಿ ಈತ ಉತ್ತಮ ಗುಣಮಟ್ಟದ ಹಾಗೂ ಋತುವಾರು ಅಂಶಗಳನ್ನು ಆಧರಿಸಿ ಭಕ್ಷ್ಯ ತಯಾರಿಕೆ ಕುರಿತು ಕವನ ರಚಿಸಿದ್ದ.
ಮಧ್ಯಕಾಲೀನ ಯುಗದಲ್ಲಿ ರೋಮ್ ಮತ್ತು ಅಥೆನ್ಸ್‌ನಿಂದ ಬಂದ ಅಡುಗೆಯ ಸಂಪ್ರದಾಯಗಳನ್ನು ಒಳಗೊಂಡ, ಸಿಸಿಲಿಯಲ್ಲಿ ಅಭಿವೃದ್ಧಿಗೊಳಿಸಿದ ಪಾಕಪದ್ಧತಿಯನ್ನು ಮೊಟ್ಟಮೊದಲ ನೈಜ ಇಟಾಲಿಯನ್ ಪಾಕ ಪದ್ಧತಿ ಎಂದು ಕರೆಯಲಾಯಿತು. ಉತ್ತರ ಇಟಾಲಿಯನ್ ವಲಯಗಳಲ್ಲಿ ಜರ್ಮನ್ ಹಾಗೂ ರೋಮನ್ ಸಂಸ್ಕೃತಿಗಳ ಮಿಶ್ರಣವನ್ನು ಕಾಣಬಹುದು. ದಕ್ಷಿಣ ವಲಯದಲ್ಲಿ ಅರಬ್ ವಾಣಿಜ್ಯ ಚಟುವಟಿಕೆಗಳಿಂದಾಗಿ ಮೆಡಿಟರೇನಿಯನ್ ಪಾಕಪದ್ಧತಿ ಸಹ ವ್ಯಾಪಕವಾಯಿತು. ಫ್ಲಾರೆನ್ಸ್, ರೋಮ್, ವೆನಿಸ್ ಮತ್ತು ಫೆರರಾದ ಆಸ್ಥಾನಗಳು ಈ ಪಾಕ ಪದ್ಧತಿಗೆ ಕೇಂದ್ರವಾಗಿದ್ದವು.
ಹದಿನೆಂಟನೆಯ ಶತಮಾನದಲ್ಲಿ, ಇಟಾಲಿಯನ್ ಅಡುಗೆ ಪುಸ್ತಕಗಳಲ್ಲಿ ಫ್ರೆಂಚ್ ಪಾಕ ಪದ್ಧತಿಗಳ ಬದಲಿಗೆ ಇಟಲಿಯದೇ ಪಾಕಪದ್ಧತಿಗಳಿಗೆ ಪ್ರಾಮುಖ್ಯ ದೊರೆಯಲಾರಂಭಿಸಿತು. 19ನೇ ಶತಮಾನದಲ್ಲಿ ದೊರೆ ವಿಕ್ಟರ್ ಇಮ್ಯಾನುಯಲ್‌ನ ಬಾಣಸಿಗ ಗಿಯೊವಾನಿ ವಿಯಲಾರ್ಡಿ ಬರೆದ 'ಎ ಟ್ರೈಟೈಸ್ ಆಫ್ ಮಾಡರ್ನ್ ಕುಕರಿ ಅಂಡ್ ಪ್ಯಾಟಿಸರಿ' ಎಂಬ ಪಾಕಪುಸ್ತಕ ಜನಸಾಮಾನ್ಯರಿಗೂ ಇಷ್ಟವಾಯ್ತು.
-ಲೀಲಾವತಿ ಶ್ರೀನಿವಾಸ್
Advertisement