
ಭಾಗ 28
ಈ ಪದವನ್ನು ಮಾನಸಿಕ ಶಾಸ್ತ್ರಜ್ಞರು ಹಿಂದಿನ ಶತಮಾನದಲ್ಲಿ ಪರಿಚಯ ಮಾಡಿದ್ದಾರೆ. ಎಮೋಷನ್ಗಳಿಗೆ ನಾವು ಪ್ರತಿಸ್ಪಂದಿಸುವ ವಿಧಾನ, ಇತರರ ಮೇಲೆ ನಮ್ಮ ಎಮೋಷನ್ಸ್ ತೋರಿಸುವ ಪ್ರಭಾವವನ್ನು ಅರ್ಥ ಮಾಡಿಕೊಳ್ಳಬಲ್ಲ ನೈಪುಣ್ಯ.. ಎಲ್ಲವನ್ನೂ ಬೆರೆಸಿದರೆ ಇ.ಕ್ಯೂ. ಇದನ್ನು ಎಷ್ಟು ಬೇಗ ಡೆವಲಪ್ ಮಾಡಿಕೊಂಡರೆ, ಜೀವನ ಪ್ರಯಾಣ ನಯವಾಗಿ ಸಾಗುತ್ತದೆ. ಇ.ಕ್ಯೂ.ನಲ್ಲಿ ಈ ಕೆಳಗಿನ ಅಂಶಗಳು ಮಿಳಿತವಾಗಿರುತ್ತವೆ.
ಸ್ವಯಂ ಪ್ರಜ್ಞೆ
ನೀವು ಬಹಳ ಎಚ್ಚರಿಕೆಯಿಂದ ಡ್ರೈವ್ ಮಾಡುತ್ತೀರಿ. ಆದರೆ ಒಬ್ಬ ರಾಂಗ್ ರೂಟ್ನಲ್ಲಿ ರಾಕೆಟ್ನಂತೆ ಬಂದು ನಿಮ್ಮ ವಾಹನಕ್ಕೆ ಡಿಕ್ಕಿ ಹೊಡೆಯುತ್ತಾನೆ. ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಗಂಟಲು ಕಿತ್ತುಹೋಗುವಂತೆ ವಾದಿಸುವಿರಾ? ತಪ್ಪು ಮಾಡಿ ಗೊಡ್ಡು ವಾದ ಮಾಡುತ್ತಿರುವ ಅವನನ್ನು, ಆವೇಶವನ್ನು ತಡೆದುಕೊಳ್ಳಲಾಗದೇ ಅವನ ಕಾಲರ್ ಹಿಡಿದುಕೊಂಡು ಹೊಡೆಯುವಿರಾ? ತಪ್ಪು ಅವನದೇ ಆದರೂ, ಸುತ್ತಲೂ ಇರುವವರ ನೋಟಗಳನ್ನು ಸಹಿಸಲಾಗದೇ ನೀವೇ ಹಣ ನೀಡಿ ಪೀಡೆ ಕಳೆಯಿತೆಂದುಕೊಂಡು ಅಲ್ಲಿಂದ ಅವಸರದಲ್ಲಿ ಹೊರಟುಬಿಡುವ ಪ್ರಯತ್ನ ಮಾಡುವಿರಾ? ವಾಗ್ವಾದದಿಂದ ಪ್ರಯೋಜನವಿಲ್ಲವೆಂದು ತಿಳಿದಿದೆಯಾದ್ದರಿಂದ ಬಾಯ್ಮುಚ್ಚಿಕೊಂಡು ವೆಹಿಕಲ್ ಸ್ಪಾಟ್ ಮಾಡಿಕೊಂಡು ಹೊರಟುಹೋಗುವಿರಾ? ಸೊಟ್ಟಗಾದ ವಾಹನವನ್ನು ನೆನೆಸಿಕೊಂಡು ರಾತ್ರಿಯೆಲ್ಲಾ ನಿದ್ರೆ ಮಾಡದೇ ಇರುವಿರಾ? ದುರಸ್ತಿಯ ಖರ್ಚೇನೂ ಇಲ್ಲದಿದ್ದರೂ ನಡೆದ ಘಟನೆಯಿಂದಾಗಿ ದಿನವೆಲ್ಲಾ ಮೂಡ್ ಹಾಳು ಮಾಡಿಕೊಳ್ಳುವಿರಾ? ಆ ಕಿರಿಕಿರಿಯನ್ನು ಮನೆಯವರ ಮೇಲೆ ತೋರಿಸುತ್ತೀರಾ? ಆಗಾಗ ಜೀವನ ವಿಧಾನವನ್ನು ವಿಶ್ಲೇಷಿಸಿಕೊಳ್ಳುತ್ತಿರುವುದೇ ಸ್ವಯಂ ಪ್ರಜ್ಞೆ.
ತಾರ್ಕಿಕ ಆಲೋಚನೆ
ಯಾವುದೋ ಮೂಲೆಯಲ್ಲಿರುವ ಪ್ರಾಂತ್ಯದಲ್ಲಿನ ಬೆಟ್ಟದ ಮೇಲಿನ ಗುಡಿಗೆ ಹೋಗುತ್ತೀರಿ. ಗುಡಿಯಲ್ಲಿ ಕಿರುಬೆರಳು ಮುರಿದುಹೋಗಿರುವ ದೇವನ ವಿಗ್ರಹವಿದೆ. ಅಲ್ಲಿನ ಪೂಜಾರಿ, ವಿಷ್ಣುವಿಗೂ, ಗರುತ್ಮಂತನಿಗೂ ನಡುವೆ ನಡೆದ ಯುದ್ಧದಲ್ಲಿ ಆ ಪಕ್ಷಿರಾಜ ದೇವದೇವನ ಕಿರುಬೆರಳನ್ನು ತನ್ನ ಕೊಕ್ಕಿನಿಂದ ಕಿತ್ತುಬಿಟ್ಟನೆಂದೂ, ಆ ವಿಷ್ಣುವೇ ಇಲ್ಲಿ ಬಂದು ನೆಲೆಸಿರುವನೆಂದೂ.. ಒಂದು ಸ್ಥಳ ಪುರಾಣ ಹೇಳುತ್ತಾನೆ. ನಂಬಿದರೆ ಮನಸ್ಫೂರ್ತಿಯಾಗಿ ಸಾಷ್ಟಾಂಗ ನಮಸ್ಕಾರ ಮಾಡಿರಿ. ಇಲ್ಲವೇ, ಹಾಳು ಬಿದ್ದು ಶಿಥಿಲಾವಸ್ಥೆಯಲ್ಲಿರುವ ಗುಡಿಯಲ್ಲಿ ಭಕ್ತರ ದಕ್ಷಿಣೆಗಾಗಿ ಪೂಜಾರಿ ಪಡುವ ಸ್ಟ್ರಗಲ್ ಫಾರ್ ಎಗ್ಸಿಸ್ಟನ್ಸ್ಗೆ ಮರುಕ ತೋರಿ ಸಹಾಯ ಮಾಡಿ.
ನಮ್ಮ ಆಲೋಚನೆಗಳನ್ನು, ಎಮೋಷನ್ನುಗಳನ್ನು ಬಿಗಿ-ಸಡಿಲ ಗೊಳಿಸುತ್ತಾ, ನಿರ್ಮಾಣಾತ್ಮಕವಾದ ವಿಧಾನದಲ್ಲಿ ಬಲವಾಗಿ ನಿರ್ಮಿಸಿಕೊಳ್ಳಬಲ್ಲುದೇ ತರ್ಕ. ಗರುಡ ತನ್ನ ಮಾಲೀಕನ ಬೆರಳು ಹೇಗೆ ಕಿತ್ತುಹಾಕಿದನೆಂದು ಆಲೋಚಿಸುವುದು ತರ್ಕ. ಬದುಕಿನ ದಾರಿಗಾಗಿ ಕಥೆಗಳನ್ನು ಹೇಳುತ್ತಿರುವ ಪೂಜಾರಿಯೊಂದಿಗೆ ಅನಗತ್ಯವಾಗಿ ವಾದಿಸದೇ ಇರುವುದು ಎಮೋಷನಲ್ ಬ್ಯಾಲೆನ್ಸ್. ನೀರಿನಲ್ಲಿ ಬಿದ್ದುಹೋದ ಆ ಒಂದು ಅಂಗುಲ ಪ್ರಮಾಣದ ಕಿರುಬೆರಳನ್ನು ನೂರು ರುಪಾಯಿಗಳನ್ನಿತ್ತರೆ ತೋರಿಸುವೆನೆಂದೂ, ಆ ಬೆರಳನ್ನು ದರ್ಶನ ಮಾಡುವುದರಿಂದ ನಿಮ್ಮ ಮಗ ಎಲ್.ಕೆ.ಜಿ.ಯನ್ನು ಫಸ್ಟ್ಕ್ಲಾಸ್ನಲ್ಲಿ ಪಾಸ್ ಮಾಡುವನೆಂದೂ ಯಾರಾದರೂ ಹೇಳಿದರೆ ಅವನೊಂದಿಗೆ ಸೇರಿ ಆ ಕಲ್ಲಿನ ಚೂರು ನೋಡುವುದಕ್ಕಾಗಿ ಪಾಚಿ ಕಟ್ಟಿದ ಆ ನೀರಿನ ನಡುವೆ ಹೋಗುವುದು ಮೂರ್ಖತನ.
ಸ್ವಯಂ ನಿರ್ದೇಶನ
ಅವಲಂಬಿಸಲು, ಅಳಲು ಯಾವಾಗ ಯಾವ ಹೆಗಲು ಸಿಗುವುದೋ ಎಂದು ಹುಡುಕುತ್ತಿರುವುದು ಎಮೋಷನಲ್ ಡಿಪೆಂಡೆನ್ಸಿ. ಚಿಕ್ಕ ಚಿಕ್ಕ ವಿಷಯಗಳಿಗೇ ಆವೇಶಗೊಳ್ಳುವುದು, ಬೈಯುವುದು, ವ್ಯಂಗ್ಯವಾಗಿ, ಕೋಪದಿಂದ, ಇರಿಟೇಟಿಂಗ್ ಆಗಿ ಉತ್ತರಿಸುವುದು ಎಮೋಷನಲ್ ಇಂಬ್ಯಾಲೆನ್ಸ್. ಯಾರಾದರೂ ಅಕಸ್ಮಾತ್ತಾಗಿ ರಾಂಗ್ಕಾಲ್ ಮಾಡಿದಾಗ ಮೂದಲಿಕೆಯ ಉತ್ತರ ಹೇಳಿ ಫೋನ್ ಕಟ್ ಮಾಡುವುದು ಮಾನಸಿಕ ರೋಗ. ಅಕಾರಣವಾದ ಭಾವೋದ್ವೇಗವನ್ನು ನಿಯಂತ್ರಿಸಿಕೊಳ್ಳುತ್ತಾ, ಸೆಲ್ಪ್-ಡೈರೆಕ್ಷನ್ ಮೇಲೆ ಹಿಡಿತವನ್ನು ಗಳಿಸುವುದು ವಿಜೇತರ ಮುಖ್ಯಲಕ್ಷಣ. ಇದನ್ನು ಇಂಪಲ್ಸ್ ಕಂಟ್ರೋಲ್ ಎನ್ನುತ್ತಾರೆ.
ಆತ್ಮ ಗೌರವ
ನಿನ್ನ ಅನುಮತಿಯಿಲ್ಲದೇ ನಿನ್ನನ್ನು ಯಾರೂ ಕೀಳಾಗಿ ಕಾಣಲಾರರು ಎನ್ನುತ್ತಾರೆ ಬಾಲ್ಯದಲ್ಲಿಯೇ ಪೋಲಿಯೋದಿಂದ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದ ಅಮೆರಿಕದ ಅಧ್ಯಕ್ಷ ರೂಸ್ವೆಲ್ಟ್ಟ್. ಮನುಷ್ಯನಿಗೆ ಒಂದು ಕಡೆ ಆತ್ಮವಿಮರ್ಶೆ, ಮತ್ತೊಂದೆಡೆ ಆತ್ಮಗೌರವ ಎರಡೂ ಇರಬೇಕು. ಕೋಪ, ದು:ಖ, ಅಸಂತೃಪ್ತಿಯಂತಹ ಬದಲಾಯಿಸಿ ಕೊಳ್ಳಬಹುದಾದ ದುರ್ಲಕ್ಷಣಗಳನ್ನು ಬದಲಾಯಿಸಿಕೊಳ್ಳಬೇಕು. ಅದು ಆತ್ಮವಿಮರ್ಶೆ. ಕಪ್ಪು ಮೈಬಣ್ಣ, ಬಕ್ಕತಲೆ, ಕುಳ್ಳು, ಉಗ್ಗುವಿನಂತಹ ಮಾರ್ಪಡಿಸಿಕೊಳ್ಳಲಾಗದ ವೈಕಲ್ಯಗಳನ್ನು ಮರೆತುಬಿಡಬೇಕು. ಅದು ಆತ್ಮಗೌರವ. ಆದರೂ ನಮ್ಮಲ್ಲಿ ಬಹಳ ಜನ ಮಾರ್ಪಡಿಸಿಕೊಳ್ಳಬಹುದಾದುದನ್ನು ಬಿಟ್ಟು, ಬದಲಾಯಿಸಲಾಗದವುಗಳ ಬಗ್ಗೆ ಹೆಚ್ಚು ದು:ಖಿಸುತ್ತೇವೆ.
ಇ.ಕ್ಯೂ. (ಎಮೋಷನಲ್ ಕೋಷೆಂಟ್)ಗೆ ಸಂಬಂಧಿಸಿದ ಮತ್ತಷ್ಟು ಅಂಶಗಳು.
1. ಇತರರನ್ನು ಅವರ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುವುದು. 2. ಇರುವಷ್ಟರಲ್ಲಿಯೇ ಸಹಾಯ ಮಾಡುವುದು 3. ಸಂಬಂಧ ಬಾಂಧವ್ಯಗಳನ್ನು ಬಲವಾಗಿ ನಿರ್ಮಿಸಿಕೊಳ್ಳುವುದು. 4. ತನ್ನ ಕನ್ನಡಕದಿಂದಲ್ಲದೇ, ಇರುವ ವಿಷಯವನ್ನು ಇರುವಂತೆಯೇ ನೋಡಬಲ್ಲವರಾಗುವುದು (ಬಹಳ ಕಷ್ಟವಾದ ಪ್ರಕ್ರಿಯೆ ಇದು) 5. ಹೊಸ ವಿಷಯಗಳನ್ನು ತಕ್ಷಣವೇ ನಿರಾಕರಿಸದೇ, ಶೋಧಿಸುವ ಕುತೂಹಲ. 6. ಎಲ್ಲಕ್ಕಿಂತ ಮುಖ್ಯವಾಗಿ .. ತನ್ನ ಜೀವನ ವಿಧಾನದ ಬಗ್ಗೆ ಅತಿಕ್ರಮಿಸಬಲ್ಲ ದೂರುಗಳು ಏನೂ ಇಲ್ಲದಿರುವುದು. ಇ.ಕ್ಯೂ. ಹೆಚ್ಚಾದಷ್ಟೂ ಸಂಬಂಧಗಳು ಹೊಳಪು ಪಡೆಯುತ್ತವೆ. ಮೆಸೋಚಿಸಂ (ಆತ್ಮಪೀಡನೆ), ಸ್ಯಾಡಿಸಂ (ಹಿಂಸಾನಂದ)- ಇಂತಹ ರೋಗಗಳು ಕಡಿಮೆಯಾಗಿಬಿಡುತ್ತವೆ.
ಕೋಳಿ ಜಗಳವನ್ನು ಇಷ್ಟಪಡುವ ಮನುಷ್ಯರು
ರೈಲಿನ ಕೂಪೆಯಲ್ಲಿ ಇಬ್ಬರೇ ಇದ್ದೆವು. ನನ್ನ ಎದುರಿಗೆ ಕುಳಿತಿದ್ದ ಒಬ್ಬ ನಟ ಇತ್ತೀಚೆಗೆ ತಾನು ನಟಿಸಿದ ಸಿನಿಮಾದಲ್ಲಿನ ಹೀರೋನ ಹಿರಿಮೆ, ಮಾನವತೆ ಇತ್ಯಾದಿಗಳ ಬಗ್ಗೆ ಸಿಕ್ಕಾಪಟ್ಟೆ ಹೊಗಳುತ್ತಿದ್ದ. ಆ ವಿಷಯವನ್ನೇ ಎತ್ತಬಾರದೆಂದುಕೊಂಡಿದ್ದೆ, ಆದರೂ ಅವನು ಆ ಹೀರೋನನ್ನು ಆಕಾಶಕ್ಕೇ ಎತ್ತುತ್ತಾ ಇದ್ದಿದ್ದರಿಂದ ಟಿವಿ ಛಾನೆಲ್ಗಳಲ್ಲಿ ಮೊದಲು ಹೀರೋಗಳನ್ನು ಹೊಗಳುವುದು ಹೇಗೂ ತಪ್ಪುವುದಿಲ್ಲ. ನಾವಿಬ್ಬರೇ ಇದ್ದಾಗಲಾದರೂ ನಿಯತ್ತಿನಿಂದ ಮಾತಾಡಿಕೊಳ್ಳಬಹುದಲ್ಲವಾ ಎಂದೆ. ಅದರಿಂದ ಅಲ್ಲಿನ ಗಾಳಿಯಲ್ಲಿ ಹಠಾತ್ತನೆ ಮಾರ್ಪಾಡಾಗುತ್ತಿತ್ತು.
ನೀನು ಹೇಳುತ್ತಿರುವ ವ್ಯಕ್ತಿಯ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಇಷ್ಟವಿಲ್ಲದಿದ್ದರೆ ಹೇಳುವುದನ್ನು ಬಿಟ್ಟುಬಿಡು. ಅದು ಬಿಟ್ಟು ಮಾನವತೆ, ಒಳ್ಳೆಯತನದಂತಹ ಮಾತುಗಳನ್ನು ಬಳಸಬೇಡ. ಆ ನಟ ನಿನಗೆ ವಿದೇಶದ ಲೊಕೇಷನ್ನಲ್ಲಿ ಆಕಾಶ ತೋರಿಸಿದನಂತೆ ಅಲ್ಲವಾ?
ಅವನು ಬಲಹೀನವಾದ ದನಿಯಲ್ಲಿ ಹೌದು ಎಂದ. ..ರೂಂ ಖಾಲಿ ಮಾಡುವಾಗ ನನ್ನ ಸೂಟ್ಕೇಸ್ನಲ್ಲಿ ಹೋಟೆಲ್ ಟವೆಲ್ ಬಚ್ಚಿಟ್ಟು, ಸೆಕ್ಯೂರಿಟಿಗೆ ಫೋನ್ ಮಾಡಿ ಹೇಳಿದ. ಅವರು ರಿಸೆಪ್ಷನ್ ಹತ್ತಿರ ನನ್ನ ಪೆಟ್ಟಿಗೆ ಹುಡುಕಿದಾಗ ಅದು ಹೊರಬಿದ್ದಿತು. ಆ ಕ್ಷಣದಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನಿಸಿತ್ತು. ಅವನಿಗೆ, ಅವನ ಚಮಚಾಗಳಿಗೆ ಮಾತ್ರ ಅದೊಂದು ದೊಡ್ಡ ಕಾಮಿಡಿ ಎಂದು ಹೇಳಿದ ಆ ಯುವನಟನ ಸ್ವರದಲ್ಲಿ ದು:ಖದ ತೆರೆ ಕದಲಾಡಿತ್ತು.
ಎದುರಿಗಿನ ಮನುಷ್ಯನ ದು:ಖದಲ್ಲಿ ತನ್ನ ಆನಂದವನ್ನು ಹುಡುಕಿಕೊಳ್ಳುವವನನ್ನು ಸ್ಯಾಡಿಸ್ಟ್ ಎನ್ನುತ್ತಾರೆ. ತನ್ನ ಮೇಲೆ ತಿರುಗಿ ಬೀಳಲಾಗದ ಮನುಷ್ಯನನ್ನು, ಪ್ರಾಣಿಯನ್ನು, ದುಂಬಿಯಂತಹ ಕೀಟಗಳನ್ನು ಹಿಂಸಿಸುವುದನ್ನು ಸ್ಯಾಡಿಸಂ ಎನ್ನುತ್ತಾರೆ. ಸ್ಯಾಡಿಸಂ ಅನ್ನು ಸೈಕಾಲಜಿಯಲ್ಲಿ ಸ್ಟ್ರೆಸ್-ರಿಲೀಜರ್ ಎಂದು ಭಾವಿಸುತ್ತಾರೆ. ತನ್ನ ಅಧಿಕಾರವನ್ನು ಪ್ರದರ್ಶಿಸಲು, ಇಲ್ಲವೇ ಬದುಕಿನ ಅಸಂತೃಪ್ತಿಯಿಂದ ಹೊರಬೀಳಲು ಮನುಷ್ಯ ಅನೇಕ ಹಾದಿಗಳನ್ನು ಹುಡುಕಿಕೊಳ್ಳುತ್ತಾನೆ. ಆದರೂ ಸ್ಯಾಡಿಸಂ ಎಲ್ಲಕ್ಕಿಂತ ಭಯಂಕರವಾದ ಎಸ್ಕೇಪ್ ರೂಟ್.
ಆಕ್ಸಿಡೆಂಟ್ ಮಾಡಿಕೊಂಡ ಇಬ್ಬರು ವ್ಯಕ್ತಿಗಳು ಜೋರಾಗಿ ಹೊಡೆದಾಡುತ್ತಿದ್ದಾರೆಂದುಕೊಳ್ಳಿ. ಸುತ್ತಲೂ ಇರುವವರು ಬಹಳ ಆಸಕ್ತಿಯಿಂದ ನೋಡುತ್ತಿರುತ್ತಾರೆ. ಒಬ್ಬರಿಗೊಬ್ಬರು ಏಟು ಹಾಕುತ್ತಾ ಅವರು ಮೋರಿಯಲ್ಲಿ ಬಿದ್ದರೆಂದುಕೊಳ್ಳಿ. ಮತ್ತಷ್ಟು ವಿನೋದಕರವಾಗಿರುತ್ತದೆ. ಅದರ ಬದಲು ಅವರಿಬ್ಬರೂ, ನನ್ನದೇ ತಪ್ಪು... ನನ್ನದೇ ತಪ್ಪು ಎಂದು ಕ್ಷಮಾಪಣೆ ಕೇಳಿ ಒಬ್ಬರಿಗೊಬ್ಬರು ಹಸ್ತಲಾಘವ ನೀಡಿ ಹೊರಟುಹೋದರೆ ವೀಕ್ಷಕರು ನಿರಾಶೆ ಹೊಂದುತ್ತಾರೆ.
ಯಾರಾದರೂ ಹೊಸ ಮನೆ ಕಟ್ಟಿದರೆ ನಾವು ನೋಡುವುದಿಲ್ಲ. ಮುನಿಸಿಪಾಲಿಟಿಯವರು ಆ ಮನೆಯನ್ನು ಉರುಳಿಸುತ್ತಿದ್ದರೆ ನಿಂತು ನೋಡುತ್ತೇವೆ. ಅತ್ತೆ ಸೊಸೆಯನ್ನು ಹಿಂಸಿಸುವ ಸೀರಿಯಲ್ಲುಗಳು ಅದಕ್ಕೇ ಒಂದುಕಾಲದಲ್ಲಿ ಸೂಪರ್ಹಿಟ್. ಗಂಡ ಹೆಂಡತಿಯರ ಪರಸ್ಪರ ಹಿಂಸೆಗಳು... ಸುಖವಾಗಿ ಸಂಸಾರ ಮಾಡುತ್ತಿರುವ ಮಹಿಳೆಯ ಬಾಳಿನಲ್ಲಿ ಹನ್ನೆರಡು ವರ್ಷಗಳ ಹಿಂದೆ ಸತ್ತುಹೋದ ಪತಿ ಮತ್ತೆ ಬರುವುದು, ಅದನ್ನು ಪ್ರೇಕ್ಷಕರು ಡಿನ್ನರ್ ಉಣ್ಣುತ್ತಾ ಆನಂದಿಸುವುದು... ಆ ವಿಧವಾಗಿ ಪ್ರತಿ ಮನುಷ್ಯನಲ್ಲಿಯೂ ಒಂದು ಸ್ಯಾಡಿಸ್ಟು ಬಚ್ಚಿಟ್ಟುಕೊಂಡಿರುತ್ತಾನೆ. ಇಲ್ಲದಿದ್ದಿರೆ ರ್ಯಾಗಿಂಗ್, ರಗ್ಬೀ, ಕೋಳಿಜಗಳದ ಪಂದ್ಯಗಳಿಗೆ ಇಷ್ಟು ಜನಪ್ರಿಯತೆ ಸಿಕ್ಕಿರುತ್ತಿರಲಿಲ್ಲ. ?
(ಮುಂದುವರಿಯುವುದು)
ಯಂಡಮೂರಿ ವೀರೇಂದ್ರನಾಥ್
ಕನ್ನಡಕ್ಕೆ:
ಯತಿರಾಜ್ ವೀರಾಂಬುಧಿ
Advertisement