'ಚಿಟ್ಟಿ ಆಯಿರೆ... ಚಿಟ್ಟಿ ಆಯಿರೆ' ಎನ್ನುವ ಆ ಹಾಡು ತೇಲಿಬರುತ್ತಿದ್ದರೆ ಇವತ್ತಿಗೂ ಮನದಲ್ಲಿ ರಿಂಗಣವೇಳುತ್ತದೆ. ಆದರೆ ಆ ಚಿಟ್ಟಿ ಸಂಸ್ಕೃತಿಗೆ ಚಿಟ್ಟಿ ಕೊಟ್ಟಾಗಿದೆ. ಮನದ ಕಾಮನಬಿಲ್ಲು ಕಮಾನುಕಟ್ಟುವ ಆ ಪತ್ರಗಳು ಇಂದು ಅಂಚೆಯಣ್ಣನಿಗೆ ವಿದಾಯ ಹೇಳಿವೆ. ಪೋಸ್ಟ್ ಅಂತ ಅಂಚೆಯಣ್ಣ ಅಂಗಳಕ್ಕೆ ಬಂದರೆ ಜಗಳ ಕಾದು ಪತ್ರ ಓದುವ ಗಮ್ಮತ್ತು ಇಂದಿನ ಇ-ಮೇಲ್, ಫೋನ್‌ಗಳಿಗೆ ಸಾಧ್ಯವಿಲ್ಲ ಬಿಡಿ. ಯಾರಿಗೆ ಹೇಗೆ ಸಂಬೋಧನೆ ಮಾಡಿ ಪತ್ರ ಬರೆಯಬೇಕು ಎಂಬುದೇ ಇಂದಿನ ಮಕ್ಕಳಿಗೆ ಗೊತ್ತಿಲ್ಲ.
ಜಯಶ್ರೀ ಭಂಡಾರಿ, ಬಾದಾಮಿ
ನೆಮ್ಮದಿ ನೀಡುವ ಪತ್ರಗಳು
ಪತ್ರಗಳು ಸ್ನೇಹ-ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿದ್ದವು. ಆದರೆ ಇಂದಿನ ಮೊಬೈಲ್, ಇ- ಮೇಲ್‌ಗಳ ನಡುವೆ ಪತ್ರಗಳು ದೂರ ಸರಿದಿವೆ. ಮೊಬೈಲ್‌ನಲ್ಲಿ ಸಂದೇಶಗಳು ಆ ಕ್ಷಣಕ್ಕೆ ಮಾತ್ರ ಸೀಮಿತ. ಆದರೆ ಪತ್ರಗಳನ್ನು ಎಷ್ಟು ವರ್ಷಗಳಾದರೂ ಜೋಪಾನವಾಗಿಡಬಹುದು. ಬೇಕೆನಿಸಿದಾಗ ಮತ್ತೆ ಮತ್ತೆ ಓದಬಹುದು. ಕೈಬರಹದಲ್ಲಿ ಬರೆಯುವ ಪತ್ರದಲ್ಲಿ ನಮ್ಮ ಭಾವನೆಗಳನ್ನು ಅಕ್ಷರ ರೂಪದಲ್ಲಿ ಸರಾಗವಾಗಿ ಬರೆಯುವ ಮೂಲಕ ನಮ್ಮ ಮನಸ್ಸು ಹಗುರಾಗುವುದಲ್ಲದೆ ನಮ್ಮ ಭಾವನೆಗಳನ್ನು ಮತ್ತೊಬ್ಬರಿಗೆ ಸ್ಪಷ್ಟವಾಗಿ ತಿಳಿಸಬಹುದು.
ವಿದ್ಯಾ. ಎಚ್. ಪಿ., ಹಳೆಹರ್ಲಾಪುರ, ಹರಿಹರ
ದೂರವಾದ ಕೈಬರಹ
ನಾನು ಐದನೇ ತರಗತಿಯಲ್ಲಿದ್ದಾಗಲೇ ಆಕಾಶವಾಣಿ ಧಾರವಾಡ ಕೇಂದ್ರದ ಅಭಿಲಾಷೆ ಕಾರ್ಯಕ್ರಮದಲ್ಲಿ ನಾನು ಬರೆದ 25 ಪೈಸೆಯ ಅಂಚೆ ಪತ್ರವನ್ನು ಓದಿದ್ದೆ. ಅದರಿಂದ ಶಾಲೆಯಲ್ಲಿ ನನಗೆ ವಿಶೇಷ ಗೌರವ ಸಿಕ್ಕಿದ್ದು ನನ್ನ ಬಾಲ್ಯದ ಅವಿಸ್ಮರಣೀಯ ಕ್ಷಣ. ಅಲ್ಲಿಂದ ಶುರುವಾದ ಕೈಬರಹದ ಪತ್ರ ಪತ್ರಿಕೆಗಳಿಗೆ ಕಳುಹಿಸುವವರೆಗೆ ಬಂದಿದೆ. ಆದರೆ ಪತ್ರಿಕೆಗಳಿಗೆ ಬರಹವನ್ನು ಇ-ಅಂಚೆಯ ಮೂಲಕ ಕಳುಹಿಸುತ್ತಿರುವ ಅನಿವಾರ್ಯತೆಗೆ ವಿಷಾದ ವ್ಯಕ್ತಪಡಿಸದೇ ಇರಲು ಸಾಧ್ಯವೇ? ಒಟ್ಟಿನಲ್ಲಿ ಧಾವಂತದ ಇಂದಿನ ದಿನಗಳಲ್ಲಿ ಕೈಬರಹದ ಪತ್ರಗಳು ಅನಿವಾರ್ಯ ಸಂದರ್ಭಕ್ಕೆ ಸೀಮಿತವಾಗಿರುವುದು ಕಟುವಾಸ್ತವ.
ಅಶೋಕ. ವಿ. ಬಳ್ಳಾ, ಸೂಳೇಭಾವಿ
ಫೋನ್ ಮತ್ತು ಈಮೇಲ್‌ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com
Advertisement